ಪುಟ:ಕ್ರಾಂತಿ ಕಲ್ಯಾಣ.pdf/೪೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಹಾಪ್ರಸ್ಥಾನ

೪೨೧

"ಲಿಂಗಾಂಗಿಯಾದ ಶರಣನ ಪ್ರಾಣವೇ ಲಿಂಗವಾಗಿತ್ತಾಗಿ ಆ ಪ್ರಾಣಲಿಂಗಕ್ಕೆ ಸ್ವರವೆಂಬ ವಾಯುವೇ ಸಿಂಹಾಸನವಾಗಿ, ಕಾಲೇ ಕಂಭವಾಗಿ, ದೇಹವೇ ದೇಗುಲವಾಗಿ, ಶಿರವೇ ಸುವರ್ಣದ ಕಲಶವಾಗಿ, ಪ್ರಾಣದಲ್ಲಿ ಲಿಂಗಪ್ರತಿಷ್ಠೆಯಾದ ಮೇಲೆ ಅವನು ಜೀವನ್ಮುಕ್ತನಾಗುತ್ತಾನೆ. ಸಂಬಂಧ ಪಲ್ಲಟಿಸಿ ಅವನು ಪುನಃ ಜೀವನಾಗುವುದಿಲ್ಲ ಎಂಬುದು ವಚನದ ಫಲಿತಾರ್ಥ.+

"ಆ ಮೇಲಿನ ಮೂರು ವಚನಗಳು ತತ್ವಶಾಸ್ತ್ರ ಅನುಭಾವಗಳ ಕವಿತಾ ರೂಪವಾದ ಮೂರು ಅನುಪಮ ಮುಕ್ತಕಗಳು.

ತೆರೆಯ ಮರೆಯ ಕುರುಹೆಂಬುದೇನೋ?
ಒಳಗೆ ಲಿಂಗದ ಅನುವಿಡಿದ ಬಳಿಕ ಪೂಜಿಸುವನಾರೋ?
ಪೂಜಿಸಿಕೊಂಬ ದೇವನಾರೋ?
ಹಿಂದು ಮುಂದು, ಮುಂದು ಹಿಂದಾಯಿತ್ತು!
ಗುಹೇಶ್ವರಾ,
ನಾನು ನೀನು, ನೀನು ನಾನಾದ ಬಳಿಕ
ಮತ್ತೇನುಂಟು ಹೇಳಾ!
ನೆನೆ ನೆನೆಯೆಂದೊಡೆ ಏನ ನೆನೆವೆನಯ್ಯ!
ಎನ್ನ ಕಾಯವೇ ಕೈಲಾಸವಾಗಿತ್ತು!
ಮನ ಲಿಂಗವಾಯಿತ್ತು! ತನು ಸೆಜ್ಜೆಯಾಯಿತ್ತು!
ನೆನೆವರೆ ದೇವರುಂಟೇ? ನೋಡುವರೆ ಭಕ್ತರುಂಟೇ?
ಗುಹೇಶ್ವರಾ, ಲಿಂಗಲೀಯವಾಯಿತ್ತು!
ಗಿಡುವಿನ ಮೇಲಣ ತುಂಬಿ
ವಿಕಸಿತವಾಯಿತ್ತು ತುಂಬಿ, ನೋಡಾ! ಆ
ತುಮ ತುಂಬಿ ನೋಡಾ,
ಪರಮಾತುಮ ತುಂಬಿ, ತುಂಬಿ ನೋಡಾ!
ಗುಹೇಶ್ವರನೆಂಬ ಲಿಂಗಕ್ಕೆ ಎರಗಿ
ನಿಬ್ಬೆರಗಾಯಿತ್ತು ತುಂಬಿ ನೋಡಾ!*

____________

+ ಪ್ರಭು ದೇವರ ವಚನಗಳು, ಪುಟ ೧೦೦.

  • ಲಿಂಗಲೀಲಾ ವಿಲಾಸ ಚಾರಿತ್ರ, ಪುಟ ೩೧೪.