ಪುಟ:ಕ್ರಾಂತಿ ಕಲ್ಯಾಣ.pdf/೪೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೪೦ ಕ್ರಾಂತಿ ಕಲ್ಯಾಣ ಉಳಿವೆಗೆ ಹೊರಟ ಶರಣರ ಯಾತ್ರಾದಳ ಕಲ್ಯಾಣವನ್ನು ಬಿಟ್ಟು ಒಂದು ವಾರದ ಮೇಲೆ ಕೃಷ್ಣಾ ನದಿಯ ಉತ್ತರ ದಡದಲ್ಲಿದ್ದ ತಂಗಡಿ ಎಂಬ ಗ್ರಾಮಕ್ಕೆ ಬಂದಿತು. ಆ ದಿನ ರಾತ್ರಿ ಶಿಬಿರದ ಹೊರಗೆ ಬಯಲಲ್ಲಿ ಕುಳಿತು ದಳದ ನಾಯಕರು ಯಾತ್ರೆಯ ಮುನ್ನಡೆಯ ಬಗೆಗೆ ಪರ್ಯಾಲೋಚನೆ ನಡೆಸುತ್ತಿದ್ದರು. ಮಾಚಿದೇವರು ಹೇಳಿದರು : “ಕೃಷ್ಣ ತುಂಬಿ ಹರಿಯುತ್ತಿದೆ. ಪ್ರವಾಹ ಇಳಿಯುವವರೆಗೆ ದಾಟುವುದು ಸಾಧ್ಯವಲ್ಲವೆಂದು ಅಂಬಿಗರು ಹೇಳುತ್ತಾರೆ. ನಾವು ಎರಡು ದಿನ ಇಲ್ಲಿಯೇ ಉಳಿಯಬೇಕಾಗಬಹುದು.” - ಚೆನ್ನಬಸವಣ್ಣನವರು ತುಸು ಹೊತ್ತು ಯೋಚಿಸುತ್ತಿದ್ದು, “ನಾವು ಮುನ್ನೆಚ್ಚರಿಕೆಯಿಂದ ಸರಸ್ವತೀ ಭಂಡಾರವನ್ನು ಮೊದಲೇ ಕಳುಹಿಸಿದ್ದು ಉತ್ತಮವಾಯಿತು. ಸಂಗಡ ಹೋದ ಕಿನ್ನರಿ ಬ್ರಹ್ಮಯ್ಯನಿಂದ ಸುದ್ದಿ ಬಂದಿತೆ?” ಎಂದು ಪ್ರಶ್ನಿಸಿದರು. “ಓಲೆ ಕಡತದ ಹೇರುಗಳೊಡನೆ ಅವರು ಮುರುಗೋಡು ಹಾಯ್ದಡವನ್ನು ದಾಟಿದುದಾಗಿ ಅಂಬಿಗರು ಹೇಳುತ್ತಾರೆ. ಇನ್ನೆರಡು ದಿನಗಳಲ್ಲಿ ಅವರು ಉಳಿವೆಯ ಮಹಾಮನೆ ಸೇರಬಹುದು,” ಎಂದು ಮಾಚಿದೇವರು ಹೇಳಿದರು. “ಇಲ್ಲಿಂದ ಹರಿದಾರಿ ದೂರದಲ್ಲಿರುವ ತಡಸಿಯ ಹಾಯ್ದಡವನ್ನು ದುರಸ್ತು ಮಾಡಲು ಬಿಜ್ಜಳರಾಯರು ಹೆಚ್ಚು ಹಣ ವೆಚ್ಚ ಮಾಡಿದರೆಂದು ಕೇಳಿದ್ದೇನೆ. ಪ್ರವಾಹದ ಬಿರುಸು ಅಲ್ಲಿ ಹೇಗಿದೆಯೆಂದು ತಿಳಿಯಿತೆ?” “ನಾವು ತಡಸದ ಹಾಯ್ದಡದಿಂದಲೇ ನದಿಯನ್ನು ದಾಟುವುದು, ಚೆನ್ನಬಸವಣ್ಣನವರೆ. ಆದರೆ ಅಲ್ಲಿ ಶಿಬಿರಕ್ಕೆ ಸ್ಥಳ ಅನುಕೂಲವಾಗಿಲ್ಲ,” ಎಂದರು ಮಾಚಿದೇವರು. ಚೆನ್ನಬಸವಣ್ಣನವರು ಮೌನ, ಮತ್ತೊಬ್ಬ ಹಿರಿಯ ಶರಣನು, “ತಡಸದ ಹಾಯ್ದಡದಿಂದ ಹರಿದಾರಿ ದೂರದಲ್ಲಿ ನಾವು ಶಿಬಿರ ಹಾಕಲು ಕಾರಣ ?” ಎಂದನು. ಮಾಚಿದೇವರು ಹೇಳಿದರು: “ತಡಸದ ಹಾಯ್ದಡ ಬಯಲಲ್ಲಿರುವುದರಿಂದ ಶಿಬಿರಕ್ಕೆ ಸಾಕಾದಷ್ಟು ರಕ್ಷಣೆಯಿರುವುದಿಲ್ಲ. ತಂಗಡಿಯ ಹಾಯ್ದಡದ ವಿಚಾರ ಹಾಗಲ್ಲ. ಸಣ್ಣ ಕಣಿವೆಯೊಂದನ್ನು ಹಾದು ನಾವಿಲ್ಲಿಗೆ ಬರಬೇಕು. ಶಿಬಿರವೆಲ್ಲಿದೆಯೆಂದು ಯಾರಿಗೂ ತಟ್ಟನೆ ತಿಳಿಯುವುದಿಲ್ಲ. ಕಣಿವೆಯಲ್ಲಿ ಗಣಾಚಾರಿ ಯೋಧರ ರಕ್ಷಕ ದಳಗಳು ಕಾವಲಿವೆ.” ನಾಲ್ಕು ದಿನಗಳ ಹಿಂದೆ ಯಾತ್ರಾದಳವನ್ನು ಸೇರಿದ್ದ ಕೂಗಿನಮಾರಿ ತಂದೆ