ಪುಟ:ಕ್ರಾಂತಿ ಕಲ್ಯಾಣ.pdf/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೧೩ ಸಿದ್ದರಾಮೇಶ್ವರರು ಸಹಾನುಭೂತಿಯ ಮೆಲ್ಲನಿಯಿಂದ ಕರ್ಣದೇವನನ್ನು ಪ್ರಶ್ನಿಸಿದರು. ಕರ್ಣದೇವ ಕೇಳಿದನು : “ಅಣ್ಣನ ದುರ್ಮರಣದಿಂದ ಕಲ್ಯಾಣದ ಪರಿಸ್ಥಿತಿ ಹದಗೆಟ್ಟಿತ್ತು. ಜಗದೇಕಮಲ್ಲನ ಮೃತ್ಯುವಿನಿಂದ ಅದು ವಿಷಮಾವಸ್ಥೆಗೇರುತ್ತದೆ. ಚಾಲುಕ್ಯ ಅರಸೊತ್ತಿಗೆ, ರಾಜ್ಯದ ಸರ್ವಾಧಿಕಾರ, ಇವೆರಡಕ್ಕೂ ಏಕಕಾಲದಲ್ಲಿ ಸ್ಪರ್ಧೆ ಪ್ರಾರಂಭವಾಗುತ್ತದೆ. ಯುದ್ಧವೂ ನಡೆಯುವುದು. ಈ ಸಂದರ್ಭದಲ್ಲಿ ನೀವು ನನಗೆ ನೆರವಾಗಬೇಕಾಗಿ ಬೇಡುತ್ತೇನೆ. ಅಣ್ಣ ಬಿಜ್ಜಳನು ಉದ್ದೇಶಿಸಿದಂತೆ ತೈಲಪ ಮಹಾರಾಜರ ಕ್ಷೇತ್ರಜ ಪುತ್ರ ಕುಮಾರ ಪ್ರೇಮಾರ್ಣವನು ಅರಸೊತ್ತಿಗೆಯೇರಲಿ. ನನಗೆ ರಾಜ್ಯದ ಸರ್ವಾಧಿಕಾರ ಸಿಕ್ಕಿದರೆ ಸಾಕು. ಅದಕ್ಕಾಗಿ ನಿಮ್ಮ ಆಶೀರ್ವಾದ ಬೇಡಲು ಬಂದಿದ್ದೇನೆ.” “ನಮ್ಮ ಆಶೀರ್ವಾದ ನಿನಗೆ ಸರ್ವಾಧಿಕಾರ ಕೊಡಿಸಬಲ್ಲುದೆ, ಕರ್ಣದೇವ? ಎಲ್ಲವನ್ನೂ ತೊರೆದ ನಿರಾಭಾರಿ ಜಂಗಮ ನಾನು.” -ಸಿದ್ದರಾಮೇಶ್ವರರು ನುಡಿದರು ಅನಾಸಕ್ತಿಯಿಂದ. ಕರ್ಣದೇವ ಅದನ್ನು ಗಮನಿಸಲಿಲ್ಲ. ಉತ್ಸಾಹದ ಭರದಲ್ಲಿ ಮುಂದುವರಿದು ಹೇಳಿದನು : "ಈಗ ಮಾಧವನಾಯಕನು ತಾನೇ ಸರ್ವಾಧಿಕಾರಿಯಾಗಲು ಪ್ರಯತ್ನಿಸುತ್ತಿದ್ದಾನೆ, ಅಣ್ಣನವರೆ. ಸೈನ್ಯದ ಬಹುಭಾಗ ಅವನ ಅಧೀನದಲ್ಲಿದೆ. ಶರಣ ಧರ್ಮದಲ್ಲಿ ಬದ್ಧದ್ವೇಷಿಯಾದ ಅವನು ಸರ್ವಾಧಿಕಾರಿಯಾಗುವುದು ನಿಮಗಿಷ್ಟವೆ? ನೀವು ನನ್ನ ಕಡೆಗಿರುವಿರೆಂದು ತಿಳಿದರೆ ಸಾಕು, ಮಾಧವನಾಯಕನ ಸೈನ್ಯದಲ್ಲಿ ಅರ್ಧಭಾಗ ಅವನನ್ನು ಬಿಟ್ಟು ನನ್ನನ್ನು ಸೇರುವುದು. ಕುಮಾರ ಸೋಮೇಶ್ವರನು ಮಂಗಳವೇಡೆಯಿಂದ ಬರುವಷ್ಟರಲ್ಲಿ ಮಾಧವ ನಾಯಕನನ್ನು ನಾನು ಸೋಲಿಸುವೆನು. ಕಲ್ಯಾಣ ನಿರಾಪದವಾಗುವುದು.” ಸಿದ್ದರಾಮೇಶ್ವರರ ಮುಖದಲ್ಲಿ ಅವಿಶ್ವಾಸದ ಮಿದುನಗೆ ಮೂಡಿತು. “ನೀನು ಮರಳ ಮೇಲೆ ಮನೆ ಕಟ್ಟುತ್ತಿರುವೆ, ಕರ್ಣದೇವ. ನೀವು ಬಸವಣ್ಣನವರನ್ನು ಹೊರಗೆ ಕಳುಹಿಸಿದಾಗಲೆ ಕಲ್ಯಾಣದ ಸೌಭಾಗ್ಯ ನಾಶವಾಯಿತು. ಪುನಃ ಅದನ್ನು ಹಿಂದಕ್ಕೆ ತರುವೆನೆಂಬುದು ಫಲಿಸದ ಆಸೆ. ಅಲ್ಲದೆ....ಶರಣರ ವಿಚಾರದಲ್ಲಿ ಅಧಿಕಾರದಿಂದ ಮಾತಾಡಬಲ್ಲವರು ಈ ಮಾಚಿದೇವರು ಮತ್ತು ಚೆನ್ನಬಸವಣ್ಣನವರು. ನೀನು ಅವರ ಸಹಾನುಭೂತಿಗಾಗಿ ಪ್ರಯತ್ನಿಸು,” ಎಂದರು ಅವರು. ಚೆನ್ನಬಸವಣ್ಣನವರು ಮೌನವಾಗಿ ಧರ್ಮರಕ್ಷಣೆಗೆ ಮುಂದೆ ಅನುಸರಿಸಬೇಕಾದ ಕಾರ್ಯವಿಧಾನವನ್ನು ಚಿಂತಿಸುತ್ತಿದ್ದರು.