ಪುಟ:ಕ್ರಾಂತಿ ಕಲ್ಯಾಣ.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮

ಕ್ರಾಂತಿ ಕಲ್ಯಾಣ

ಅವರು ತಮ್ಮಿಚ್ಛೆಬಂದಂತೆ ಮಾಡಲಿ" ಎಂದು ಹೇಳಿ ಅಗ್ಗಳನನ್ನು ನಾಟ್ಯ ಶಾಲೆಯಿಂದ ಹೊರಗೆ ಕರೆದುಕೊಂಡು ಹೋಗಿ ಮಹಾದ್ವಾರದಲ್ಲಿ ಕಾದಿದ್ದ ರಥದಲ್ಲಿ ಕುಳ್ಳಿರಿಸಿದನು.

***

ಕಲ್ಯಾಣದಲ್ಲಿ ನಾಲ್ಕು ಚಾಲುಕ್ಯ ಅರಮನೆಗಳಿದ್ದವು. ಅವುಗಳಲ್ಲಿ ಸರ್ವಜ್ಞ ಸೋಮೇಶ್ವರನು ಕಟ್ಟಿಸಿದ ದುರ್ಗ ಪ್ರಾಸಾದವೆಂಬ ಅರಮನೆ ಕೋಟೆ ಕೊತ್ತಳಗಳಿಂದ ಸುರಕ್ಷಿತವಾಗಿತ್ತು. ಸದ್ಯದಲ್ಲಿ ಅದು "ರಾಜಗೃಹ" ಎಂಬ ಹೊಸ ಹೆಸರನ್ನು ಪಡೆದು, ಹೆಸರಿಗೆ ದೊರೆಯಾಗಿದ್ದ ಜಗದೇಕಮಲ್ಲರಸನ ಮತ್ತು ಅವನ ಅಂಗರಕ್ಷಕ ಸೈನ್ಯದ ಆವಾಸಸ್ಥಳವಾಗಿತ್ತು. ಐನೂರು ಮಂದಿ ರಾವುತರು, ಸಾವಿರಮಂದಿ ಪದಾತಿಗಳು ಇದ್ದ ಆ ರಕ್ಷಕ ಸೈನ್ಯಕ್ಕೆ ಬಿಜ್ಜಳನ ಸಹೋದರ ಕರ್ಣದೇವನು ಅಧಿಪತಿಯಾಗಿದ್ದನು. ಅರಮನೆಯ ಮುಂಭಾಗದ ಕಟ್ಟಡದಲ್ಲಿ ಕರ್ಣದೇವನ ವಾಸದ ಮನೆ, ಚಾವಡಿ, ಅತಿಥಿ ಶಾಲೆಗಳೂ ಅಂತಃಪುರಕ್ಕಾಗಿ ರಚಿತವಾಗಿದ್ದ ಹಿಂಭಾಗದಲ್ಲಿ ಜಗದೇಕಮಲ್ಲನ ಮತ್ತು ಅವನ ಗಣಿಕಾಪರಿವಾರದ ವಾಸಗೃಹಗಳೂ, ಸಭಾಂಗಣ, ನಾಟ್ಯಶಾಲೆ, ಪಾಕಶಾಲೆ, ಉಗ್ರಾಣ, ಸ್ನಾನದ ಮನೆ ಮುಂತಾದವುಗಳೂ ಇದ್ದವು.

ನೂರ್ಮಡಿ ತೈಲಪನ ಸಹೋದರನಾದ ಜಗದೇಕಮಲ್ಲನನ್ನು ಚಾಲುಕ್ಯ ಅರಸೊತ್ತಿಗೆಯಲ್ಲಿ ಕುಳ್ಳಿರಿಸಿ, ಅರಮನೆಯಲ್ಲಿ ಬಂಧನದಲ್ಲಿಟ್ಟು ಅವನ ಹೆಸರಿನಲ್ಲಿ ಬಿಜ್ಜಳನು ಸರ್ವಾಧಿಕಾರಿ ಮಹಾಮಂಡಲೇಶ್ವರನಾಗಿ ರಾಜ್ಯದ ಆಡಳಿತ ನಡೆಸುತ್ತಿದ್ದನು. ತೈಲಪನು ಜೀವಿಸಿದ್ದಾಗಲೆ, ಅವನಿಗಾಗಲಿ, ಅವನ ಸಾಮಂತ ಮನ್ನೆಯರಿಗಾಗಲಿ ತಿಳಿಯದಂತೆ ಹೆಜ್ಜೆ ಹೆಜ್ಜೆಯಾಗಿ ನಡೆದ ಈ ರಾಜ್ಯಾಪಹಾರ ಮುಗಿದು ಆಗಲೆ ಆರು ವರ್ಷಗಳು ಕಳೆದಿದ್ದವು. ಈ ಆಖ್ಯಾಯಿಕೆಯ ಕಾಲಕ್ಕೆ ಬಿಜ್ಜಳನು ಚಾಳುಕ್ಯ ರಾಜ್ಯದ ಅನಭಿಷಿಕ್ತ ಚಕ್ರೇಶ್ವರನೂ, ಜನಪ್ರಿಯ ಸರ್ವಾಧಿಕಾರಿಯೂ ಆಗಿದ್ದನು. ಕ್ರಮಕ್ರಮವಾಗಿ ಬಿಜ್ಜಳನು ನಡೆಸಿದ ಈ ರಾಜ್ಯಾಪಹಾರವನ್ನು ಪ್ರಜೆಗಳಾಗಲಿ, ಸಾಮಂತ ಮನ್ನೆಯರಾಗಲಿ ವಿರೋಧಿಸದೆ ಇದ್ದುದಕ್ಕೆ ಮೂರು ಮುಖ್ಯ ಕಾರಣಗಳಿದ್ದವು.

ಮೊದಲನೆಯದು ಬಿಜ್ಜಳನ ಸೈನ್ಯದಳ. ಸುಮಾರು ೫೦ ಸಾವಿರ ರಾವುತರು, ಎರಡು ಲಕ್ಷ ಪದಾತಿ, ೮೦೦ ಆನೆಗಳು, ೨೦೦೦ ಒಂಟೆಗಳು, ಈ ಮಹಾಸೈನ್ಯಕ್ಕೆ ಅಗತ್ಯವಾದ ಮಾರಣಾಸ್ತ್ರಗಳ ತಯಾರಿಕೆ, ಮೇವು ಮತ್ತು ಆಹಾರ ವಸ್ತುಗಳ ಸರಬರಾಜು, ಮಾರ್ಗಪರಿಷ್ಕರಣ ಮತ್ತು ಶಿಬಿರ ರಚನೆ ಮೊದಲಾದ ಕಾರ್ಯಗಳಿಗೆ