ಪುಟ:ಕ್ರಾಂತಿ ಕಲ್ಯಾಣ.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೬

ಕ್ರಾಂತಿ ಕಲ್ಯಾಣ

ಮಹಾರಾಣಿಯವರನ್ನು ನೋಡದೆ ನಾನು ಏನನ್ನೂ ನಿರ್ಧರಿಸುವುದಿಲ್ಲ," ಎಂದನು.

"ಕುಮಾರ ಸೋಮೇಶ್ವರನನ್ನು ಕಲಚೂರ್ಯ ಯುವರಾಜನನ್ನಾಗಿ ಮಾಡಲು ಬಿಜ್ಜಳರಾಯರು ನಿರ್ಧರಿಸಿದ್ದಾರೆ. ಮುಂದಿನ ಮಾಘಮಾಸದಲ್ಲಿ ಮಂಗಳವೇಡೆಯಲ್ಲಿ ಪಟ್ಟಾಭಿಷೇಕ ನಡೆಯುತ್ತದೆ. ಬಿಜ್ಜಳರಾಯರು ಮಹಾರಾಣಿಯವರನ್ನು ಆ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಮಹಾರಾಣಿಯವರು ಆಹ್ವಾನವನ್ನು ಅಂಗೀಕರಿಸಿದರೆ ನಿಮ್ಮನ್ನು ನೋಡಲು ಕಲ್ಯಾಣಕ್ಕೆ ಬರುವರು."

"ಈಗ ರಾಣಿ ಎಲ್ಲಿದ್ದಾಳೆ?"
"ದೇವಗಿರಿಯಲ್ಲಿ

"ಇದರಲ್ಲೇನೋ ಮೋಸವಿದೆ. ಮಹಾರಾಣಿ ಮಂಗಳವೇಡೆಗೆ ಹೋಗದಂತೆ ತಡೆಯಬೇಕು. ದೇವಗಿರಿಗೆ ಕೂಡಲೆ ಸುದ್ದಿ ಕಳುಹಿಸುವುದು ಅಗತ್ಯ."

"ಕಳುಹಿಸುವುದು ಹೇಗೆ? ಕರ್ಣದೇವನ ಸರ್ಪಗಾವಲನ್ನು ಭೇದಿಸುವುದು ಸುಲಭವಲ್ಲ" -ನಿರಾಶೆ ಇಣುಕಿತ್ತು ಅಗ್ಗಳನ ಮಾತಿನಲ್ಲಿ.

ಜಗದೇಕಮಲ್ಲನು ತಟ್ಟನೆ ಎದ್ದು ಕುಳಿತು ಚಾಲುಕ್ಯ ಅರಸನಿಗೆ ಉಚಿತವಾದ ಅಧಿಕಾರ ದರ್ಪದಿಂದ, "ನಾನು ಅದಕ್ಕೊಂದು ಉಪಾಯಹೂಡುತ್ತೇನೆ. ಚಾಲುಕ್ಯರು ಶೈವಧರ್ಮಿಗಳು, ಪಾಶುಪತ ಯತಿಗಳನ್ನು ನಾವು ಗುರುಗಳೆಂದು ಪೂಜಿಸುತ್ತೇವೆ. ಆದರೂ ಈ ಆರು ವರ್ಷಗಳಿಂದ ಒಂದು ಸಾರಿಯೂ ನಾನು ಜಂಗಮ ದಾಸೋಹ ಮಾಡಿಸಲಿಲ್ಲ. ಈಗ ಅದಕ್ಕೆ ಏರ್ಪಡಿಸುವಂತೆ ಬಿಜ್ಜಳರಾಯರಿಗೆ ಹೇಳಿ ಕಳುಹಿಸುತ್ತೇನೆ. ರಾಜಗೃಹಕ್ಕೆ ಜಂಗಮರು ಬರುವಂತಾದರೆ ಅವರ ಮುಖಾಂತರ ದೇವಗಿರಿಗೆ ಸುದ್ದಿ ಕಳುಹಿಸಬಹುದು. ಅವರಿಂದ ಬೊಮ್ಮರಸನ ವಿಚಾರವನ್ನು ತಿಳಿಯುವುದು ಸಾಧ್ಯ" ಎಂದನು.

"ಕರ್ಣದೇವನು ಇದಕ್ಕೊಪ್ಪುವನೆ? ಜಂಗಮರೆಂದರೆ ಹಾರಿ ಬೀಳುವುದು ಅವನ ಸ್ವಭಾವ."

"ರಾಜಗೃಹದ ರಕ್ಷಕಸ್ಥಾನದಿಂದ ಅವನನ್ನು ತೆಗೆಸಿಹಾಕಲು ಏನಾದರೂ ಉಪಾಯ ಯೋಚಿಸಬೇಕು." -ಪುನಃ ಚಿಂತೆ ಅಂಕುರಿಸಿತ್ತು ಜಗದೇಕಮಲ್ಲನಲ್ಲಿ.

"ಈ ನಾಲ್ಕು ದಿನಗಳ ಸಹವರ್ತನೆಯಿಂದ ಕರ್ಣದೇವನ ವಿಚಾರವೆಲ್ಲ ನನಗೆ ತಿಳಿದಿದೆ. ನಾನು ಆ ಕಾರ್ಯ ಮಾಡುತ್ತೇನೆ," ಎಂದು ಅಗ್ಗಳನು ಭರವಸೆಯಿತ್ತನು.

ದೂರದಲ್ಲಿ ಸವಾರರು ಬರುತ್ತಿರುವುದು ಕಂಡಿತು. ಜಗದೇಕಮಲ್ಲನು ಮೊದಲಿನಂತೆ ನೆಲದ ಮೇಲೆ ಮಲಗಿ, "ನಾವು ರಹಸ್ಯವಾಗಿ ಮಾತಾಡಿದೆವೆಂದು