ಪುಟ:ಕ್ರಾಂತಿ ಕಲ್ಯಾಣ.pdf/೪೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ಮೇಲೆ ಹೊರಿಸಲು ಹವಣಿಸುತ್ತಿರುವ ಮಾಧವ ನಾಯಕನು, ಮುಂದೆ ನಮ್ಮನ್ನು ತಡೆಯಲು ಸೈನ್ಯ ಕಳುಹಿಸಬಹುದು. ನಾವು ಕೂಡಲೇ ಕೃಷ್ಣಯನ್ನು ದಾಟಬೇಕು. ತಡಸದ ಹಾಯ್ದಡ ಇಲ್ಲಿಗಿಂತ ಅನುಕೂಲವಾಗಿದೆಯೇ ಎಂಬುದನ್ನು ತಿಳಿದು ಬರಲು ನಾನು ಈ ರಾತ್ರಿಯೇ ಅಂಬಿಗರನ್ನು ಕಳುಹಿಸುತ್ತೇನೆ. ಅವರು ಹಿಂದಿರುಗಿದ ಮೇಲೆ ಪುನಃ ಸಭೆ ಸೇರಿ ಮುಂದಿನ ಕಾರ್ಯವನ್ನು ನಿರ್ಧರಿಸಬೇಕಾಗುವುದು.” ಸಲಹೆಗೆ ಶರಣರೆಲ್ಲ ಒಪ್ಪಿದರು. ಆ ದಿನ ರಾತ್ರಿ ಶಿಬಿರದ ಸುತ್ತಮುತ್ತ ಸಮೀಪದ ಗುಡ್ಡಗಳಲ್ಲಿ, ಗಣಾಚಾರಿ ಯೋಧರ ಕಾವಲು ಹೆಚ್ಚಿಸುವಂತೆ ಮಾಚಿದೇವರು ನಾಯಕನಿಗೆ ಹೇಳಿದರು. ಮರುದಿನ ಮುಂಜಾವಿನಲ್ಲಿ ಶರಣೆಯರಿಗೆ ಗೊತ್ತಾಗಿದ್ದ ಗೂಡಾರದಲ್ಲಿ ಮಲಗಿ ನಿದ್ರೆ ಮಾಡುತ್ತಿದ್ದ ನೀಲಲೋಚನೆ ಹಠಾತ್ತಾಗಿ ಎಚ್ಚೆತ್ತಳು. ಪರಿಚಿತವಾದ ಕಂಠವೊಂದು ಅವಳನ್ನು ತನ್ನೆಡೆಗೆ ಕರೆಯುತ್ತಿತ್ತು. ಶಿಬಿರದ ಗಲಿಬಿಲಿ, ತುಂಬಿ ಹರಿಯುತ್ತಿದ್ದ ಕೃಷ್ಣಯ ಅಬ್ಬರ ಇವುಗಳ ನಡುವೆ ಕ್ಷೀಣವಾಗಿ, ಅಸ್ಪುಟವಾಗಿ ಕೇಳಿ ಬರುತ್ತಿದ್ದ ಆ ದನಿಯನ್ನು ನೀಲಲೋಚನೆ ಕೂಡಲೆ ಗುರುತಿಸಿದಳು. ಬಸವಣ್ಣನವರ ಶೃತಿಮಧುರ ಗಂಭೀರ ಕಂಠ, ದೂರದ ಸಂಗೀತದಂತೆ ಅವಳನ್ನು ಕರೆಯುತ್ತಿತ್ತು. ನೀಲಲೋಚನೆ ಎದ್ದು ಕುಳಿತಳು. ರಾತ್ರಿ ಬಹಳ ಹೊತ್ತು ಅವಳಿಗೆ ನಿದ್ರೆ ಬಂದಿರಲಿಲ್ಲ. ಮುಂಜಾವಿನಲ್ಲಿ ಜೋಂಪು ಹತ್ತಿ ಕಣ್ಣು ಮುಚ್ಚಿದಾಗ ಆ ಅಸ್ಪುಟ ದನಿ ಕೇಳಿ ಅವಳು, ನಿದ್ರೆಯ ಯೋಚನೆಯನ್ನೇ ಬಿಟ್ಟು, ಮೈಯೆಲ್ಲ ಕಿವಿಯಾಗಿ, ಕೃಷಿತ ಚಾತಕಿಯಂತೆ ಆ ಶಬ್ದರೂಪ ಸುಧೆಯ ಒಂದೊಂದು ಹನಿಯನ್ನೂ ಹಿಡಿಯಲು ಪ್ರಯತ್ನಿಸಿದಳು. ಆದರೆ ಕೊನೆಯವರೆಗೆ ಕರೆ ಅಸ್ಪುಟವಾಗಿಯೇ ಉಳಿಯಿತು. “ಏಕೆ ನೀಲಾ ? ಆಗಲೆ ಎಚ್ಚರವಾಯಿತೆ?” -ಮಲಗಿದ್ದಂತೆಯೇ ನಾಗಲಾಂಬೆ ಕೇಳಿದಳು. ತನಗಾದ ವಿಚಿತ್ರ ಅನುಭವವನ್ನು ನೀಲಲೋಚನೆ ವಿವರಿಸಿದಾಗ ನಾಗಲಾಂಬೆ ಹೇಳಿದಳು : “ಅದರಲ್ಲಿ ವಿಚಿತ್ರವೇನೂ ಇಲ್ಲ. ಬಸವೇಶ ಸಂಗಮದಲ್ಲಿದ್ದರೂ ಅವನ ಮನಸ್ಸು ಶರಣರ ಯಾತ್ರಾದಳದ ಸಂಗಡಿದೆ. ಚಕ್ಕಡಿಯವರು ಮೊದಲಾಗಿ ಮಾಚಿದೇವರವರೆಗೆ ಯಾತ್ರಾದಳದಲ್ಲಿರುವವರೆಲ್ಲ 'ಬಸವಾ!” ಎಂದು ನಾಮಸ್ಮರಣೆ ಮಾಡಿ ಏಳುತ್ತಾರೆ. ಬಸವೇಶನ ವಚನಗೀತೆಗಳು ಎಲ್ಲರ ಬಾಯಲ್ಲಿ ನಲಿಯುತ್ತಿವೆ.