ಪುಟ:ಕ್ರಾಂತಿ ಕಲ್ಯಾಣ.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೧೫

ಕಳೆದುಕೊಳ್ಳುತ್ತಿದ್ದವು. ಅಂತಹ ಸಮಯದಲ್ಲಿ ಮಾತುಕಥೆಗಳ ರೀತಿ ಎಂದಿನಂತಿದ್ದರೂ ಕಾರ್ಯ ವಿಧಾನ ವಕ್ರಗತಿಗೆ ತಿರುಗುತ್ತಿತ್ತು. ಪ್ರಭುಚಿತ್ರ ಪರಿವರ್ತನೆಯ ಈ ಸಂಕೇತವನ್ನು ತಿಳಿದಿದ್ದ ಸಾಮಾಜಿಕರು ಆ ಸಮಯದಲ್ಲಿ ಎಚ್ಚರದಿಂದ ನಡೆದುಕೊಳ್ಳುತ್ತಿದ್ದರು. ಸಭೆ ಉತ್ಸವಗಳ ಹೊರತಾಗಿ ಉಳಿದಕಾಲದಲ್ಲಿ ಬಿಜ್ಜಳನು ಧರಿಸುತ್ತಿದ್ದ ರಾಜವೈಭವಗಳಿಲ್ಲದ ಯೋಧನ ಉಡುಪುಗಳು ಅವನ ಗಂಭೀರ ವರ್ತನೆಗೆ ಮೆರಗುಕೊಟ್ಟಿದ್ದವು.

ಉಪಚಾರದ ಮಾತುಕಥೆ ಮುಗಿಯುತ್ತಿದ್ದಂತೆ ನಾಟಕಶಾಲೆ ಬರಿದಾಯಿತು. ಪ್ರಭುವಿನ ಇಂಗಿತವರಿತ ಸಮುಖ ಕಾರ್ಯದರ್ಶಿ ಪಸಾಯಿತರು ನರ್ತಕಿಯರನ್ನು ಬೀಳ್ಕೊಡುವ ನೆವದಲ್ಲಿ ಹೊರಗೆ ಹೋದರು.

ಬಿಜ್ಜಳನು ಕ್ರಮಿತನ ಕಡೆ ತಿರುಗಿ "ನಾಟಕಶಾಲೆಯಲ್ಲಿ ಮಂತ್ರಾಲೋಚನೆ ನಡೆಸುವುದು ನಿಮ್ಮ ಮಿತ್ರರಿಗೆ ಒಪ್ಪಿಗೆಯೇ?" ಎಂದನು.

"ಪ್ರಭುಗಳ ಇಚ್ಚೆಯೇ ನನ್ನ ಇಚ್ಚೆ"-ಅಗ್ಗಳನು ತಲೆಬಾಗಿ ವಂದಿಸಿ ಉತ್ತರಕೊಟ್ಟನು. ಅವನ ಮನೋಭೂಮಿಯಲ್ಲಿ ಬಿಜ್ಜಳನ ಬಗೆಗೆ ಚಿತ್ರವಿಚಿತ್ರ ಭಾವನೆಗಳು ಮಿಂಚಿ ಮರೆಯಾದವು.

.......ಬಯಲಲ್ಲಿ ಸಭೆ ಕರೆದು ಬಸವಣ್ಣನವರನ್ನು ಕಲ್ಯಾಣದಿಂದ ಹೊರದೂಡಿದ ಈ ರಾಜ್ಯಾಪಹಾರಿ ನಿರಂಕುಶ ಅರಸು, ನಾಟಕಶಾಲೆಯಲ್ಲಿ ಮಂತ್ರಾಲೋಚನೆ ನಡೆಸಿ ನನ್ನನ್ನು ಏನು ಮಾಡಲು ಹವಣಿಸಿದ್ದಾನೆ? ಕುಮಾರ ಸೋಮೇಶ್ವರನ ಪಟ್ಟಾಭಿಷೇಕಕ್ಕೆ ಚಾಲುಕ್ಯರಾಣಿ ಕಾಮೇಶ್ವರೀ ದೇವಿಯನ್ನು ಬರಮಾಡಿಕೊಳ್ಳುವ ಉದ್ದೇಶದಿಂದ ವಿನಯಪ್ರದರ್ಶನದ ಮಾಯಾನಾಟಕ ನಡೆಯುತ್ತಿದೆಯೇ? ಈ ಸಂಚು ಸಂಧಾನಗಳಲ್ಲಿ ನಾರಣಕ್ರಮಿತನ ಪಾತ್ರವೇನು? ಕುಮಾರ ಪ್ರೇಮಾರ್ಣವನ ಭಾಗ್ಯತಾರೆ ಉದಯಿಸುತ್ತಿದೆಯೆ?..... ಈ ಪ್ರಶ್ನೆಗಳಿಗೆ ಸಂದಿಗ್ಧವಲ್ಲದ ಉತ್ತರ ಕೊಡುವುದು ತನ್ನ ಚತುರತೆಗೆ ಮೀರಿದ ಕಾರ್ಯವೆಂದು ಅಗ್ಗಳನ್ನು ತಿಳಿದನು.

ಕೆಲವು ಕ್ಷಣಗಳ ಅನಂತರ ಬಿಜ್ಜಳನು ಹೇಳಿದನು: "ಚಾಲುಕ್ಯ ಮಹಾರಾಣಿ ಕಾಮೇಶ್ವರೀದೇವಿಯವರು ಮಂಗಳವೇಡೆಗೆ ಬಂದಾಗ ಹಿಂದೆ ಯಾವಾಗಲೂ ಎಲ್ಲಿಯೂ ಯಾರಿಗೂ ದೊರಕದಿದ್ದಂತಹ ಅದ್ಭುತ ಸ್ವಾಗತಕ್ಕೆ ಏರ್ಪಡಿಸಬೇಕೆಂದು ನಮ್ಮ ಆಸೆ ಅಗ್ಗಳದೇವರಸರೆ. ಅದಕ್ಕಾಗಿ ಈಗಿನಿಂದ ನಾವು ಸಿದ್ಧಮಾಡಿಕೊಳ್ಳಬೇಕು. ಹೆಜ್ಜೆ ಹೆಜ್ಜೆಗೂ ನಿಮ್ಮ ಸಹಾಯ ಬೇಕಾಗುವುದು."

"ನಾನು ಸಿದ್ಧವಾಗಿದ್ದೇನೆ, ಆದರೆ... ಚಾಲುಕ್ಯ ಮಹಾರಾಣಿ ಕಾಮೇಶ್ವರೀ