ಪುಟ:ಕ್ರಾಂತಿ ಕಲ್ಯಾಣ.pdf/೪೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೧೨ ಕ್ರಾಂತಿ ಕಲ್ಯಾಣ ಕಮಂಡಲು, ಯೋಗದಂಡಗಳನ್ನು ಕೆಳಗಿಟ್ಟು ಗಡ್ಡ ಜಟೆಗಳನ್ನು ಕಿತ್ತೊಗೆದು, “ಈಗ ನೀವು ನನ್ನನ್ನು ಗುರುತಿಸಬಲ್ಲಿರಿ, ಗುರುದೇವ.” ಎಂದು ಕೈ ಜೋಡಿಸಿ ಎದುರಿಗೆ ನಿಂತನು. “ನೀನು ಬಿಜ್ಜಳನ ಸಹೋದರ ಕರ್ಣದೇವನಲ್ಲವೇ? ನಮ್ಮನ್ನು ನೋಡಲು ಇಷ್ಟೆಲ್ಲ ವಂಚನೆಯೇಕೆ ? ಬಾ, ಕುಳಿತುಕೊ,” ಎಂದರು ಸಿದ್ದರಾಮೇಶ್ವರರು. ನಮ್ಮ ಶಿಷ್ಯನಂತೆ ಕರ್ಣದೇವನು ಸಿದ್ದರಾಮೇಶ್ವರರ ಪಾದಗಳಿಗೆರಗಿ ಎದುರಿಗೆ ಕುಳಿತು, “ಮಾಧವ ನಾಯಕನ ಕಾವಲು ಭಟರಿಗೆ ತಿಳಿಯದಂತೆ ಬರಲು ನಾನು ಈ ವೇಷ ಧರಿಸಬೇಕಾಯಿತು. ನಗರದಲ್ಲಿ ಈಗ ಅವನ ನಿರಂಕುಶಾಧಿಕಾರ ನಡೆಯುತ್ತಿದೆ. ಮಹಾದ್ವಾರಗಳನ್ನೆಲ್ಲ ಬಂಧಿಸಿ, ತನ್ನ ವಿಶೇಷಾನುಮತಿಯಿಲ್ಲದೆ ಯಾರೂ ಹೊರಗೆ ಹೋಗಕೂಡದೆಂದು ಆಜ್ಞೆ ಮಾಡಿದ್ದಾನೆ,” ಎಂದನು. “ಈ ಹಗಲು ವೇಷದ ವಸ್ತುಗಳು ನಿನಗೆಲ್ಲಿ ದೊರಕಿದುವು?” -ಸಿದ್ದರಾಮೇಶ್ವರರು ನಗುತ್ತಾ ಪ್ರಶ್ನಿಸಿದರು. “ರಾಜಗೃಹಕ್ಕೆ ಧರ್ಮೋಪದೇಶಕನಾಗಿ ಬಂದ ಜಂಗಮನೊಬ್ಬನು ಇದನ್ನು ಬಿಟ್ಟು ಹೋಗಿದ್ದನು, ಅಣ್ಣನವರೆ,” ಕರ್ಣದೇವ ನಗುದನಿಯಿಂದ ಉತ್ತರಿಸಿದನು. “ಆ ನಿರ್ಮಾಲ್ಯ ನನಗೆ ಸಹಾಯಕವಾಯಿತು. ಮಹಮನೆಯ ಶರಣರೊಡನೆ ವಲಸೆ ಹೋಗುವುದಾಗಿ ಹೇಳಿ ಕಾವಲು ಭಟನೊಬ್ಬನ ಸಹಾಯದಿಂದ ಹೊರಗೆ ಬಂದೆ.” “ನಾವು ಬಂದ ವಿಚಾರ ನಿಮಗೆ ತಿಳಿದದ್ದು ಹೇಗೆ?” "ರಾಜಗೃಹಕ್ಕೆ ಕಾಯಿಪಲ್ಲೆಗಳನ್ನು ತಂದುಕೊಡುವ ಗ್ರಾಮವಾಸಿಯಿಂದ. ಬಾಂಧವರ ಓಣಿಯಲ್ಲಿ ನೀವು ಮೋಳಿಗೆಯ ಮಾರಯ್ಯನವರ ಸಂಗಡ ಮಾತಾಡುತ್ತಿದ್ದುದನ್ನು ಅವನು ಕಂಡನಂತೆ. ನಗರದಿಂದ ಹೊರಬಿದ್ದ ಕೂಡಲೆ ನಾನು ಅಲ್ಲಿಗೆ ಹೋದೆ. ಆಂಜನೇಯ ನದಿಯಾಚಿನ ಶರಣ ಶಿಬಿರಕ್ಕೆ ನೀವು ಹೋಗಿರುವುದಾಗಿ ಕೇಳಿ ಇಲ್ಲಿಗೆ ಬಂದೆ.” ಸಿದ್ದರಾಮೇಶ್ವರನು ಸಾಭಿಪ್ರಾಯದಿಂದ ಮೋಳಿಗೆಯ ಮಾರಯ್ಯನವರ ಮುಖ ನೋಡಿದರು. ಮೋಳಿಗೆ ಮಾರಯ್ಯು ಮೃದುವಾಗಿ ನಕ್ಕು, “ಕರ್ಣದೇವರಸರು ಶರವೇಗದಿಂದ ನಿಮ್ಮಲ್ಲಿಗೆ ಬಂದಿದ್ದಾರೆ, ಅಣ್ಣನವರೆ. ಅವಸರದ ರಾಜಕಾರ್ಯ ಆಲಸ್ಯವನ್ನು ಸಹಿಸುವುದಿಲ್ಲ,” ಎಂದರು. “ಈಗ ನಮ್ಮಿಂದ ನಿನಗೇನಾಗಬೇಕು, ತಮ್ಮ ?”