ಪುಟ:ಕ್ರಾಂತಿ ಕಲ್ಯಾಣ.pdf/೪೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ್ರಾಂತಿ ಕಲ್ಯಾಣ ಅಧಿಕೃತ ಮುಂದಾಳು. ನಿಮ್ಮಲ್ಲಿ ನನ್ನ ಬಿನ್ನಪವೊಂದಿದೆ,” ಎಂದರು. ಚೆನ್ನಬಸವಣ್ಣನವರು ಸಹಜ ವಿನಯದಿಂದ, “ವಯಸ್ಸಿನಂತೆ ನೀವು ಜ್ಞಾನದಲ್ಲಿಯೂ ನನಗಿಂತ ಹಿರಿಯರು, ಅಣ್ಣ. ನನ್ನಲ್ಲಿ ನಿಮ್ಮ ಬಿನ್ನಪವೇ ? ನಿಮ್ಮ ಕರುಣೆ ಆದರಗಳ ಫಲವಾಗಿ ನಾನು ಅಧ್ಯಕ್ಷನಾಗಿದ್ದೇನೆ,” ಎಂದರು. ಆದರೂ ವಿವೇಕ ತೋರಿಸುವ ಮಾರ್ಗದಲ್ಲಿ ನಡೆಯುವುದು ನನ್ನ ಕರ್ತವ್ಯ. ನನ್ನ ಬಿನ್ನಪವನ್ನು ಕೇಳಿ, ಅದರ ಪರಿಹಾರ ಮಾರ್ಗವನ್ನು ನೀವು ಸೂಚಿಸಬೇಕಾಗಿದೆ,” ಎಂದು ಮಾಚಿದೇವರು ಒತ್ತಾಯ ಪಡಿಸಿದರು. “ನಾನು ಅಧ್ಯಕ್ಷನೆಂಬುದನ್ನು ಮರೆತು, ನೆಚ್ಚಿನ ಗೆಳೆಯನಂತೆ ನೀವು ಹೇಳತಕ್ಕದ್ದನ್ನು ಹೇಳಬಹುದು, ಅಣ್ಣನವರೆ,” ಎಂದು ಕೊನೆಗೆ ನುಡಿದರು, ಚೆನ್ನಬಸವಣ್ಣನವರು. “ಶರಣರ ವಿಚಾರದಲ್ಲಿ ನಾನು ಒಂದು ಅಪರಾಧ ಮಾಡಿದ್ದೇನೆ. ನಾವು ಕಲ್ಯಾಣವನ್ನು ಬಿಟ್ಟಂದಿನಿಂದ ನಡೆದ ಎಲ್ಲ ಅನರ್ಥಗಳಿಗೆ ನನ್ನ ಅವಿವೇಕ ಅಚಾತುರ್ಯಗಳು ಕಾರಣ. ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ.” ಎಂದು ಮಾಚಿದೇವರು ನುಡಿದರು. “ನಿಮ್ಮ ಅಪರಾಧವೇನು ?” ಎಂದು ಚೆನ್ನಬಸವಣ್ಣನವರು ಸಹಜವಾಗಿ ಪ್ರಶ್ನಿಸಿದರು. ಮಾಚಿದೇವರು ಹೇಳಿದರು : “ನಾನು ಶರಣದೀಕ್ಷೆ ಪಡೆದು ಅನುಭವ ಮಂಟಪವನ್ನು ಸೇರುವ ಮೊದಲು ಐಯಾವಳೆಯ ಐನೂರ್ವರು ಮಹಾಸಂಘದ ಕ್ರಿಯಾಸಮಿತಿಯ ಪ್ರಾಂತೀಯ ಅಧ್ಯಕ್ಷನಾಗಿದ್ದೆ. ಸಂಘದ ಆಜ್ಞೆ ಆದೇಶಗಳನ್ನು ಪ್ರಶ್ನಿಸದೆ, ಪರ್ಯಾಲೋಚಿಸದೆ, ಕಾರ್ಯಗತ ಮಾಡುವುದಾಗಿ ಆಗ ನಾನು ಮಾಡಿದ ಪ್ರತಿಜ್ಞೆಯಂತೆ ನಡೆಯುವುದು ಬದುಕಿರುವವರೆಗೆ ನನ್ನ ಆದ್ಯ ಕರ್ತವ್ಯ. ಈ ನಿಯಮಕ್ಕೆ ಅಧೀನವಾಗಿ ನಾನು ಜಂಗಮ ವೇಷಧಾರಿ ಬೊಮ್ಮರಸನಿಗೆ ಮಹಮನೆಯಲ್ಲಿ ಆಶ್ರಯ ದೊರಕುವಂತೆ ಮಾಡಿ, ಅವನು ಧರ್ಮೋಪದೇಶಿಯಾಗಿ ರಾಜಗೃಹವನ್ನು ಪ್ರವೇಶಿಸುವಂತೆ ಅವಕಾಶ ಕಲ್ಪಿಸಿದೆ. ಮಹಾಸಂಘದ ಸಹಾಯದಿಂದ ಮಧುವರಸಾದಿಗಳನ್ನು ಉದ್ಧರಿಸಲು ಪ್ರಯತ್ನಿಸಿದೆ. ಜಗದೇಕಮಲ್ಲ ಬೊಮ್ಮರಸರು ರಾಜಗೃಹದ ಬಂಧನದಿಂದ ಪಾರಾಗಲು ಬೇಕಾಗಿದ್ದ ದೀವಟಿಗೆಯವರ ಸಮವಸ್ತ್ರ ಜಮದಂಡಿಗಳನ್ನು ಒದಗಿಸಿದೆ. ಚಾಲುಕ್ಯ ಅರಸೊತ್ತಿಗೆಯ ಪುನಃಪ್ರತಿಷ್ಠೆಗಾಗಿ ನಡೆಯುತ್ತಿದ್ದ ರಾಜಕೀಯ ಒಳಸಂಚಿಗೆ ಸಹಾಯಕನಾದೆ. ಅದು ಬಿಜ್ಜಳನ ಕೊಲೆಯಲ್ಲಿ ಪರ್ಯವಸಾನವಾಗುವುದೆಂದು ನಾನು ಭಾವಿಸಿರಲಿಲ್ಲ. ಈ ನನ್ನ