ಪುಟ:ಕ್ರಾಂತಿ ಕಲ್ಯಾಣ.pdf/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೪೭


-ತುಸು ಅಸಮಾಧಾನದಿಂದ ನುಡಿದನು ಜಗದೇಕಮಲ್ಲ.

ಕೃತಕ ಗಡ್ಡ ಜಟೆಗಳನ್ನು ಸರಿಪಡಿಸಿಕೊಳ್ಳುತ್ತ ಬೊಮ್ಮರಸನು ಬದಲಿಸಿದ ಕಂಠದಿಂದ ಹೇಳಿದನು : "ರಾಣಿ ಸಂದೇಶವನ್ನು ನಿನಗೆ ಕಳುಹಿಸಿದ್ದಾರೆ. ಅದರಂತೆ ಕಾರ್ಯ ನಡೆಸುವವನು ನೀನು. ನಿನ್ನ ನಿರ್ಧಾರವನ್ನು ತಿಳಿಸಿದರೆ ಅದು ಯುಕ್ತವೇ ಅಯುಕ್ತವೇ ಎಂದು ಹೇಳಿ ಗುರುಮನೆಯ ನನ್ನ ಹೊಣೆಯನ್ನು ಮುಗಿಸುತ್ತೇನೆ.”

ಜಗದೇಕಮಲ್ಲನ ಅಸಮಾಧಾನ ತೀವ್ರವಾಯಿತು. ಅವನು ಹೇಳಿದನು : “ಜಂಗಮವೇಷ ಧರಿಸಿದ ಮಾತ್ರಕ್ಕೆ ನೀನು ಗುರುವೂ ಅಲ್ಲ, ನಾನು ಶಿಷ್ಯನೂ ಅಲ್ಲ, ಬೊಮ್ಮರಸ. ರಾಣಿಯ ಆತ್ಮಕ್ಕೆ ಯಾವುದರಿಂದ ಶಾಂತಿ ದೊರಕುವುದೋ ನಾನು ಆ ಕಾರ್ಯ ಮಾಡುತ್ತೇನೆ. ಅದು ನಿನಗೊಪ್ಪಿಗೆಯೆ?”

ಬೊಮ್ಮರಸನ ಮುಖದಲ್ಲಿ ಉಪಹಾಸದ ಕಿರುನಗೆಯೊಂದು ಮಿಂಚಿ ಮರೆಯಾಯಿತು. ಗುರುಮನೆಗೆ ಉಚಿತವಾದ ಶ್ರೀಮದ್ಗಾಂಭೀರ್ಯದಿಂದ ಅವನು ಹೇಳಿದನು : “ಪಟ್ಟಾಭಿಷಿಕ್ತರಾದ ಚಾಲುಕ್ಯ ಚಕ್ರೇಶ್ವರರು ಎಂದಿನಿಂದ ರಾಣಿ ಕಾಮೇಶ್ವರೀದೇವಿಯವರ ಸಂದಾಯಿ ಆದದ್ದು?”

“ಸಂದಾಯಿ!”

“ಅಹುದು, ಜಗದೇಕಮಲ್ಲ, ಸಂದಾಯಿ ರಾಣಿಯ ವಧಾಜ್ಞೆಯನ್ನು ಕಾರ್ಯಗತ ಮಾಡುವ ವಧಕಾರ.ರಾಣಿಯ ಅಂತ್ಯ ಸಂದೇಶದಿಂದ ಉತ್ತೇಜನ ಪಡೆದ ನೀನು ಬಂಧವಿಮುಕ್ತನಾಗಿ ಅತ್ಯಾಚಾರಿಯನ್ನು ವಧಿಸಿದರೆ ಭವಿಷ್ಯ ಇತಿಹಾಸಕಾರರು ನಿನ್ನನ್ನು ಹೆಣ್ಣೊಬ್ಬಳ ಪ್ರೇಮಕ್ಕಾಗಿ ಸ್ಪರ್ಧಿಸಿದ ಕಾಮುಕನೆಂದು ಹಳಿಯುವರು. ರಾಣಿಯನ್ನು ಸ್ವೈರಿಣಿಯೆಂದು ಕರೆಯುವರು. ಅದು ನಿನಗಿಷ್ಟವೆ?”

“ರಾಣಿಯ ವಿಚಾರದಲ್ಲಿ ವಧಾರ್ಹವಾದ ಅತ್ಯಾಚಾರ ನಡೆದಿದೆ. ಅದನ್ನಾದರೂ ನೀನು ಒಪ್ಪುವೆಯಾ?”

“ಒಪ್ಪುತ್ತೇನೆ, ಜಗದೇಕಮಲ್ಲ. ರಾಣಿಯ ಸಂದೇಶದಿಂದ ಅದು ಸ್ಥಿರವಾಗುತ್ತದೆ. ಆದರೆ ಆ ಅಪರಾಧದಲ್ಲಿ ರಾಣಿಯ ಪಾತ್ರವೇನು? ಅತ್ಯಾಚಾರಿಯ ಪಾತ್ರವೇನು? ಕಳೆದೆರಡು ದಿನಗಳಿಂದ ಅಗ್ನಿದಾಹದ ಬಗೆಗೆ ಸಾಕಾದಷ್ಟು ವಿವರಗಳನ್ನು ನಾನು ಸಂಗ್ರಹಿಸಿದ್ದೇನೆ. ತನ್ನ ಅವಿವೇಕದ ಅಂಧ ವಿಶ್ವಾಸದಿಂದ, ವಿಲಾಸಿತೆಯ ಪ್ರದರ್ಶನದಿಂದ, ತನ್ನ ಮೇಲೆ ನಡೆದ ಅತ್ಯಾಚಾರಕ್ಕೆ ರಾಣಿಯೇ ಆಹ್ವಾನ ಕೊಟ್ಟಳು. ಅತ್ಯಾಚಾರದ ಹೊಣೆಯನ್ನು ಆಕ್ರಮಣಕಾರ ಮತ್ತು ಆಕ್ರಮಣಕ್ಕೆ ಗುರಿಯಾದವರು, ಈ ಇಬ್ಬರ ನಡುವೆ ಸಮಾನವಾಗಿ ಹಂಚಬೇಕಾಗುವುದು.