ಪುಟ:ಕ್ರಾಂತಿ ಕಲ್ಯಾಣ.pdf/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೧೯

ಸಮಾಧಾನಕರವಾಗಿ ಕಂಡಿತು.

ಪ್ರತಿವಾದದ ಸ್ಪಷ್ಟತೆ ಸಂಯಮಗಳಿಂದ ನಾರಣಕ್ರಮಿತನು ಮಾತ್ರವೇ ಅಸಂತುಷ್ಟನಾದನು. ಮಧುವರಸನನ್ನು ಕೆಣಕಿ ಕಿಡಿನುಡಿಯಾಡಿಸುವ ಉದ್ದೇಶದಿಂದ ಅವನು, ದನಿಯನ್ನು ಮತ್ತಷ್ಟು ಬಿರುಸಾಗಿಸಿ,

"ಸನಾತನವಾದ ವೈದಿಕ ಧರ್ಮವನ್ನು ಅಪಹಾಸ್ಯಕ್ಕೆ ಗುರಿಪಡಿಸಿ, ಸಮಾಜದಲ್ಲಿ ಕ್ರಾಂತಿಭಾವನೆಯನ್ನು ಹರಡುವುದು, ದೇಶದಲ್ಲಿ ಅಶಾಂತಿ ಅಂತರ್ಯುದ್ಧಗಳಿಗೆ ಎಡೆಮಾಡಿಕೊಡುವುದು, ಈ ದುರುದ್ದೇಶಗಳಿಂದ ಶರಣರು ವರ್ಣವಿರೋಧ ಚಳುವಳಿಯನ್ನು ಪ್ರಾರಂಭಿಸಿದ್ದಾರೆ. ಶರಣರ ಪ್ರೇರಣೆ ಪ್ರೋತ್ಸಾಹಗಳಿಂದ ನೀವು ವರ್ಣ ಸಂಕರದ ಮಹಾಫೋರಕ್ಕೆ ತೊಡಗಿದ್ದೀರಿ. ನಿಮ್ಮ ಪುತ್ರಿಯ ವಿವಾಹವನ್ನು ಚಾಲುಕ್ಯರಾಜ್ಯಕ್ಕೆ ಹತ್ತಿದ ಮಹಾಕಲಂಕವೆಂದು ತಿಳಿಯುತ್ತದೆ ವೈದಿಕ ಧರ್ಮ. ಈಗಲೂ ಸಮಯವಿದೆ, ಧರ್ಮವಿರುದ್ಧ ಈ ವಿವಾಹವನ್ನು ಶರಣರ ಒತ್ತಾಯದಿಂದ ನಡೆದುದೆಂದು ನಿರಾಕರಿಸಿ, ಮಗಳನ್ನು ಮನೆಗೆ ಕರೆಸಿಕೊಂಡು ಪ್ರಾಯಶ್ಚಿತ್ತ ಮಾಡಿ, ನೀವು ಪುನಃ ವೈದಿಕ ಧರ್ಮವನ್ನು ಪರಿಗ್ರಹಿಸಿದರೆ ಧರ್ಮಾಧಿಕರಣ ನಿಮ್ಮ ಅಪರಾಧವನ್ನು ಕ್ಷಮಿಸುವುದು," ಎಂದು ಹೇಳಿದನು.

ತನ್ನನ್ನು ಸಿಟ್ಟಿಗೆಬ್ಬಿಸುವುದು, ಇಲ್ಲವೆ ಆಸೆ ತೋರಿಸಿ ಧರ್ಮಭ್ರಷ್ಟನನ್ನಾಗಿ ಮಾಡುವುದು ಕ್ರಮಿತನ ಉದ್ದೇಶವೆಂದು ತಿಳಿದು ಮಧುವರಸನು ಇಮ್ಮಡಿ ವಿನಯದಿಂದ ಹೇಳಿದನು

"ಈ ವಿಚಿತ್ರ ಸಲಹೆಯನ್ನು ನನ್ನ ಮುಂದಿಡುವುದರಲ್ಲಿ ಧರ್ಮಾಧಿಕರಣದ ಉದ್ದೇಶವೇನು? ಆಸೆ ತೋರಿಸಿ ಧರ್ಮಭ್ರಷ್ಟನನ್ನಾಗಿ ಮಾಡಲು ಹವಣಿಸುತ್ತಿದೆಯೇ ನ್ಯಾಯಪೀಠ? ಈ ಪ್ರಶ್ನೆಗಳಿಗೆ ಉತ್ತರ ಸ್ಪಷ್ಟವಾಗಿದ್ದರೂ ಕಂಠೋಕ್ತವಾಗಿ ಅದನ್ನು ಹೇಳಲು ನಾನು ಸಿದ್ಧನಾಗಿಲ್ಲ. ಮತಧರ್ಮ ವಿಶ್ವಾಸಗಳು ಆತ್ಮನಿಗೆ ಸಂಬಂಧಿಸಿದ ವಿಚಾರಗಳು; ಬೇಕಾದಾಗ ಧರಿಸಿ, ಬೇಡದಿದ್ದಾಗ ತೆಗೆದುಹಾಕುವ ಉಡಿಗೆ ತೊಡಿಗೆಗಳಲ್ಲ. ವರ್ಣಾಶ್ರಮ ಜಾತಿ ಪಂಥಗಳು ಸಮಾಜ ಘಾತಕವೆಂಬ ದೃಢ ಸಂಕಲ್ಪದಿಂದ ತಾನು ವೈದಿಕ ಧರ್ಮವನ್ನು ತ್ಯಜಿಸಿ, ಶರಣ ಧರ್ಮವನ್ನು ಪರಿಗ್ರಹಿಸಿದೆ. ಆತ್ಮೋದ್ಧಾರಕ್ಕಾಗಿ ಅನುಸರಿಸಿದ ಈ ಮಾರ್ಗ, ನನ್ನಲ್ಲಿ ಅತಿಶಯ ಪರಿವರ್ತನೆಯನ್ನುಂಟುಮಾಡಿದೆ. ಮನಃಶಾಂತಿ ಸದಾಚಾರಗಳನ್ನು ತಂದು ಕೊಟ್ಟಿದೆ. ಈಗ ನಾನದನ್ನು ಬಿಡುವುದು ಸಾಧ್ಯವೆ? ಕುಂಬಾರನ ಕೌಶಲದಿಂದ ಮಣ್ಣು ಮಡಕೆಯಾದ ಮೇಲೆ, ಕ್ರಿಯೆಯಳಿದು ಮರಳಿ ಮಣ್ಣಾಗುವುದೇ? ನಕ್ಷತ್ರ ಯೋಗದಿಂದ ನೀರಹನಿ ಮುತ್ತಾದ ಬಳಿಕ ಕ್ರಿಯೆಯಳಿದು ಮರಳಿ ನೀರಾಗುವುದೇ?