ಪುಟ:ಕ್ರಾಂತಿ ಕಲ್ಯಾಣ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪

ಕ್ರಾಂತಿ ಕಲ್ಯಾಣ

ಶ್ಲೀಲ ಅಶ್ಲೀಲಗಳ ಉಲ್ಲೇಖನದಿಂದ ನರ್ತಕಿಯ ಕೆನ್ನೆಗಳು ಕೆಂಪಾದವು. ಅದನ್ನೇ ನಿರೀಕ್ಷಿಸುತ್ತಿದ್ದ ಬಿಜ್ಜಳನು ಮತ್ತೊಮ್ಮೆ ಅವಳ ಕೆನ್ನೆಯನ್ನು ಚಿವುಟಿದನು.

"ಒಡೆಯರ ಸೇವಿಕೆ ನಾನು," ಎಂದು ಹೇಳಿ ನರ್ತಕಿ ಹಿಂದಕ್ಕೆ ಸರಿದಳು, ಪಾರಿತೋಷಕವಾಗಿ ಪಡೆದ ಕುಸುರಿಯ ಸಣ್ಣ ಚೀಲವನ್ನು ಝಣ! ಝಣ! ಆಡಿಸುತ್ತ.

ಒಂದು ಜಾತಿಯ ಪುರುಷರ ಜೀವನ ಸಂಧ್ಯೆಗೆ ಸಹಜವಾದ ವಾಕ್ಚಾಪಲ್ಯವನ್ನು ಮುಗಿಸಿ ಬಿಜ್ಜಳನು ಹಿಂದೆ ತಿರುಗಿದಾಗ ರಾಜಪುರೋಹಿತ ನಾರಣಕ್ರಮಿತನ ಸಂಗಡ ಅಪರಿಚಿತ ಪುರುಷನೊಬ್ಬನೂ ನಿಂತಿರುವುದನ್ನು ಕಂಡನು. ಸ್ವಾಗತದ ಮಿದುನಗೆಯಿಂದ ಅವನ ಮುಖ ಅರಳಿತು.

"ಕವೀಂದ್ರ ಅಗ್ಗಳದೇವರಸರನ್ನು ಪ್ರಭುಗಳ ಸಂದರ್ಶನಕ್ಕಾಗಿ ಕರೆತಂದಿದ್ದೇನೆ" ಕ್ರಮಿತನು ಕೈ ಜೋಡಿಸಿ ಬಿನ್ನವಿಸಿಕೊಂಡನು.

ಕೈಯೆತ್ತಿ ನಮಸ್ಕಾರ ಮಾಡಿದ ಅಗ್ಗಳನನ್ನು ಅಭಿವಂದಿಸಿ ಬಿಜ್ಜಳನು.

"ರಾಜಪುರೋಹಿತರಿಂದ ನಿಮ್ಮ ಪ್ರಶಂಸೆಯ ನುಡಿಗಳನ್ನು ಕೇಳಿದ್ದೇನೆ, ಅಗ್ಗಳದೇವ, ದೇವಗಿರಿಯ ಯಾತ್ರೆಯಲ್ಲಿ ನಿಮ್ಮಿಂದ ದೊರಕಿದ ಸಹಾನುಭೂತಿಗಾಗಿ ಕ್ರಮಿತರು ಯಾವಾಗಲೂ ಕೃತಜ್ಞರು," ಎಂದನು.

ಚಾಲುಕ್ಯ ಮಹಾರಾಣಿಯ ಮನೆಹೆಗ್ಗಡೆಯಾಗಿ ಅಗ್ಗಳನು ಅನೇಕ ದಿನಗಳು ಕಲ್ಯಾಣದಲ್ಲಿದ್ದರೂ ಬಿಜ್ಜಳನನ್ನು ನೋಡುವ ಅವಶ್ಯಕತೆ ಉಂಟಾಗಿರಲಿಲ್ಲ. ಹೆಗ್ಗಡೆ ಕಾರ್ಯಕರ್ತರ ಮುಖಾಂತರ ವ್ಯವಹಾರ ನಡೆಸಿದ್ದನು. ಈಗ ಅನಿರೀಕ್ಷಿತವಾಗಿ ಸಂದರ್ಶನಾವಕಾಶ ದೊರಕಿದುದು ಕ್ರಮಿತನ ಚತುರತೆಯಿಂದಲೋ, ಅಥವಾ ಅದಕ್ಕೆ ಬೇರೆ ಯಾವುದಾದರೂ ರಹಸ್ಯ ಉದ್ದೇಶವಿದೆಯೋ ಎಂದು ಅಗ್ಗಳನು ಯೋಚಿಸಿದನು.

ಆಗ ಬಿಜ್ಜಳನಿಗೆ ಅರವತ್ತು ವರ್ಷಗಳು ಸಂದಿದ್ದರೂ ವಾರ್ಧಿಕ್ಯದ ಲಕ್ಷಣಗಳಿರಲಿಲ್ಲ. ಎತ್ತರವಾದ ದೇಹ, ವಿಶಾಲವಾದ ಹಣೆ, ಹೊಳೆಯುವ ಕಣ್ಣುಗಳು ಹುರಿಮೀಸೆ, ಧೈರ್‍ಯ ಸಾಹಸ ಸ್ಥಿರತೆಯ ಸನ್ನೆಗೋಲುಗಳಂತೆ ನೀಳವಾದ ತೋಳುಗಳು. ಎಲ್ಲರ ಕಣ್ಣುಗಳನ್ನು ಅವನ ಕಡೆಗೆ ಆಕರ್ಷಿಸುತ್ತಿದ್ದವು. ಭುಜಬಲ ಚಕ್ರವರ್ತಿ, ನಿಶ್ಯಂಕಮಲ್ಲ, ಶನಿವಾರಸಿದ್ದಿ-ಈ ಬಿರುದುಗಳು ಅವನಿಗಾಗಿಯೇ ರಚಿತವಾದಂತೆ ಭಾವುಕರು ತಿಳಿದಿದ್ದರು.

ಬಿಜ್ಜಳನ ತುಟಿಗಳು ಮಾತ್ರ ಒಮ್ಮೊಮ್ಮೆ, ಸಂಯತ ಕೋಪದ ಆವೇಗ ಅಸಹನೆಗಳಿಂದ ಮಿಡಿದು, ಮುಡಿಕಟ್ಟಿ, ತನ್ನ ಸಹಜಸರಳತೆಯನ್ನು