ಪುಟ:ಕ್ರಾಂತಿ ಕಲ್ಯಾಣ.pdf/೪೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೪೧ ಎಂಬ ಮತ್ತೊಬ್ಬ ಹಿರಿಯ ಭಕ್ತನು, “ಈಗ ನಮಗೆ ಇಷ್ಟೆಲ್ಲ ಎಚ್ಚರಿಕೆಯ ಅಗತ್ಯವಿರುವುದಿಲ್ಲ. ಸುಮಾರು ಮೂರು ಸಾವಿರ ಮಂದಿ ಗಣಾಚಾರಿ ಯೋಧರು ಈಗ ನಮ್ಮ ಸಂಗಡಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಶಿಕ್ಷಣ ಪಡೆದ ಸೈನಿಕರು. ಬಿಲ್ಲು ಬಾಣ ಕತ್ತಿ ಭಲ್ಯಗಳನ್ನು ದಕ್ಷತೆಯಿಂದ ಉಪಯೋಗಿಸಬಲ್ಲರು. ಉಳಿದವರು ಗರಡಿ ಸಾಧಕ ಕಲಿತ ಜಟ್ಟಿಗಳು, ಮಾಧವ ನಾಯಕನ ಸೈನ್ಯದೊಡನೆ ಹೋರಾಡುವ ಶಕ್ತಿ ನಮಗಿದೆ,” ಎಂದು ಅಭಿಮಾನದಿಂದ ನುಡಿದನು. “ಹೋರಾಟ ನಮ್ಮ ಉದ್ದೇಶವಲ್ಲ ಮಾರಿ ತಂದೆಗಳೆ” ಮಾಚಿದೇವರು ಹೇಳಿದರು : “ಯಾತ್ರಾದಳ ಕೃಷ್ಣಾ ನದಿಯನ್ನು ದಾಟಿದರೆ ಮುಂದೆ ಉಳಿವೆಯ ಮಾರ್ಗ ಸುರಕ್ಷಿತವಾಗುತ್ತದೆ. ಮಾಧವ ನಾಯಕನ ಸುಶಿಕ್ಷಿತ ಸೈನ್ಯದೊಡನೆ ಹೋರಾಡುವುದು ಗಣಾಚಾರಿ ಯೋಧರಿಗೆ ಸಾಧ್ಯವಲ್ಲ. ನಮ್ಮಲ್ಲಿ ಆನೆ ಕುದುರೆ ರಥಗಳಿರುವುದಿಲ್ಲ. ಗಜತುರಗ ರಥಗಳೆದುರಿಗೆ ಪದಾತಿ ಸೈನ್ಯ ಹೋರಾಡುವುದು ಹರಿಯುವ ನೀರಿಗೆ ಹುಲ್ಲಿಂದ ಕಟ್ಟೆ ಕಟ್ಟಿದಂತೆ, ವಿಫಲವಾಗುವ ವ್ಯರ್ಥ ಸಾಹಸ.” ಮಾಚಿದೇವರ ಅಭಿಪ್ರಾಯವನ್ನು ಅನುಮೋದಿಸಿ ಚೆನ್ನಬಸವಣ್ಣನವರು ಹೇಳಿದರು : “ಅಕಾರಣ ನಾಯಕನ ಸೈನ್ಯ ನಮ್ಮನ್ನು ಬೆನ್ನಟ್ಟಿಬಂದರೆ ಆತ್ಮರಕ್ಷಣೆಗಾಗಿ ನಾವು ಹೋರಾಡಲು ಸಿದ್ದ. ಅಂತಹ ಸಂದರ್ಭದಲ್ಲಿ ನಾನೂ ಶಸ್ತ್ರ ಹಿಡಿಯುತ್ತೇನೆ. ಆದರೆ ಬುದ್ಧಿಪೂರ್ವಕವಾಗಿ ಹೋರಾಟವನ್ನು ಪ್ರಚೋದಿಸುವುದು ನಮಗಿಷ್ಟವಿಲ್ಲ.” ಈ ಮಾತುಗಳು ಮುಗಿಯುತ್ತಿದ್ದಂತೆ ಗಣಾಚಾರಿ ಯೋಧ ದಳಗಳ ಮುಖ್ಯ ನಾಯಕನು ಸೊಡ್ಡಲ ಬಾಚರಸನನ್ನು ಕರೆದುಕೊಂಡು ಅಲ್ಲಿಗೆ ಬಂದನು. “ನಾವು ನಗರವನ್ನು ಬಿಟ್ಟ ಮೇಲೆ ಅಲ್ಲಿ ಏನು ನಡೆಯಿತು ಎಂಬುದು ಇವರಿಗೆ ತಿಳಿದಿದೆ, ಅದನ್ನು ಕೇಳಿ ನಾವು ಮುಂದಿನ ಕಾರ್ಯಕ್ರಮ ನಿರ್ಧರಿಸಬೇಕಾಗುವುದು,” ಎಂದು ಅವನು ಹೇಳಿದನು. ಸಕಲೇಶ ಮಾದರಸರನ್ನು ಶ್ರೀಶೈಲದಲ್ಲಿ ಬಿಟ್ಟು ಸುರಪುರದ ಮಾರ್ಗವಾಗಿ ಉಳಿವೆಗೆ ಬರಲು ನಿಯುಕ್ತನಾಗಿದ್ದ ಸೊಡ್ಡಲ ಬಾಚರಸನು ಹಠತ್ತಾಗಿ ಹಿಂದಿರುಗಿದ್ದನ್ನು ಕಂಡು ಮಾಚಿದೇವರಿಗೆ ಅಚ್ಚರಿ ಆಗಿತ್ತು. ತುಸು ಗಡುಸಾದ ದನಿಯಿಂದ ಅವರು, “ನಿನಗೆ ಗೊತ್ತಾಗಿದ್ದ ಕಾರ್ಯವನ್ನು ಸಂಪೂರ್ಣವಾಗಿ ನಿರ್ವಹಿಸಿದೆಯಾ, ಬಾಚರಸ ?” ಎಂದರು. ಬಾಚರಸ ಕೈಮುಗಿದು ಹೇಳಿದನು : “ಕೋಪ ಮಾಡಬೇಡಿ, ಅಣ್ಣನವರೆ. ಇದರಲ್ಲಿ ನನ್ನ ಅಪರಾಧವೇನೂ ಇರುವುದಿಲ್ಲ. ಮಹಾದ್ವಾರವನ್ನು ದಾಟಿ ನಗರದಿಂದ ಹೊರಗೆ ಬಂದ ಮೇಲೆ ನಿಮ್ಮಿಂದ ಬೀಳ್ಕೊಂಡು ನಾನು ಮತ್ತು ಸಕಲೇಶ