ಪುಟ:ಕ್ರಾಂತಿ ಕಲ್ಯಾಣ.pdf/೪೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಹಾಪ್ರಸ್ಥಾನ

೪೧೭


ತೊಂದರೆ ಕೊಟ್ಟಿದ್ದಕ್ಕಾಗಿ ಕ್ಷಮಿಸಿ, ಅಣ್ಣನವರೆ,” ಎಂದು ಹೇಳಿ ಉಳಿದ ಶರಣರ ಕಡೆ ತಿರುಗಿ, ನೀವು ಭಾವಿಸಿದಂತೆ ಕ್ಷತ್ರಿಯನು ಪ್ರಜಾಪೀಡಕನಾಗಬಹುದು. ಆದರೆ ಎಂದಿಗೂ ಹೇಡಿಯಾಗುವುದಿಲ್ಲ. ಶರಣರು ನನಗೆ ಸಹಾಯ ಮಾಡಲಿ, ಮಾಡದಿರಲಿ, ಮಾಧವ ನಾಯಕನ ಸಂಗಡ ನಾನು ಯುದ್ಧಹೂಡುತ್ತೇನೆ. ಗೆದ್ದು ಸರ್ವಾಧಿಕಾರಿಯಾಗುವುದು, ಇಲ್ಲವೇ ಯುದ್ಧದಲ್ಲಿ ಸತ್ತು ವೀರಸ್ವರ್ಗ ಪಡೆಯುವುದು, ಇದು ನನ್ನ ನಿರ್ಧಾರ,” ಎಂದು ನುಡಿದು ಅಲ್ಲಿಂದ ಹೊರಟನು.

ಅಂತೇವಾಸಿಯಂತೆ ವೇಷಧರಿಸಿ ಸಂಗಡ ಬಂದಿದ್ದ ಅಂಗರಕ್ಷಕ ಭಟನು, ಕರ್ಣದೇವ ಬಿಸುಟಿದ್ದ ಸನ್ಯಾಸಿಯ ಅಂಗಕಾರ್ಯಗಳನ್ನು ತೆಗೆದುಕೊಂಡು ಹೋಗಲು ಮರೆಯಲಿಲ್ಲ.

ಆ ದಿನ ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆ ಅವರು ಕಲ್ಯಾಣದ ಈಶಾನ್ಯ ಮಹಾದ್ವಾರಕ್ಕೆ ಬಂದರು. ಅಲ್ಲಿ ಕಾವಲಿದ್ದ ಭಟನಾಯಕನು, "ಅಯ್ಯನವರು ಆಗಲೇ ವಲಸೆಯಿಂದ ಹಿಂದಿರುಗಿದಂತಿದೆ,” ಎಂದು ನಗೆಯಾಡಿದನು.

ಯೋಗದಂಡವನ್ನು ಆಡಿಸುತ್ತ ಕರ್ಣದೇವ, “ನನ್ನ ಕಪಿನಿ ಚೀವರಗಳ ಗಂಟನ್ನು ಮಠದಲ್ಲಿ ಮರೆತಿದ್ದೆ, ಭಟನಾಯಕ. ಅಲ್ಲದೆ ರಾಜಗೃಹದ ಹೆಣ್ಣು ಬೆಕ್ಕು ಮರಿ ಹಾಕಿದೆಯಂತೆ. ನಾನು ವಲಸೆ ಹೋದರೆ ಅದನ್ನು ನೋಡಿಕೊಳ್ಳುವವರಾರು? ನಾಲ್ಕು ದಿನ ಬಿಟ್ಟು ಹೋದರಾಯಿತು. ಸಹ್ಯಾದ್ರಿಯ ವನಪ್ರದೇಶ ಅಷ್ಟರಲ್ಲಿ ಎಲ್ಲಿಯೂ ಓಡಿಹೋಗುವುದಿಲ್ಲ,” ಎಂದು ತಾನೂ ನಗೆಯಾಡಿದನು.

ಶರಣರ ಸಹಾಯಕ್ಕಾಗಿ ಕರ್ಣದೇವ ನಡೆಸಿದ ಸಂಧಾನ ಈ ರೀತಿ ಮುಗಿಯಿತು.

***

ಆಂಜನೇಯ ಹೊಳೆಯಾಚಿನ ಶರಣ ಶಿಬಿರವನ್ನು ಬಿಟ್ಟ ಮಾರನೆಯ ದಿನ ಅಪರಾಹ್ನ ಎರಡನೆಯ ಜಾಮದಲ್ಲಿ ಪಡಿಹಾರಿ ಅಪ್ಪಣ್ಣ, ಕೂಡಲ ಸಂಗಮವನ್ನು ಸೇರಿದನು. ನದೀ ತೀರದಲ್ಲಿ ಸಂಗಮೇಶ್ವರ ದೇಗುಲದೆದುರು ಮರ ಬಿದುರುಗಳಿಂದ ಹೊಸದಾಗಿ ಕಟ್ಟಿದ್ದ ನವಕಲ್ಯಾಣಮಂಟಪದಲ್ಲಿ ಪ್ರವಚನ ಸಭೆ ಪ್ರಾರಂಭವಾಗಿತ್ತು. ಮಂಟಪದ ನಡುವೆ ವೇದಿಕೆಯ ಮೇಲೆ ಕುಳಿತು ಬಸವಣ್ಣನವರು ಭಾಷಣ ಮಾಡುತ್ತಿದ್ದರು. ಸಮೀಪದ ಅಗ್ರಹಾರಗಳ ಶಿಷ್ಯರು, ಗುರುಕುಲದ ವಟು ಅಧ್ಯಾಪಕರು, ಗ್ರಾಮವಾಸಿಗಳು, ಸುತ್ತ ಮೌನವಾಗಿ ಕುಳಿತು ಕೇಳುತ್ತಿದ್ದರು. ಸಮಯಕ್ಕಾಗಿ ಕಾಯುತ್ತ ಸಭೆಯ ಅಂಚಿನಲ್ಲಿ ಅಪ್ಪಣ್ಣ ತಾನೂ ಕುಳಿತನು.

ಕಳೆದೆರಡು ವಾರಗಳಿಂದ ಬಸವಣ್ಣನವರು ಶರಣಧರ್ಮದ