ಪುಟ:ಕ್ರಾಂತಿ ಕಲ್ಯಾಣ.pdf/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೪

ಕ್ರಾಂತಿ ಕಲ್ಯಾಣ

ಆಕಸ್ಮಿಕವೇ? ಉದ್ದೇಶಪೂರ್ವಕವೇ? ಮಂಗಳವೇಡೆಯ ಅಗ್ನಿ ಅಪಘಾತವನ್ನು ಅವರಿನ್ನೂ ಮರೆತಿರಲಿಲ್ಲ.

***

ಮರುದಿನ ಮುಂಜಾವಿನಲ್ಲಿ ಸೆರೆಮನೆಯ ಬಿದಿರು ಮಂಚದ ಮೇಲೆ ಮಲಗಿದ್ದ ಮಧುವರಸನು ಎಚ್ಚೆತ್ತು ಕಣ್ಣೊರೆಸಿಕೊಂಡು, ಕೈಕಾಲುಗಳಿಗೆ ತೊಡಿಸಿದ್ದ ಸಂಕಲೆಗಳನ್ನು ಸರಿಸಿ ಕಷ್ಟದಿಂದ ಎದ್ದು ಕುಳಿತಾಗ ಕಾವಲು ಭಟ ಜವರಾಯ ಒಳಗೆ ಬಂದು ಎದುರಿಗೆ ನಿಂತನು.

ಕಳೆದ ನಾಲ್ಕು ವಾರಗಳ ಕಾರಾಗೃಹವಾಸದಿಂದ ಆ ವೃದ್ಧ ಭಟನೊಡನೆ ಮಧುವರಸನ ಸಂಬಂಧ ಹೆಚ್ಚು ನಿಕಟವಾಗಿತ್ತು. ಮೊದಲ ಕೆಲವು ದಿನಗಳೂ ಮಧುವರಸನು ಸೆರೆಮನೆಯ ಹೊರಗೆ ಏನು ನಡೆಯುತ್ತಿದೆಯೆಂಬುದನ್ನು ಅವನಿಂದ ತಿಳಿಯಲು ಪ್ರಯತ್ನಿಸಿ ನಿರಾಶನಾಗಿದ್ದನು. ಮಧುವರಸನ ಎಲ್ಲ ಪ್ರಶ್ನೆಗಳಿಗೆ ಜವರಾಯನದು ಒಂದೇ ಉತ್ತರ- "ಹೊರಗಿನ ಹುಚ್ಚು ಜಗತ್ತಿನ ವಿಚಾರ ನನಗೇನೂ ತಿಳಿಯದು, ಒಡೆಯರೆ," ಎಂದು.

ತನ್ನ ಸುದೀರ್ಘ ಜೀವನವನ್ನು ಸೆರೆಮನೆಯ ಕಾವಲುಗಾರನಾಗಿ ಕಳೆದಿದ್ದ ಜವರಾಯ ವಾಸ್ತವವಾಗಿ ಕಲ್ಯಾಣದ ಜನಜೀವನದೊಡನೆ ತನ್ನ ಎಲ್ಲ ಸಂಬಂಧಗಳನ್ನೂ ಕಳೆದುಕೊಂಡಿದ್ದನು. ಸೆರಮನೆಯ ನಿಯಮ ನಿಬಂಧನೆಗಳು, ದಿನಚರಿ ಕಾರ್ಯಕ್ರಮಗಳು ನಿರ್ಬಂಧ ಅನುರೋಧಗಳು, ಅವನ ವೈವಿಧ್ಯಹೀನ ಜೀವನದಲ್ಲಿ ಆದರ್ಶ ಸಾಧನೆಯ ಮೆಟ್ಟಲುಗಳಾಗಿದ್ದವು. ಚಾಲುಕ್ಯರಾಜ್ಯದ ಪ್ರಜೆಗಳೆಲ್ಲ ಸ್ವೇಚ್ಛಾಚಾರಿ ಉನ್ಮತ್ತರು, ಅವರ ದೃಷ್ಟಿಯಲ್ಲಿ ಬುದ್ಧಿ ವಿವೇಕಗಳು ಅಪರಾಧ, ಅಂತಹವರನ್ನು ಅಧಿಕಾರಿಗಳು ಏನಾದರೊಂದು ನೆವದಿಂದ ಸೆರೆಮನೆಗೆ ಕಳುಹಿಸುತ್ತಾರೆ-ಎಂದು ಅವನು ತಿಳಿದಿದ್ದನು. ನ್ಯಾಯಾಧೀಶರು, ಕಾರಾಗೃಹದ ಅಧಿಕಾರಿಗಳು ಬಂಧಿಗಳಿಗೆ ಅವರ ಆತ್ಮೋದ್ಧಾರಕ್ಕಾಗಿ ಶಿಕ್ಷೆ ವಿಧಿಸುವರೆಂದೂ, ಅದರಿಂದ ಬಂಧಿಗಳ ಬುದ್ಧಿ ವಿವೇಕಗಳು ಹೆಚ್ಚು ಹೆಚ್ಚು ಪರಿಷ್ಕೃತವಾಗಿ ಮುಂದೆ ಅವರು ಸಫಲ ಜೀವನ ನಡೆಸಲು ಸಮರ್ಥರಾಗುವರೆಂದೂ ಅವನು ದೃಢವಾಗಿ ನಂಬಿದ್ದನು.

ಜವರಾಯನ ಈ ವಿಚಿತ್ರ ಕಲ್ಪನೆಯಲ್ಲಿ ಯಾವುದೋ ಅಜ್ಞಾತ ಸತ್ಯ ಅಡಗಿದೆಯೆಂದು ಅನುಸಂಧಾನದಿಂದ ತಿಳಿದಿದ್ದ ಮಧುವರಸನು ದಿನಗಳು ಕಳೆದಂತೆ ತಾನೂ ಆ ಅಭಿಪ್ರಾಯಕ್ಕೆ ಬಂದಿದ್ದನು. ಬಹು ದಿನಗಳಿಂದ ಅವನು ಅಪೇಕ್ಷಿಸಿದ್ದ ಶಾಂತಿ ಏಕಾಂತಗಳು ಸೆರೆಮನೆಯ ವಾಸದಲ್ಲಿ ಅವನಿಗೆ ದೊರಕಿದ್ದವು.