ಪುಟ:ಕ್ರಾಂತಿ ಕಲ್ಯಾಣ.pdf/೪೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೩೯೭ ನೀವೇಕೆ ಹೆದರಬೇಕು ?” “ಹೆದರಿಕೆಗೆ ಇನ್ನೊಂದು ಕಾರಣವಿದೆ, ಅಯ್ಯನವರೆ.” “ಯಾವ ಕಾರಣ ಅದು?” ರಹಸ್ಯಸಭೆ ಮುಗಿದ ಮೇಲೆ ಸರ್ವಾಧಿಕಾರಿಗಳು ಕಲಚೂರ್ಯ ಅರಮನೆಗೆ ಹಿಂದಿರುಗಿದರು. ಆಮೇಲೆ ಅಲ್ಲಿ ಏನೋ ಅನಾಹುತ ನಡೆಯಿತಂತೆ. ಮಾಧವ ನಾಯಕನ ಸೈನಿಕರು ಅರಮನೆಯ ಸುತ್ತ ಕಾವಲಿದ್ದಾರೆ. “ಅರಮನೆಯಲ್ಲಾದ ಅನಾಹುತವೇನು?” “ಅನಾಹುತದ ಸುದ್ದಿ ಕೇಳಿ ಜನರು ತಲ್ಲಣಗೊಂಡಿದ್ದಾರೆ. ಅನಾಹುತವೇನೆಂದು ಯಾರಿಗೂ ತಿಳಿಯದು.” “ಅನಾಹುತವೇನೆಂದು ಎಲ್ಲರಿಗೂ ತಿಳಿದಿದೆ. ಬಾಯಿಂದ ಅದನ್ನು ಹೇಳುವ ಧೈರ್ಯ ಯಾರಿಗೂ ಇಲ್ಲ,” ಎಂದು ಭಾವಿಸಿ ಮಾಚಿದೇವರು ಪ್ರಕಟವಾಗಿ, “ಈ ರಹಸ್ಯ ನಿಮಗೇಕೆ? ಮನೆಗಳಿಗೆ ಹೋಗಿ ಬಾಗಿಲುಗಳನ್ನು ಭದ್ರಪಡಿಸಿ ಮಲಗಿಕೊಳ್ಳಿ ಬೆಳಗಾದರೆ ಅದು ತಾನಾಗಿ ತಿಳಿಯುವುದು,” ಎಂದು ಹೇಳಿ ಅಲ್ಲಿಂದ ಹೊರಟರು. ಪ್ರಜೆಗಳ ಸ್ತಬ್ದತೆ ಹೆಪ್ಪು ಕಟ್ಟಿದಂತೆ ಎಲ್ಲ ಕಡೆ, ಕಿವಿಯಿಂದ ಕೇಳದೆ ಕಣ್ಣಿಂದ ಕಾಣಬಹುದಾದ ಚಿರಮೌನ....ಬೀದಿಗಳಲ್ಲಿ ಜನರ ಸುಳಿವೂ ಇಲ್ಲ. ಹಚ್ಚಿಟ್ಟ ದೀಪಗಳ ಬೆಳಕು ಹೊರಗೆ ಕಾಣದಂತೆ ಎಲ್ಲ ಮನೆಗಳ ಕಿಟಕಿ ಬಾಗಿಲುಗಳು ಮುಚ್ಚಲ್ಪಟ್ಟಿವೆ. ಮಧ್ಯರಾತ್ರಿಯವರೆಗೆ ಬೆಳಕು ಹಚ್ಚಿ ಬಾಗಿಲು ತೆರೆದಿರುತ್ತಿದ್ದ ನಗರದ ಮುಖ್ಯ ಶೈವಮಠಗಳ ಮುಂದೆ ಕೂಡಾ ಕಗ್ಗತ್ತಲು ; ಬಾಗಿಲುಗಳು ಬಂಧಿಸಲ್ಪಟ್ಟಿವೆ. ನಗರದ ಶೈವಮಠಗಳನ್ನು ನಾಶಮಾಡಲು ಬಿಜ್ಜಳನು ನಿರ್ಧರಿಸಿರುವನೆಂದು ಮಾಚಿದೇವರಿಗೆ ತಿಳಿದಿತ್ತು. ಅದರ ಮುನ್ಸೂಚನೆಯೋ ಇದು ? ಯಾವುದೋ ಅನಿರೀಕ್ಷಿತ ಅಪಘಾತದಿಂದ ಜನಶೂನ್ಯವಾದ ಹಾಳೂರಲ್ಲಿ ನಡೆಯುತ್ತಿರುವೆನೇ ನಾನು? ಎಂದು ಚಿಂತಿಸುತ್ತ ಮಾಚಿದೇವರು ಮಹಮನೆಯನ್ನು ಸೇರಿದರು. ಅಲ್ಲಿಯೂ ಅದೇ ಸ್ಥಿತಿ. ನಗರದ ಸ್ತಬ್ದತೆ ತಮಂಧಗಳು ಮಹಮನೆಯನ್ನೂ ಮಸಗಿದ್ದಂತೆ ಕಂಡಿತು. ಮಹಾದ್ವಾರದ ಬಳಿ ಹೋಗಿ ನೋಡಿದರು. ಬಾಗಿಲು ಹಾಕಿತ್ತು. ಪಾರ್ಶ್ವದ ದಿಡ್ಡಿ ಬಾಗಿಲಿಗೆ ಹೋಗಿ ಮೆಲ್ಲನೆ ತಟ್ಟಿದರು. ಒಳಗಿನಿಂದ, “ಯಾರು?” ಎಂಬ ಧ್ವನಿ ಕೇಳಿಸಿತು, ಬಂದಿರುವವರು ಮಾಚಿದೇವರೇ ಎಂದು ತಿಳಿದ ಮೇಲೆ ಒಳಗಿದ್ದವರು ಬಾಗಿಲು ತೆರೆದರು. “ದೀಪಗಳನ್ನಾರಿಸಿ ಹೆಬ್ಬಾಗಿಲನ್ನೇಕೆ ಮುಚ್ಚಿದಿರಿ? ಚೆನ್ನಬಸವಣ್ಣನವರೆಲ್ಲಿದ್ದಾರೆ?”