ಪುಟ:ಕ್ರಾಂತಿ ಕಲ್ಯಾಣ.pdf/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೩ ಕ್ರಾಂತಿ ಕಲ್ಯಾಣ ಬಸವಣ್ಣನವರು ಜಂಗಮ ತಂಡಕ್ಕೆ ಕೈ ಮುಗಿದು ಹೇಳಿದರು : “ನೀವು ಉತ್ತರಾಪಥದಿಂದ ದೂರ ದಕ್ಷಿಣದ ಸಂಗಮಕ್ಕೆ ಸಂಗಮನಾಥನ ದರ್ಶನಕ್ಕಾಗಿ ಬಂದದ್ದು ನನಗೆ ಹೆಚ್ಚು ಆನಂದವನ್ನುಂಟುಮಾಡಿದೆ. ಭಕ್ತಿ ಪ್ರಧಾನವಾದ ಶೈವ ಧರ್ಮವು ಭಾರತಕ್ಕೆ ದಕ್ಷಿಣದ ಕಾಣಿಕೆ. ಶರಣರನ್ನು ಉದ್ದರಿಸಿದಂತೆ ಭಾರತವರ್ಷದ ಜನಸಮುದಾಯವನ್ನೂ ಉದ್ಧರಿಸಬಲ್ಲ ಶಕ್ತಿಯಿದೆ ಅದಕ್ಕೆ ಉತ್ತರ ದಕ್ಷಿಣ, ಪೂರ್ವ ಪಶ್ಚಿಮಗಳೆಂಬ ಭೇದಭಾವಗಳೆಲ್ಲ ಅಳಿದು, ಶಿವ ಭಕ್ತರೆಲ್ಲ ಒಂದೇ ಎಂಬ ಐಕ್ಯಭಾವನೆ ಜನರಲ್ಲಿ ಮೂಡುವಂತೆ ಕೂಡಲ ಸಂಗಮದೇವನು ಕರುಣಿಸಲಿ. ನನ್ನ ಈ ಸಂದೇಶವನ್ನು ನೀವು ಆಸೇತುಹಿಮಾಚಲವೂ ಹರಡಿರಿ.” ಬಸವಣ್ಣನವರ ಅಸ್ಕಲಿತ ಪ್ರಾಕೃತ ವಾಣಿ ಉತ್ತರಾಪಥದ ಜಂಗಮರನ್ನು ಅಚ್ಚರಿಗೊಳಿಸಿತು. ಅವರ ನಾಯಕನು ಬಸವಣ್ಣನವರಿಗೆ ಕೈಯೆತ್ತಿ ನಮಸ್ಕಾರ ಮಾಡಿ, “ಇಂದು ನಮ್ಮ ಪ್ರವಾಸ ಫಲಿಸಿತು, ಅಣ್ಣನವರೆ. ನಾವು ಧನ್ಯರಾದೆವು,” ಎಂದನು. ಎಲ್ಲರ ಕಣ್ಣುಗಳಲ್ಲಿ ಆನಂದಬಾಷ್ಪಗಳು ಸುರಿಯುತ್ತಿದ್ದವು. ಜಂಗಮ ತಂಡದಿಂದ ಬೀಳ್ಕೊಂಡ ಮೇಲೆ ಬಸವಣ್ಣನವರು ಅಪ್ಪಣ್ಣನಿಂದ ಕಲ್ಯಾಣದ ಘಟನೆಗಳ ಬಗೆಗೆ ವಿವರಗಳನ್ನು ತಿಳಿದುಕೊಂಡರು. ಶರಣರು ಮಹಮನೆಯನ್ನು ಬಿಟ್ಟು ಆಂಜನೇಯ ಹೊಳೆಯಾಚಿನ ಗಣಾಚಾರಿ ಯೋಧರ ಶಿಬಿರವನ್ನು ಸೇರುವವರೆಗೆ ನಡೆದುದೆಲ್ಲವನ್ನೂ ಅಪ್ಪಣ್ಣ ಹೇಳಿದನು. ಕೊನೆಗೆ ಬಸವಣ್ಣನವರೆಂದರು : “ನಡೆಯಬಾರದುದು ನಡೆದುಹೋಯಿತು, ಅಪಣ್ಣ, ಕೊಲೆಗಡುಕರಾರೇ ಆಗಲಿ, ಪರೋಕ್ಷವಾಗಿ ಅದಕ್ಕೆ ಕಾರಣರೆಂಬ ಅಪವಾದ ಶರಣರಿಗೆ ತಪ್ಪಿದ್ದಲ್ಲ. ಅದೇ ನನ್ನ ಮುಖ್ಯ ಚಿಂತೆ. ನೀನು ಶಿಬಿರವನ್ನು ಬಿಟ್ಟಾಗ ನಗರದ ಸ್ಥಿತಿ ಹೇಗಿತ್ತೆಂಬುದು ತಿಳಿದಿದೆಯೆ?” “ನನಗೆ ಆ ವಿಚಾರಗಳೊಂದೂ ತಿಳಿಯದು, ಅಣ್ಣನವರೆ. ಇದು ನೀಲಲೋಚನೆ ಅಕ್ಕನವರು ಕಳುಹಿಸಿರುವ ಪತ್ರ” ಎಂದು ಅಪ್ಪಣ್ಣ ಅಂಗಿಯಿಂದ ಓಲೆ ತೆಗೆದುಕೊಟ್ಟನು. ಬಸವಣ್ಣನವರು ಓಲೆಯನ್ನು ಓದಿಕೊಂಡು ತುಸು ಹೊತ್ತು ಚಿಂತಿಸಿ ಬಳಿಕ ಹೇಳಿದರು : "ತನ್ನನ್ನು ತಾನು ತಿಳಿಯುವುದು ಮುಕ್ತಿಯ ರಾಜಪಥ. ಜನರನ್ನು ಈ ಮಾರ್ಗದಲ್ಲಿ ನಡೆಸುವ ಪರಮೋದ್ದೇಶದಿಂದ ಶರಣಧರ್ಮದ ಸಿದ್ಧಿಸಾಧನೆಗಳೆಲ್ಲ ರೂಪಿತವಾಗಿವೆ. ನೀನು ಆ ಮಾರ್ಗವನ್ನು ಮುಟ್ಟಿದುದು ನನಗೆ ಸಮಾಧಾನವನ್ನುಂಟುಮಾಡಿದೆ,” ಎಂದು ನಾನು ಹೇಳಿದುದಾಗಿ ನೀಲಲೋಚನೆಗೆ ತಿಳಿಸು.