ಪುಟ:ಕ್ರಾಂತಿ ಕಲ್ಯಾಣ.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೪

ಕ್ರಾಂತಿ ಕಲ್ಯಾಣ

ಕುಹಕದ ಕಿರುನಗೆ ಮೂಡಿತು. ಮಂಚಣ, ಬೆರಗುವಡೆದು ಸಂದೇಹದಿಂದ ನೋಡುತ್ತಿದ್ದನು. ನಿರ್ಲಿಪ್ತನಂತೆ ಕುಳಿತಿದ್ದ ರುದ್ರಭಟ್ಟನ ದೃಷ್ಟಿ, ವಾತಾಯನದಲ್ಲಿ ನುಸುಳಿ ದೂರಗಗನದಲ್ಲಿ ಕಾಣದ ಏನನ್ನೋ ಹುಡುಕುತ್ತಿತ್ತು.

ತನ್ನ ಪ್ರವೇಶದಿಂದ ನ್ಯಾಯಾಧೀಶರಲ್ಲಾದ ಈ ವಿಭಿನ್ನ ಪ್ರತಿಕ್ರಿಯೆಯನ್ನು ಗಮನಿಸಿ ಮಧುವರಸನು ನ್ಯಾಯಪೀಠಕ್ಕೆ ಗಂಭೀರವಾಗಿ ನಮಸ್ಕರಿಸಿದನು.

ಎದುರಿಗೆ ನಿಂತ ವ್ಯಕ್ತಿ ಮಧುವರಸನೆಂದು ತಿಳಿದಾಗ ಮಂಚಣನಿಗೆ ಹಿಡಿಸಲಾರದಷ್ಟು ಕೋಪ ಬಂದಿತು. ಹವಿಯುಂಡ ಅಗ್ನಿಯಂತೆ ಅವನು ಸಿಡಿದೆದ್ದು ಬಿರುದನಿಯಿಂದ, "ಆಪಾದಿತನ ಕೈಕಾಲುಗಳೀಗೆ ಕೋಳ ಹಾಕಲು ಯಾರು ಆಜ್ಞೆ ಮಾಡಿದವವರು? ಕೂಡಲೆ ಅದನ್ನು ತೆಗೆಯಿರಿ. ಕುಳಿತುಕೊಳ್ಳಲು ಪೀಠ ತಂದು ಹಾಕಿ," ಎಂದು ಗಜರಿದನು.

ರಾಜಭಟರು ಭಯಗ್ರಸ್ತರಾಗಿ ಕ್ರಮಿತನ ಮುಖ ನೋಡಿದರು. ಕ್ರಮಿತನು ಭಟರ ಮೇಲೆ ಭರವಸೆಯ ದೃಷ್ಟಿ ಬೀರಿ, ಮಂಚಣನ ಕಡೆ ತಿರುಗಿ,

"ಧರ್ಮಾಧಿಕರಣದ ನಿಬಂಧನೆಯಂತೆ ಎಲ್ಲವೂ ನಡೆದಿದೆ, ಮಂಚಣ ನಾಯಕರೆ ಅಪರಾಧಿಯ ಸುರಕ್ಷಣೆಗಾಗಿ ಕೋಳ ಹಾಕುವುದು ಅಗತ್ಯವಾಯಿತು. ನೀವು ಕೋಪ ಮಾಡುವ ಕಾರಣವಿಲ್ಲ." ಎಂದು ಹೇಳಿದನು.

"ಆಪಾದನೆ ಸ್ಥಿರವಾಗುವವರೆಗೆ ಮಧುವರಸರು ಅಪರಾಧಿಯಲ್ಲ. ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದು ದೇಶಕ್ಕೆ, ಪ್ರಜೆಗಳಿಗೆ ಪ್ರಶಂಸನೀಯ ಸೇವೆ ಸಲ್ಲಿಸಿದ ಮಧುವರಸರನ್ನು ಗೌರವದಿಂದ ನಡೆಸಿಕೊಳ್ಳುವುದು ನ್ಯಾಯಪೀಠದ ಕರ್ತವ್ಯ. ಇವರ ಕೋಳಗಳನ್ನು ತೆಗೆಸಿಹಾಕಲು ಮೊದಲು ಆಜ್ಞೆಮಾಡಿರಿ,"

-ಮಂಚಣನ ಕಂಠ ಈ ಬಾರಿಗೆ ಮತ್ತಷ್ಟು ಬಿರುಸಾಯಿತು.

"ಪದವಿ ಗೌರವಗಳನ್ನು ಪರಿಗಣಿಸದೆ, ವಿಚಾರಣಾಧೀನರಾದವರನ್ನೆಲ್ಲ ಸಮಾನ ದೃಷ್ಟಿಯಿಂದ ನೋಡುವುದು ನ್ಯಾಯಪೀಠದ ಮೊದಲ ನಿಯಮ. ನಾನು ಅದರಂತೆ ಆಜ್ಞೆಮಾಡಿದ್ದೇನೆ. ಕೋಳಗಳನ್ನು ತೆಗೆಸುವುದಿಲ್ಲ." –ಕ್ರಮಿತನು ಅದೇ ದನಿಯಲ್ಲಿ ಉತ್ತರಿಸಿದನು.

"ಕ್ಷಮಿತನು ಮಾಡಿದುದು ಸರಿಯಾಗಿದೆ, ಮಂಚಣ ನಾಯಕರೆ, ಈ ಅಲ್ಪ ವಿಚಾರಕ್ಕಾಗಿ ನಮ್ಮಲ್ಲಿ ವಿರಸವೇಕೆ?" -ಎಂದು ರುದ್ರಭಟ್ಟನು ಮಧ್ಯಸ್ಥಿಕೆಯ ಸೋಗು ಹಾಕಿದನು.

'ನ್ಯಾಯಪೀಠದ ಮೂವರಲ್ಲಿ ಇಬ್ಬರು ಒಂದಾಗಿದ್ದಾರೆ. ನಾನೊಬ್ಬನೆ ಬೇರೆ' ಎಂದು ಮಂಚಣನಿಗೆ ಅರಿವಾಯಿತು. ಆದರೂ ನಿರ್ಧಾರದಿಂದ ಚಲಿಸದೆ ಅವನು,