ಪುಟ:ಕ್ರಾಂತಿ ಕಲ್ಯಾಣ.pdf/೪೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೧೬

ಕ್ರಾಂತಿ ಕಲ್ಯಾಣ

ಆಡಳಿತ ನಡೆಸುತ್ತಿದ್ದವು. ಕಾಲಕ್ರಮದಲ್ಲಿ ಅವು ನಾಶವಾಗಿ ಪ್ರಜಾಪೀಡೆಗೆ ಅನುಕೂಲವಾದ ರಾಜಸತ್ತೆ ಪ್ರಚಾರಕ್ಕೆ ಬಂದಿತು.”

“ಗಣರಾಜ್ಯಗಳು ನಾಶವಾದದ್ದು ಹೇಗೆ?”

“ವರ್ಣವಿಭಜನೆಯ ಅವಿವೇಕ ವಿಧಾನ, ಅದಕ್ಕೆ ಕಾರಣವಾಯಿತು. ಬುದ್ದಿ ಜೀವಿಯಾದ ಬ್ರಾಹ್ಮಣನ ಅನಾಸಕ್ತಿ, ಶಸ್ತ್ರಜೀವಿಯಾದ ಕ್ಷತ್ರಿಯನ ಸ್ವಾರ್ಥ, ಕೃಷಿ ವಾಣಿಜ್ಯಗಳಿಂದ ಗಳಿಸಿದ ಧನವನ್ನು ಮೇಲಿನ ಎರಡು ವರ್ಣಗಳವರಿಗೆ ಸೂರೆಗೊಡುತ್ತಿದ್ದ ವೈಶ್ಯ ಶೂದ್ರರ ಅಸಹಾಯಕತೆ, ಇವುಗಳಿಂದ ಗಣರಾಜ್ಯಗಳ ವಿನಾಶ ತ್ವರಿತಗೊಂಡು, ಅದರ ಸ್ಥಾನದಲ್ಲಿ ರಾಜಸತ್ತೆ ಪ್ರತಿಷ್ಠಿತವಾಯಿತು. ಈ ಅನರ್ಥಕ್ಕೆ ಕಾರಣವಾದ ವರ್ಣವ್ಯವಸ್ಥೆಯನ್ನು ಮತ್ತು ಅದರ ದುಷ್ಫಲವಾದ ಜಾತಿಪದ್ಧತಿಯನ್ನು ಸಮಾಜದಿಂದ ತೊಡೆದು ಹಾಕುವುದು ಶರಣಧರ್ಮದ ಉದ್ದೇಶ. ಪರಿಮಿತ ವಲಯದಲ್ಲಿ ಶರಣರು ಸಾಧಿಸಿರುವ ಈ ಸುಧಾರಣೆ ದೇಶಾದ್ಯಂತ ಹರಡಿದಾಗ ಪ್ರಜೆಗಳ ಸುಖೀರಾಜ್ಯ ಪ್ರತಿಷ್ಠಿತವಾಗುವುದು.”

“ಆ ಕನಸಿನ ರಾಜ್ಯವನ್ನು ಕಾಣುವುದಕ್ಕಾಗಿಯೇ ಅಣ್ಣನವರು ದೂರದ ಕಾಶ್ಮೀರವನ್ನು ಬಿಟ್ಟು ಕಲ್ಯಾಣಕ್ಕೆ ಬಂದದ್ದು-ಅಲ್ಲವೆ?”

ನುಡಿಯಲ್ಲಿ ಕಟಕಿಯಿದ್ದರೂ ಕಟಕಿಯಾಡುವುದು ಕರ್ಣದೇವನ ಉದ್ದೇಶವಾಗಿರಲಿಲ್ಲ.

ಇದನ್ನು ಅರಿತ ಮಾರಯ್ಯನವರು ನಿರ್ಲಿಪ್ತರಾಗಿ ಉತ್ತರ ಕೊಟ್ಟರು : “ಆ ಹಿರಿಯಾಸೆಯಿಂದಲೇ ನಾನು ರಾಜ್ಯವನ್ನು ತ್ಯಜಿಸಿ ಕಲ್ಯಾಣಕ್ಕೆ ಬಂದೆ, ಕರ್ಣದೇವರಸರೆ. ಆದರೆ ನಾನು ಇಲ್ಲಿ ಕಂಡದ್ದು ಆ ಪ್ರಜಾಪೀಡಕ ರಾಜಸತ್ತೆಯ ಇನ್ನೊಂದು ಭಯಂಕರ ರೂಪವನ್ನು ! ರಾಜ್ಯಾಪಹಾರಿ ಮಂಡಲೇಶ್ವರನೊಬ್ಬನ ನಿರಂಕುಶ ದಬ್ಬಾಳಿಕೆ, ಸ್ವಾರ್ಥ, ಕ್ರೌರ್ಯಗಳಿಂದ ಪ್ರಚೋದನೆ ಪಡೆದು, ಧರ್ಮಾಂಧ ಸಮಾಜ ಆ ದಬ್ಬಾಳಿಕೆಗೆ ಕೊಟ್ಟ ಬೆಂಬಲ, ಅದರ ಫಲವಾಗಿ ಶರಣರ ಮೇಲೆ ನಡೆಸಿದ ಘೋರ ಅತ್ಯಾಚಾರ,-ಈ ಅಪ್ರೀತಕರ ವಸ್ತುವಿನ ದುರಂತ ನಾಟಕವೊಂದು ನನ್ನ ಕಣ್ಣುಗಳ ಮುಂದೆ ಅಭಿನೀತವಾಯಿತು. ಶರಣರು ಅಪೇಕ್ಷಿಸುವ ಸುಖೀರಾಜ್ಯ, ಇನ್ನೂ ದೂರ...ದೂರ....ಬಹು ದೂರದಲ್ಲಿದೆಯೆಂದು ತಿಳಿದೆ.”

ಮಾರಯ್ಯನವರ ನುಡಿಗಳ ಆವೇಗ ನಿರಾಶೆಯ ಭಾವಗಳು ಹೇಮಂತದ ಚಳಿಗಾಳಿಯಂತೆ ಅಲ್ಲಿದ್ದವರನ್ನು ತಲ್ಲಣಗೊಳಿಸಿದವು.

ಆಶಾಹತನಂತೆ ಕರ್ಣದೇವ ಕೊಂಚ ಹೊತ್ತು ತಲೆಬಾಗಿ ಸುಮ್ಮನೆ ಕುಳಿತಿದ್ದನು. ಅನಂತರ ಅವನು ದಢಾರನೆ ಎದ್ದು ಸಿದ್ದರಾಮೇಶ್ವರರಿಗೆ ವಂದಿಸಿ, “ನಿಮಗೆ