ಪುಟ:ಕ್ರಾಂತಿ ಕಲ್ಯಾಣ.pdf/೪೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೭೯ -ಎಂದು ಕ್ರಮಿತನು ಆಸನದಿಂದೆದ್ದನು. “ನಿಮ್ಮ ಕಾರ್ಯದಕ್ಷತೆ ಸ್ವಾಮಿನಿಷ್ಟೆಗಳಿಗಾಗಿ ನಾನು ಕೃತಜ್ಞನು, ಕ್ರಮಿತರೆ. ವಾನಪ್ರಸ್ಥ ನಿಮ್ಮ ಉದ್ದೇಶವಾದರೆ ನಾನು ತಡೆಯುವುದಿಲ್ಲ. ಆತ್ರೋದ್ದಾರಕ್ಕೆ ಅಡ್ಡಿ ಬರುವುದು ಸಲ್ಲ,” ಎಂದು ಹೇಳಿ ಸೋಮೇಶ್ವರನು ಕ್ರಮಿತನ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡಿ, ಬೀಳ್ಕೊಡುವ ಮುನ್ನ ಇನ್ನೊಂದು ಪ್ರಶ್ನೆ ಉಳಿದಿದೆ,” ಎಂದನು. - “ಕೇಳಬಹುದು, ಸೋಮೇಶ್ವರ" “ತಂದೆಯ ಕೊಲೆಗೆ ಶರಣರು ಕಾರಣವೆಂದು ಮಾಧವ ನಾಯಕನು ಮಾಡುತ್ತಿರುವ ಪ್ರಚಾರದ ಅರ್ಥವೇನು ? ಅದರಲ್ಲಿ ಸತ್ಯವಿದೆಯೆ ?” ಆರುವ ಮೊದಲು ದೀಪ ಕೊನೆಯ ಸಾರಿ ಮಿನುಗುವಂತೆ ಕ್ರಮಿತನ ಮುಖದಲ್ಲಿ ತಿರಸ್ಕಾರದ ನಗುವೊಂದು ಮಿನುಗಿತು. ಅವನು ಹೇಳಿದನು : “ಶರಣಧರ್ಮದ ಮೇಲಿನ ವಿದ್ವೇಷವೇ ಮಾಧವ ನಾಯಕನ ಎಲ್ಲ ಚಟುವಟಿಕೆಗಳ ಕಾರಣ. ಬಿಜ್ಜಳರಾಯರು ಅವನನ್ನು ಮಹಾದಂಡನಾಯಕನನ್ನಾಗಿ ನೇಮಿಸಿಕೊಂಡದ್ದೇ ಕಲ್ಯಾಣದ ನಾಶಕ್ಕೆ ಕಾರಣವಾಯಿತು. ಶೈವಮಠ ಮಂದಿರಗಳನ್ನು ನಾಶಮಾಡಿ ಚಾಲುಕ್ಯರಾಜ್ಯದಲ್ಲಿ ಮತೀಯ ಕಲಹದ ವಿಷಬೀಜವನ್ನು ಬಿತ್ತಿದ ದೇಶದ್ರೋಹಿ ಅವನು. ಕೂಡಲೆ ಎಲ್ಲ ಅಧಿಕಾರವನ್ನು ನೀವೇ ವಹಿಸಿಕೊಂಡು ಮಾಧವ ನಾಯಕನನ್ನು ನಿವೃತ್ತನನ್ನಾಗಿ ಮಾಡಿರಿ. ಇಲ್ಲವೇ ಅವನ ಶರಣದ್ವೇಷ ಕಲ್ಯಾಣದಂತೆ ಚಾಲುಕ್ಯರಾಜ್ಯವನ್ನೂ ನಾಶಮಾಡುವುದು. “ರಾಜಾಂತಃಪುರಗಳ ರಹಸ್ಯ ರಕ್ಷಣೆಯಲ್ಲಿ ನಮ್ಮ ರಾಜಮಹಾರಾಜರು ಚತುರರು, ನಿಷ್ಣಾತರು. ರಾಣಿ ಕಾಮೇಶ್ವರಿಯ ಮಾನಸಂರಕ್ಷಣೆಯ ಉದ್ದೇಶದಿಂದ ಜಗದೇಕಮಲ್ಲ ಬೊಮ್ಮರಸರು ಅರಮನೆಯಿಂದ ಹೊರಗೆ ಬಂದಾಗ 'ಹರಳಯ್ಯ ಮಧುವಯ್ಯಗಳನ್ನು ನೋಯಿಸಿದ ಪರವಾದಿ ಬಿಜ್ಜಳನನ್ನು ಕೊಂದ ವೀರ ಕುಮಾರರು ನಾವು !” ಎಂದು ಬೊಬ್ಬಿಟ್ಟುದಾಗಿ ಕಾವಲುಗಾರರು ಹೇಳುತ್ತಾರೆ. ಈ ಅಸತ್ಯ ಪ್ರಚಾರದ ಮರಳು ನೆಲದ ಮೇಲೆ ಅಪವಾದದ ಗೋಪುರ ಕಟ್ಟಲು ಮಾಧವ ನಾಯಕನು ಪ್ರಯತ್ನಿಸುತ್ತಿದ್ದಾನೆ. “ತಮ್ಮ ಕೊನೆಗಾಲದಲ್ಲಿ ಬಿಜ್ಜಳರಾಯರು ಅನುಸರಿಸಿದ ಕಠೋರ ನೀತಿಯಿಂದ ಶರಣರಿಗೆ ಅನ್ಯಾಯವಾಗಿದೆ. ಹಿಂಸೆ ಅತ್ಯಾಚಾರಗಳಿಗೆ ಅವರು ಗುರಿಯಾಗಿದ್ದಾರೆ. ನಿಮ್ಮ ಆಡಳಿತದಲ್ಲಿ ಶರಣರನ್ನು ನ್ಯಾಯ ಔದಾರ್ಯಗಳಿಂದ ನಡೆಸಿಕೊಳ್ಳಿರಿ.