ಪುಟ:ಕ್ರಾಂತಿ ಕಲ್ಯಾಣ.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೨೭

ಅಪ್ರಿಯ ನಿಷ್ಟುರ ಸತ್ಯವನ್ನು ನಿರ್ಭಯವಾಗಿ ಹೇಳುವವರು ಜಗತ್ತಿನಲ್ಲಿ ವಿರಳರೆಂಬುದು ಅವನಿಗೆ ತಿಳಿದಿತ್ತು. ಕೊಂಚ ಹೊತ್ತು ಯೋಚಿಸುತ್ತ ಸುಮ್ಮನೆ ಕುಳಿತಿದ್ದು ಬಳಿಕ, "ನಿಮ್ಮ ಅಭಿಪ್ರಾಯ ಕ್ರಾಂತಿಕರವಾಗಿದೆ, ಅಗ್ಗಳ ದೇವರಸರೆ. ಆದರೆ ಚಾಲುಕ್ಯರಾಜ್ಯದ ದುರಾದೃಷ್ಟ! ಇಂತಹ ಸ್ತ್ರೀಪುರುಷರೇ ಈಗ ನಮ್ಮ ಆಳರಸರು!” ಎಂದನು.

"ಬಿಜ್ಜಳರಾಯರಂತಹ ರಾಜಕಾರಣ ಪಟು, ಆಡಳಿತ ದಕ್ಷ ಸರ್ವಾಧಿಕಾರಿ ಮಹಾಮಾಂಡಲೇಶ್ವರರನ್ನು ಪಡೆದಿರುವುದು ಚಾಲುಕ್ಯರಾಜ್ಯದ ಅದೃಷ್ಟವಲ್ಲವೆ?"-ಅಗ್ಗಳನೆಂದನು.

ಕ್ರಮಿತನು ಅಚ್ಚರಿಯಿಂದ, "ಹಾಗಾದರೆ ಬಿಜ್ಜಳರಾಯರು ಚಾಲುಕ್ಯ ರಾಜ್ಯವನ್ನು ಅಪಹರಿಸಿದರೆಂದು ತೆಗಳುವ ಸಾಮಂತರ ಅಭಿಪ್ರಾಯವನ್ನು ನೀವು ಒಪ್ಪುವುದಿಲ್ಲವೆ?” ಎಂದನು.

"ಬಿಜ್ಜಳರಾಯರು ಸ್ವಸಾಮರ್ಥ್ಯದಿಂದ ರಾಜ್ಯದ ಆಡಳಿತವನ್ನು ಸ್ವಾಧೀನಪಡಿಸಿಕೊಳ್ಳದೆ ಹೋಗಿದ್ದರೆ, ಇಷ್ಟು ದಿನಕ್ಕೆ ಚಾಲುಕ್ಯರಾಜ್ಯ ಅನಾಯಕವಾಗುತ್ತಿತ್ತು. ಹೇಳ ಹೆಸರಿಲ್ಲದೆ ಹೋಗುತ್ತಿತ್ತು. ಬಿಜ್ಜಳರಾಯರು ದೇಶವನ್ನು ಆ ವಿಪತ್ತಿನಿಂದ ರಕ್ಷಿಸಿದರು. ಅದಕ್ಕಾಗಿ ಜನರು ಅವರಿಗೆ ಕೃತಜ್ಞರಾಗಿರಬೇಕು."

ಅಗ್ಗಳನ ನುಡಿಗಳಲ್ಲಿ ಆವೇಶ ದೃಢತೆಗಳು ಎದ್ದು ಕಾಣುತ್ತಿದ್ದವು. ಇಂತಹ ಪ್ರಭುನಿಷ್ಠ ಪಂಡಿತನನ್ನು ನಾನು ಸರಿಯಾಗಿ ತಿಳಿದುಕೊಳ್ಳಲಾರದೆ ಬಿಜ್ಜಳರಾಯರ ಹತ್ತಿರ ದೂರಿದೆನಲ್ಲಾ ಎಂದು ಕ್ರಮಿತನು ಮನದಲ್ಲಿ ಮರುಗಿದನು.

ಈ ಮಾತುಗಳು ನಡೆಯುತ್ತಿದ್ದಂತೆ ಮನೆ ಹೆಗ್ಗಡೆ ಅಲ್ಲಿಗೆ ಬಂದು "ಪ್ರಭುಗಳು ಓಲಗಶಾಲೆಯಲ್ಲಿದ್ದಾರೆ. ದಯಮಾಡಿಸಬೇಕು,” ಎಂದು ಅವರನ್ನು ಕರೆದುಕೊಂಡು ಅವರು ಓಲಗ ಶಾಲೆಗೆ ಬಂದಾಗ ಅಂಗಣದಲ್ಲಿ ಕರ್ಣದೇವರಸನು ತನ್ನ ಅಧೀನರಾದ ಸೈನ್ಯನಾಯಕರೊಡನೆ ಮಾತಾಡುತ್ತ ನಿಂತಿದ್ದನು. ಕ್ರಮಿತನನ್ನು ಕಂಡಕೂಡಲೆ ಅವನು, "ನೀವು ಆಗಲೇ ಬಂದುದಾಗಿ ಹೆಗ್ಗಡೆ ಹೇಳಿದನು. ಇದುವರೆಗೆ ಎಲ್ಲಿದ್ದೀರಿ? ಸಂಗಡವಿರುವ ಇವರಾರು? ಬಂದ ಕಾರ್ಯವೇನು?” ಎಂದು ಪ್ರಶ್ನೆಗಳ ಮಳೆ ಸುರಿಸಿದನು.

"ಅರಸರು ಒಂದೇ ಉಸಿರಲ್ಲಿ, ಇಷ್ಟೆಲ್ಲ ಕೇಳಿದರೆ ಉತ್ತರಕೊಡುವುದು ಹೇಗೆ? ಇವರು ಮಹಾರಾಜರ ಹೊಸ ಕಾಮೋಪದೇಶಕ, ಹೆಸರು ಪಂಡಿತ ಕವಿ ಅಗ್ಗಳದೇವ ಎಂದು. ಪ್ರಭುಗಳಿಗೆ ಇವರ ಪರಿಚಯ ಮಾಡಿಸುವುದಕ್ಕಾಗಿ ಬಂದಿದ್ದೇನೆ.” ಎಂದು ಕ್ರಮಿತನು ಉತ್ತರ ಕೊಟ್ಟನು.