ಪುಟ:ಕ್ರಾಂತಿ ಕಲ್ಯಾಣ.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೨

ಕ್ರಾಂತಿ ಕಲ್ಯಾಣ

ಧರಿಸಿರುವರೆಂಬುದನ್ನು ನಾನು ಬಲ್ಲೆ. ನ್ಯಾಯಪೀಠದಲ್ಲಿ ಇರುವಷ್ಟು ಹೊತ್ತಾದರೂ ಅದನ್ನು ದಯಮಾಡಿ ತೆಗೆದಿಟ್ಟರೆ ಒಳ್ಳೆಯದು" ಎಂದು ನಗೆಯಾಡಿದನು.

ಕ್ರಮಿತನು ದರ್ಪದಿಂದ ತಲೆಯಾಡಿಸಿ ಹರಳಯ್ಯನನ್ನು ಕರೆತರುವಂತೆ ಭಟರಿಗೆ ಆಜ್ಞೆ ಮಾಡಿದನು.

ಹರಳಯ್ಯನ ಬಂಧನ ಕ್ರಮಿತನು ನಿರೀಕ್ಷಿಸಿದ್ದಷ್ಟು ಸುಲಭವಾಗಿ ನಡೆದಿರಲಿಲ್ಲ. ಎಲ್ಲ ಕಾಲಗಳ, ಎಲ್ಲ ದೇಶಗಳ, ರಾಜಕರ್ಮಚಾರಿಗಳಂತೆ ಕ್ರಮಿತನ ಭಟರು ದುಡುಕು ದರ್ಪ ದುರಾಗ್ರಹಗಳಿಂದ ಕರ್ಮಾಗಾರವನ್ನು ಪ್ರವೇಶಿಸಿ, ಗದ್ದಿಗೆಯ ಮೇಲೆ ಕುಳಿತಿದ್ದ ವೃದ್ಧ ಹರಳಯ್ಯನನ್ನು ಹಿಡಿದೆಳೆದು ಹೆಡೆಮುರಿಕಟ್ಟಲು ತೊಡಗಿದಾಗ ಕೆಲಸಗಾರರು ಕೆರಳಿ, ಚೂರಿ ಕೊಡತಿ ಸುತ್ತಿಗೆ ಮೊದಲಾದ ಉಪಕರಣಗಳನ್ನು ಹಿಡಿದು ಭಟರ ಮೇಲೆ ಬಿದ್ದರು.

ಹೊಡೆದಾಟ ಮೊದಲಾಗುವಷ್ಟರಲ್ಲಿ ಹೊರಗೆ ಹೋಗಿದ್ದ ಶೀಲವಂತ ಅಲ್ಲಿಗೆ ಬಂದು, ಕೆಲಸಗಾರರಿಗೆ ಅವರವರ ಸ್ಥಳಗಳಿಗೆ ಹೋಗಿ ಕುಳಿತುಕೊಳ್ಳುವಂತೆ ಆಜ್ಞೆ ಮಾಡಿ, "ನನ್ನ ತಂದೆಯವರನ್ನು ಬಂಧಿಸಿದ ಕಾರಣವೇನು?" ಎಂದು ಭಟರ ಸಂಗಡಿದ್ದ ಕರ್ಮಚಾರಿಯನ್ನು ಕೇಳಿದನು.

"ಧರ್ಮಾಧಿಕರಣದ ಆಜ್ಞೆಯಂತೆ ಬಂಧಿಸುತ್ತೇವೆ," ಎಂದು ಕರ್ಮಚಾರಿ ಕ್ರಮಿತನ ನಿರೂಪವನ್ನು ತೋರಿಸಿದನು.

ಕೆಲಸಗಾರರ ದುಡಿಕಿಗಾಗಿ ಶೀಲವಂತ ಕರ್ಮಚಾರಿಯ ಕ್ಷಮೆ ಕೇಳಬೇಕಾಯಿತು. ವಿಷಯವೇನೆಂಬುದನ್ನು ತಿಳಿದಾಗ ಹರಳಯ್ಯ, "ಇದು ರಾಜ ನಿರೂಪವಲ್ಲ ಶೀಲವಂತ, ಶಿವನ ಕರೆ. ನಾನು ಇದಕ್ಕಾಗಿ ಇಷ್ಟು ದಿನದಿಂದ ಕಾಯುತ್ತಿದ್ದೆ," ಎಂದು ಹೇಳಿ ಆಜ್ಞಾಪತ್ರವನ್ನು ತಲೆಗೊತ್ತಿಕೊಂಡು ಕರ್ಮಚಾರಿಗೆ ಹಿಂದಿರುಗಿ ಕೊಟ್ಟನು.

ಕೀಳುಜಾತಿಯವನೆಂದು ಪರಿಗಣಿಸಲ್ಪಟ್ಟಿದ್ದವನ ಸಜ್ಜನಿಕೆಯನ್ನು ಕಂಡು ಕರ್ಮಚಾರಿಯ ಮನಸ್ಸು ಮಿಡಿಯಿತು. "ನಾನು ಆಜ್ಞೆಯಂತೆ ನಡೆಯಬೇಕಾಗಿದೆ. ನಿಮಗೆ ತೊಂದರೆಯಾದದ್ದಕ್ಕೆ ಕ್ಷಮಿಸಿ," ಎಂದು ಹೇಳಿ ಭಟರಿಗೆ ಸರಿದು ನಿಲ್ಲುವಂತೆ ಸನ್ನೆಮಾಡಿದನು.

ಹೆಡೆಮುರಿಕಟ್ಟಿ ಬೀದಿಯಲ್ಲಿ ನಡೆಸಿಕೊಂಡು ಬರಬೇಕೆಂದು ಧರ್ಮಾಧಿಕರಣದ ಕಾರ್ಯಕರ್ತನು ಹೇಳಿದ್ದುದನ್ನು ಕರ್ಮಚಾರಿ ಮರೆತನು. ನಗರದಿಂದ ಗಾಡಿಯೊಂದನ್ನು ತರಿಸಿ ಅದರಲ್ಲಿ ಹರಳಯ್ಯನನ್ನು ಸೆರೆಮನೆಗೆ ಕರೆದುಕೊಂಡು ಹೋದನು. ನಡೆಯಲಾರದ ವೃದ್ಧನೆಂಬ ಕಾರಣದಿಂದ ಹರಳಯ್ಯನಿಗೆ ಕೈಕೋಳಗಳನ್ನು ಮಾತ್ರ ತೊಡಿಸುವಂತೆ ಸೆರೆಮನೆಯ ಅಧಿಕಾರಿ ಆಜ್ಞೆ ಮಾಡಿದನು.