ಪುಟ:ಕ್ರಾಂತಿ ಕಲ್ಯಾಣ.pdf/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೧೭


“ಜಗದೇಕಮಲ್ಲರಸರಿಗೆ ರಾಣಿಯವರು ಕಳುಹಿಸಿದ ಸಂದೇಶವೇನೆಂಬುದನ್ನು ನಾವು ತಿಳಿಯಬಹುದೆ?" -ಈ ಸಾರಿ ಮಾಚಿದೇವರು ಕೇಳಿದರು.

“ಜಗದೇಕಮಲ್ಲರಸರಿಗೆ ತಿಳಿಸುವ ಮೊದಲು ಸಂದೇಶದ ನುಡಿಗಳನ್ನು ರಹಸ್ಯವಾಗಿಟ್ಟಿರಬೇಕೆಂದು ರಾಣಿಯವರು ಹೇಳಿದ್ದಾರೆ. ಸಂದೇಶವೇನೆಂಬುದು ನನಗೆ ಕೂಡ ತಿಳಿಯದು,” ಎಂದು ಹೇಳಿ ಅಗ್ಗಳನು ಅದುವರೆಗೆ ಮೌನವಾಗಿ ದೂರದಲ್ಲಿ ನಿಂತಿದ್ದ ಉಷಾವತಿಯನ್ನು ಕರೆದನು. ಅವಳು ಹತ್ತಿರ ಬಂದು ಸಭೆಯಲ್ಲಿದ್ದವರಿಗೆ ನಮಸ್ಕಾರಮಾಡಿ, “ಜಗದೇಕಮಲ್ಲರಸರಿಗೆ ರಹಸ್ಯವಾಗಿ ಸಂದೇಶ ಮುಟ್ಟಿಸಬೇಕೆಂದೂ, ಅದುವರೆಗೆ ಆ ವಿಚಾರ ಯಾರಿಗೂ ತಿಳಿಯಬಾರದೆಂದೂ ರಾಣಿಯವರು ಹೇಳಿದ್ದರು. ಅದರಂತೆ ನಡೆಯಲು ನಿಮ್ಮ ಅನುಮತಿ ಬೇಡುತ್ತೇನೆ,” ಎಂದಳು.

“ನಿನ್ನ ಸ್ವಾಮಿನಿಷ್ಠೆ ಪ್ರಶಂಸಾರ್ಹವಾಗಿದೆ, ತಂಗಿ. ಅದರಂತೆ ನಡೆಯಲು ಸಮರ್ಥಳಾಗು,” ಎಂದು ಹೇಳಿ ಚೆನ್ನಬಸವಣ್ಣನವರು ಅಗ್ಗಳನ ಕಡೆ ತಿರುಗಿ, “ಈಗ ಕಲ್ಯಾಣದಲ್ಲಿ ಶರಣರ ಪ್ರತಿಷ್ಠೆ ಗೌರವಗಳು ರಾಣಿಯವರು ಭಾವಿಸಿದಷ್ಟು ಸಮರ್ಪಕವಾಗಿಲ್ಲ. ಬಿಜ್ಜಳರಾಯರ ದುರಾಗ್ರಹ ದಬ್ಬಾಳಿಕೆಗಳಿಂದ ತಪ್ಪಿಸಿಕೊಳ್ಳಲು ನಾವು ಕಲ್ಯಾಣವನ್ನು ಬಿಡಲು ಯೋಚಿಸಿದ್ದೇವೆ. ಈ ಸಂಕಟದಲ್ಲಿ ಚಾಲುಕ್ಯ ವಂಶೀಯನಾದ ಬಾಲಕನೊಬ್ಬನನ್ನು ಶತೃಗಳಿಂದ ರಕ್ಷಿಸಲು ನಾವು ಸಮರ್ಥರಾಗುವೆವೇ ಎಂಬುದು ಸಂದೇಹ. ಆದರೂ ಶರಣು ಬಂದವರನ್ನು ಪ್ರಾಣಪಣವಾಗಿಯಾದರೂ ರಕ್ಷಿಸುವುದು ನಮ್ಮ ಕರ್ತವ್ಯ. ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸುವವರೆಗೆ ನೀವು ರಹಸ್ಯವಾಗಿ ಮಹಮನೆಯಲ್ಲಿರಬೇಕಾಗುವುದು,” ಎಂದು ಹೇಳಿದರು.

“ನಾವು ಅಣ್ಣನವರ ಸಲಹೆಯಂತೆ ನಡೆದುಕೊಳ್ಳುತ್ತೇವೆ.” ಎಂದನು ಅಗ್ಗಳ. :“ನೀವು ಕಲ್ಯಾಣಕ್ಕೆ ಬಂದ ವಿಚಾರ ಬಿಜ್ಜಳರಾಯರಿಗೆ ತಿಳಿದಿದೆಯೆ?”

“ಬಿಜ್ಜಳರಾಯರ ವಿಶೇಷ ಅನುಮತಿ ಪಡೆದು ನಮ್ಮ ಯಾತ್ರಾತಂಡ ಪ್ರವಾಸ ಮಾಡುತ್ತಿರುವುದರಿಂದ ನಗರ ರಕ್ಷಕರು ನಮ್ಮ ಗಾಡಿಗಳನ್ನು ಹುಡುಕಲಿಲ್ಲ. ಅನುಮತಿ ಪತ್ರದಲ್ಲಿ ಕಾಣಿಸಿದ್ದ ಸಂಖ್ಯೆಗಿಂತ ಮೂವರು ಹೆಚ್ಚಿಗಿದ್ದರೆಂದು ಅವರಿಗೆ ತಿಳಿಯದು."

ಬಾಲಕನೊಡನೆ ಪಿಸುದನಿಯಲ್ಲಿ ಮಾತಾಡುತ್ತಿದ್ದ ಮಾಚಿದೇವರು ನಡುವೆ ಬಂದು ಹೇಳಿದರು : "ಎಂತಹ ಚಾಣಾಕ್ಷ ವಿಶ್ವಾಸಘಾತುಕ ರಾಜಕಾರಿಣಿಯೊಡನೆ ನಾವು ವ್ಯವಹರಿಸುತ್ತಿರುವೆವೆಂಬುದನ್ನು ಮರೆತಿದ್ದೀರಿ, ಚೆನ್ನಬಸವಣ್ಣನವರೆ. ಮಂಗಳ