ಪುಟ:ಕ್ರಾಂತಿ ಕಲ್ಯಾಣ.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ಕ್ರಾಂತಿ ಕಲ್ಯಾಣ

ಅಗ್ಗಳನ ಮುಖ ಮಿದುನಗೆಯಿಂದ ಕ್ಷಣಕಾಲ ಅರಳಿತು. ಅವನು ಹೇಳಿದನು : “ಹೆಣ್ಣಿನ ಕೈಗೆ ಅಧಿಕಾರ ಬಂದಾಗ, ಪುರುಷನ ಸುಖಕ್ಕಾಗಿ ಪುರುಷರು ರಚಿಸಿಕೊಂಡ ಏಕಮುಖವಾದ ಧರ್ಮಶಾಸ್ತ್ರ ನಿಬಂಧನೆಗಳು ಮೂಲೆ ಗುಂಪಾಗುವುವು, ನಾರಣ ಕ್ರಮಿತರೆ. ಆಗ ಅಧಿಕಾರ ನಡೆಸುವುದು ಧರ್ಮಸೂತ್ರಗಳಲ್ಲ, ಅವುಗಳಿಗಿಂತ ಎಷ್ಟೋ ಪ್ರಭಾವಶಾಲಿಯಾದ ಮರ್ಮಸೂತ್ರಗಳು. ಯವನ ಇತಿಹಾಸದಲ್ಲಿ ನಾನು ಅಂತಹ ರಾಣಿಯರ ಕಥೆಗಳನ್ನು ಓದಿದ್ದೇನೆ.”

“ಯವನರಲ್ಲಿ ಅದು ಸಾಧ್ಯವಿರಬಹುದು. ಧರ್ಮಕ್ಷೇತ್ರವೆಂದು ಹೆಸರಾದ ಭಾರತವರ್ಷದಲ್ಲಿ ಅಂತಹ ರಾಣಿಯರು ಹಿಂದೆ ಯಾವಾಗಲೂ ಹುಟ್ಟಿಲ್ಲ. ಮುಂದೆ ಹುಟ್ಟುವುದಿಲ್ಲ,” ಎಂದು ಕ್ರಮಿತನು ಉತ್ತರ ಕೊಟ್ಟನು.

“ಏಕೆ ಹುಟ್ಟುವುದಿಲ್ಲ? ಕಾಶ್ಮೀರದ ರಾಣಿ ದಿದ್ದಾ ಸ್ವೇಚ್ಛಾಚಾರದ ಜ್ವಲಂತ ನಿದರ್ಶನವಾಗಿ ಕಲ್ಹಣನ 'ರಾಜತರಂಗಿಣಿ'ಯನ್ನು ಬೆಳಗಿದ್ದಾಳೆ. ನಮ್ಮರಾಜಾಂತಃಪುರಗಳ ರಹಸ್ಯ ಇತಿಹಾಸಗಳನ್ನು ಹುಡುಕಿದರೆ ಅಂತಹ ಎಷ್ಟು ಮಂದಿ ದಿದ್ದೆಯರು ಸಿಕ್ಕುವರೋ !” ಎಂದನು ಅಗ್ಗಳ.

ಕ್ರಮಿತನು ತಾನು ಧರ್ಮಾಧಿಕರಣದ ಹಿರಿಯ ಅಧಿಕಾರಿ ಎಂಬುದನ್ನು ಮರೆತು ಕುತೂಹಲದಿಂದ, "ಕಾಶ್ಮೀರದ ಆ ರಾಣಿಯ ವಿಚಾರವೇನು?” ಎಂದು ಕೇಳಿದನು.

ವ್ಯಂಗ್ಯದ ನಗೆ ಹಾರಿಸಿ ಅಗ್ಗಳದೇವನೆಂದನು : “ಪ್ರೇಮತತ್ವದ ಪ್ರಯೋಗ ಶಾಲೆಯನ್ನೇ ಪ್ರಾರಂಭಿಸಿದ ದಿಟ್ಟ ಹೆಣ್ಣು ಅವಳು. ಮಂತ್ರಿಗಳು, ಸೈನ್ಯಾಧಿಕಾರಿಗಳು, ಸಾಮಂತರು, ಸಾಮಾನ್ಯರು, ಎಲ್ಲರೂ ಅವಳ ಪ್ರಯೋಗಶಾಲೆಯ ಮೆಟ್ಟಿಲು ಹತ್ತಿಬಂದವರೆ. ಕೊನೆಗೆ ತನ್ನ ವೃದ್ದ ವಯಸ್ಸಿನಲ್ಲಿ ಆ ಮಹಾಸತಿ, ತನ್ನ ಬಂಧು ವರ್ಗದ ಇಬ್ಬರು ಬಾಲಕರನ್ನು ತನ್ನ ಕಾಮಕ್ಕೆ ಬಲಿಕೊಟ್ಟಳೆಂದು ಕಲ್ಹಣ ಹೇಳುತ್ತಾನೆ.”

“ಅಂತಹ ಜಗಪಾರೆಯನ್ನು ನೀವು ಮಹಾಸತಿಯೆಂದು ಕರೆಯುವಿರಾ?” ಕ್ರಮಿತನು ಆಕ್ಷೇಪಿಸಿದನು.

ಅಗ್ಗಳನು ನಸುನಕ್ಕು ನುಡಿದನು: “ಬಿಜ್ಜಳ ಮಹಾರಾಜರ ಧರ್ಮಾಧಿಕಾರಿ ರಾಜಪುರೋಹಿತರಿಗೆ ತಕ್ಕಂತಿದೆ ನಿಮ್ಮ ಆಕ್ಷೇಪ. ಅಶೋಕ ಚಕ್ರವರ್ತಿಗೆ, 'ದೇವಾನಾಂಪ್ರಿಯ' ಎಂಬ ಬಿರುದಿದ್ದಿತು. ದೇವತೆಗಳಿಗೆ ಪ್ರಿಯರೆಂದರೆ ತಿಳಿಗೇಡಿ ಹುಚ್ಚರು ಎಂದು ಪಂಡಿತರು ಅದಕ್ಕೆ ವ್ಯಾಖ್ಯಾನ ಮಾಡಿದರು. ಆ ವಿಶಿಷ್ಟ ಸಂಪ್ರದಾಯಕ್ಕೆ ಸೇರಿದವರಲ್ಲವೆ ನೀವು !”

ಕ್ರಮಿತನು ತಿಳಿದನು, ಕುತರ್ಕ ಕುಚೋದ್ಯಗಳಲ್ಲಿ ಅಗ್ಗಳನು ತನ್ನನ್ನು