ಪುಟ:ಕ್ರಾಂತಿ ಕಲ್ಯಾಣ.pdf/೪೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೮

ಕ್ರಾಂತಿ ಕಲ್ಯಾಣ

ಆಧಾರಸ್ಥಂಭಗಳಾದ ಷಟ್‌ಸ್ಥಳಗಳ ಬಗ್ಗೆ ವಿವರಿಸಿ ಭಾಷಣ ಮಾಡುತ್ತಿದ್ದರು. ಭಕ್ತ, ಮಹೇಶ್ವರ, ಪ್ರಸಾದಿ, ಈ ಮೂರು ಸ್ಥಳಗಳ ವಿವರಣೆ ಮುಗಿದು ಪ್ರಾಣಲಿಂಗಿ ಸ್ಥಳದ ನಿರೂಪಣೆ ಅಂದು ಪ್ರಾರಂಭವಾಗಿತ್ತು.

ಮೊದಲಲ್ಲಿ ಪ್ರಭುದೇವರ ಕೆಲವು ವಚನಗಳನ್ನು ಆಶ್ರಮದ ವಟುಗಳಿಬ್ಬರು ಹಾಡಿದರು. ಆರಂಭದ ವಚನ ಈ ರೀತಿಯಿತ್ತು :

ಕಕ್ಷೆ, ಕರಸ್ಥಳ, ಕಂಠ, ಉತ್ತಮಾಂಗ, ಮುಖ ಸಜ್ಜೆ,
ಅಂಗಸೋಂಕೆಂಬವು ಷಡುಸ್ಥಳದ ದರ್ಶನಾದಿಗಳಿಗೆ
ಬಹಿರಂಗದಲ್ಲಿ ವೇಷ ಲಾಂಛನವಯ್ಯಾ,
ಅಂತರಂಗದಲ್ಲಿ ನಾಲ್ಕು ಸ್ಥಳ-ಬ್ರಹ್ಮರಂಧ್ರ, ಭೂಮಧ್ಯ,
ನಾಸಿಕಾಗ್ರ, ಚೌಕಮಧ್ಯ, ಇಂತೀ ಸ್ಥಾನಂಗಳನರಿಯರಾಗಿ.
ಬ್ರಹ್ಮರಂಧ್ರದಲ್ಲಿ ಲಿಂಗಸ್ವಾಯತ,
ಭ್ರೂ ಮಧ್ಯದಲ್ಲಿ ಜಂಗಮ ಸ್ವಾಯತ,
ನಾಸಿಕಾಗ್ರದಲ್ಲಿ ಪ್ರಸಾದ ಸ್ವಾಯತ,
ಚೌಕಮಧ್ಯದಲ್ಲಿ ಅನುಭಾವ ಸ್ವಾಯತ,
ಅಷ್ಟದಳ ಕಮಲದಲ್ಲಿ ಸರ್ವ ಸ್ವಾಯತ,
ಇದು ಕಾರಣ ಗುಹೇಶ್ವರಾ, ನಿಮ್ಮ ಶರಣರು ಸದಾ ಸನ್ನಿಹಿತರು *
ಗೀತೆ ಮುಗಿದ ಮೇಲೆ ಬಸವಣ್ಣನವರು ಹೇಳಿದರು :

“ಶೈವಧರ್ಮದ ನಿಬಿಡಾರಣ್ಯದಲ್ಲಿ ಸಂಚರಿಸುತ್ತ ಮುಂದೆ ನಾವೊಂದು ಸುಂದರ ಉದ್ಯಾನವನ್ನು ಕಾಣುತ್ತೇವೆ. ಪುರಾತನರ ತತ್ವಶಾಸ್ತ್ರ ಅನುಭಾವಗಳು ಅಲ್ಲಿ ಚೆಲುವಿನ ಹೂಗಳಾಗಿ ನಮ್ಮನ್ನು ನಲಿಸುತ್ತವೆ ; ತಮ್ಮ ಅನುಪಮ ಪರಿಮಳದಿಂದ ನಮಗೆ ಶಾಶ್ವತವಾದ ಆನಂದವನ್ನು ಕೊಡುತ್ತವೆ. ಷಟ್‌ಸ್ಥಳದ ಕೊನೆಯ ಮೂರು ಹಂತಗಳಾದ ಪ್ರಾಣಲಿಂಗಿ, ಶರಣ, ಐಕ್ಯ ಸ್ಥಳಗಳೇ ಆ ಉದ್ಯಾನ, ಭಕ್ತ ಮಾಹೇಶ್ವರ, ಪ್ರಸಾದಿ ಎಂಬ ಮೊದಲ ಮೂರು ಸ್ಥಳಗಳು ಕರ್ಮ ಪ್ರಧಾನವಾದರೆ, ಆಮೇಲಿನ ಮೂರು ಸ್ಥಳಗಳು ಜ್ಞಾನ ಪ್ರಧಾನ. ಷಟ್‌ಸ್ಥಳದ ಈ ಎರಡು ವಿಭಾಗಗಳನ್ನು ಕರ್ಮಕಾಂಡ, ಜ್ಞಾನಕಾಂಡ ಎಂದೂ ಕರೆಯಬಹುದು. ಕರ್ಮಕಾಂಡದಲ್ಲಿ, ಸಾಧಕನ ಆಗಿನ ಅವಸ್ಥೆಯಲ್ಲಿ ಅಗತ್ಯವೆಂದು ಹೇಳಲ್ಪಟ್ಟ ವಿಧಿ ನಿಷೇಧಗಳ ಬಂಧನದಿಂದ ಜೀವನನ್ನು ಬಿಡುಗಡೆ ಮಾಡುವುದು ಜ್ಞಾನಕಾಂಡದ ಉದ್ದೇಶ.

___________

  • ಪ್ರಭುದೇವರ ವಚನಗಳು ಪುಟ ೯೯