ಪುಟ:ಕ್ರಾಂತಿ ಕಲ್ಯಾಣ.pdf/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೩೭


ಸಾಮಾನ್ಯ ರೂಪ. ಗುಣದೋಷಗಳು ಕಾಣಬೇಕಾದರೆ ಹೆಣ್ಣಿನ ಕಣ್ಣ ಕನ್ನಡಿಯಲ್ಲಿ, ಕಣ್ಣಾಲಿಯಲ್ಲಿನ ನೆರಳು ಕಾಣುವಷ್ಟು ಹತ್ತಿರ ನಿಂತು ನೋಡಬೇಕಾಗುವುದು.”

“ಹೆಣ್ಣಿನ ಕಣ್ಣ ಕನ್ನಡಿಯಲ್ಲಿ! ಹೆಣ್ಣಿನಿಂದ ದೂರವಾದಷ್ಟೂ ನಿನ್ನ ರಸಿಕತೆ ಹೆಚ್ಚುತ್ತಿದೆ, ಭಂಡರಾಜ!” -ಎಂದು ಕರ್ಣದೇವ ಗಹಗಹಿಸಿ ನಕ್ಕನು. ಪಾನಗೋಷ್ಠಿ ಈ ಘಟ್ಟದಲ್ಲಿದ್ದಾಗ ಮನೆಹೆಗ್ಗಡೆ ಉಷಾವತಿಯನ್ನು ಕರೆದುಕೊಂಡು ಅಲ್ಲಿಗೆ ಬಂದನು.

“ಇಷ್ಟು ಹೊತ್ತು ಎಲ್ಲಿ ಹೋಗಿದ್ದೆ, ಹೆಗ್ಗಡೆ? ಮೂವರು ಕೋಣೆಯ ಸಮಿತಿ ನೀನಿಲ್ಲದೆ ಇಷ್ಟು ಹೊತ್ತು ಅಪೂರ್ಣವಾಗಿತ್ತು.” ಎಂದನು ಅವನನ್ನು ಕಂಡು ಕರ್ಣದೇವ.

“ದೇವಲೋಕಕ್ಕೆ ಹೋಗಿ ನಿಮಗಾಗಿ ಈ ಅಪ್ಸರೆಯನ್ನು ಹುಡುಕಿ ತಂದೆ ಒಡೆಯರೆ. ಒಪ್ಪಿಸಿಕೊಳ್ಳಬೇಕು,” ಎಂದು ಹೆಗ್ಗಡೆ ಉಷಾವತಿಯನ್ನು ಎದುರಿಗೆ ನಿಲ್ಲಿಸಿದನು.

ಹೆಗ್ಗಡೆ ತನಗೆ ಕೊಟ್ಟ ಅಲ್ಪಾವಕಾಶವನ್ನು ಉಷಾವತಿ ಸದುಪಯೋಗಪಡಿಸಿ ಕೊಂಡಿದ್ದಳು. ಈಗ ಅವಳು ಗುಲಾಬಿ ರಂಗಿನ ತೆಳುವಾದ ರೇಷಿಮೆಯ ಸೀರೆಯುಟ್ಟು ನೀಲಿಯ ರವಿಕೆ ತೊಟ್ಟಿದ್ದಳು. ಕೊರಳು ಕೈಗಳಲ್ಲಿ ಮುತ್ತಿನ ಸರಗಳು. ಚಿಕ್ಕಣವಾಗಿ ಬಾಚಿ ಬೆನ್ನ ಮೇಲೆ ಬೀಳುವಂತೆ ಕಟ್ಟಿದ್ದ ಸೋರ್ಮುಡಿಯಲ್ಲಿ ಅರೆಬಿರಿದ ಕನ್ನೈದಿಲೆ, ಹಣೆ ಕದಪುಗಳಲ್ಲಿ ಕಸ್ತೂರಿಯ ರಸದಿಂದ ತಿದ್ದಿ ತೆಗೆದ ತಿಲಕ ಮಕರಿಕೆಗಳು, ತಾಂಬೂಲದಿಂದ ರಂಗಾದ ತುಟಿ.

ಕರ್ಣದೇವ ಅಚ್ಚರಿಯಿಂದ ಅವಳನ್ನು ನೋಡುತ್ತ, ನಿಜವಾಗಿ ಇವಳು ಅಪ್ಸರೆ ! ಎಲ್ಲಿಂದ ಕರೆದುಕೊಂಡು ಬಂದೆ?” ಎಂದು ಹೆಗ್ಗಡೆಯನ್ನು ಕೇಳಿದನು.

“ಅಪ್ಸರೆಯೋ ಅಲ್ಲವೋ, ಒಡೆಯರು ಪರೀಕ್ಷಿಸಿ ಹೇಳಬೇಕು. ದೇವಭಾಷೆ ನಮ್ಮ ಕಿವಿಗೆ ಬೀಳದಿರಲೆಂದು ಬ್ರಹ್ಮದೇವ ಇವಳನ್ನು ಮೂಕಳಾಗಿ ಮಾಡಿದ್ದಾನೆ, ಅದೊಂದನ್ನು ಬಿಟ್ಟರೆ ಉಳಿದ ವಿಷಯಗಳಲ್ಲಿ.....”

-ಹೆಗ್ಗಡೆ ಅರ್ಥಗರ್ಭಿತವಾಗಿ ನಕ್ಕು ಮಾತು ಮುಗಿಸಿದನು.

“ಹೆಗ್ಗಡೆ ನಮಗರ್ಪಿಸಿರುವ ಈ ಮೂಕ ಮದನಿಕೆಯನ್ನೇನು ಮಾಡುವುದು, ಭಂಡರಾಜ?”-ಎಂದನು ಕರ್ಣದೇವ, ಜಗದೇಕಮಲ್ಲನ ಕಡೆ ತಿರುಗಿ.

ಒಂದು ಸಾರಿ ಉಷಾವತಿಯನ್ನು ಆಪಾದಮಸ್ತಕ ನಿಟ್ಟಿಸಿ ಜಗದೇಕಮಲ್ಲನು ಹೇಳಿದನು- “ಭಕ್ತಿಯಿಂದ ಅರ್ಪಿತವಾದ ಎಲ್ಲ ವಸ್ತುಗಳನ್ನೂ ಪ್ರೀತಿಯಿಂದ ಸ್ವೀಕರಿಸುವುದು ಪ್ರಭುಧರ್ಮ, ಕರ್ಣದೇವ. ಕಲ್ಲಿನ ದೇವರಿಗೆ ಹಣ್ಣಾದರೇನು