ಪುಟ:ಕ್ರಾಂತಿ ಕಲ್ಯಾಣ.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೫೭

೨. ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

ಬೊಮ್ಮರಸ ಬ್ರಹ್ಮಶಿವ ಪಂಡಿತರೇನಾದರು? ಚಾಲುಕ್ಯರಾಣಿ ಕಾಮೇಶ್ವರಿಯ ಗೂಢಚಾರರಾಗಿ, ಬ್ರಹ್ಮರಾಜಸೇಟ್, ಶಿವಗಣ ಭಂಡಾರಿ ಎಂದು ಹೆಸರಿಟ್ಟುಕೊಂಡು ಅವರು ಹೂಡಿದ ಹಗಲುವೇಷದ ಬಯಲಾಟ ಬಿಜ್ಜಳನ ಬೇಹುಗಾರರನ್ನು ವಂಚಿಸಿತೆ? ಬಂಧನದಲ್ಲಿದ್ದ ಅಗ್ಗಳನ ಚಿಂತೆಗೆ ಕಾರಣವಾದ ಈ ವಿಚಾರಗಳನ್ನು ಈಗ ನಾವು ತಿಳಿಯಬೇಕಾಗಿದೆ.

ಕಲ್ಯಾಣದಿಂದ ಬಸವಣ್ಣನವರು ನಿರ್ಗಮಿಸಿದ ಆ ಚರಿತ್ರಾರ್ಹವಾದ ದಿನ ನಗರಕ್ಕೆ ಬಂದು ಪಾಂಥನಿವಾಸದಲಿ ಬಿಡಾರಮಾಡಿದ ಅಗ್ಗಳನು, ಆ ರಾತ್ರಿ ನಾರಣಕ್ರಮಿತನ ಚತುರತೆಯಿಂದ ರಾಜಗೃಹದಲ್ಲಿ ಬಂದಿಯಾಗಿ ತನ್ನ ಗೆಳೆಯರೇನಾದರೆಂದು ಚಿಂತಿಸುತ್ತ ಮಲಗಿದ್ದಂತೆ, ಪಾಂಥನಿವಾಸವಿದ್ದ ರಾಜಮಾರ್ಗದಲ್ಲಿ ಅಷ್ಟೇ ಕುತೂಹಲಕಾರಿಯಾದ ಮತ್ತೊಂದು ಘಟನೆಯ ನಾಂದಿ ನಡೆಯುತ್ತಿತ್ತು.

ರಾತ್ರಿ ಎರಡನೆಯ ಜಾಮ ಪ್ರಾರಂಭವಾಗಿ ಕೆಲವು ಗಳಿಗೆಗಳು ಕಳೆದಿದ್ದುವು. ರಾಜಮಾರ್ಗದಲ್ಲಿ ಜನ ಸಂಚಾರ ನಿಂತಿತ್ತು. ಇಕ್ಕಳದ ಮನೆಗಳಲ್ಲಿ ಜನರು ದೀಪಗಳನ್ನಾರಿಸಿ ನಿದ್ದೆ ಮಾಡುತ್ತಿದ್ದರು. ಬ್ರಹ್ಮಶಿವ ಬೊಮ್ಮರಸರು ಆಗ ತಾನೆ ಬಿಡಾರಕ್ಕೆ ಹಿಂದಿರುಗುತ್ತಿದ್ದರು. ಅವರು ಪಾಂಥನಿವಾಸವನ್ನು ಸಮೀಪಿಸುತ್ತಿದ್ದಂತೆ ಮಾರ್ಗದ ಇನ್ನೊಂದು ಕಡೆಗಿದ್ದ ಪಾನಶಾಲೆಯಿಂದ ಆಯುಧಪಾಣಿಗಳಾದ ನಾಲ್ಕು ಮಂದಿ ರಾಜಭಟರು ಹೊರಗೆ ಬಂದು ದಾರಿಯ ನಡುವೆ ತೂರಾಡುತ್ತ ನಿಂತರು. ದೂರದಿಂದ ಇದನ್ನು ನೋಡಿ ಬ್ರಹ್ಮಶಿವನು ಸನ್ನೆಯಿಂದ ಸುಮ್ಮನಿರುವಂತೆ ಬೊಮ್ಮರಸನಿಗೆ ಹೇಳಿ, ಕೈಹಿಡಿದು ದಾರಿಯ ಪಕ್ಕದಲ್ಲಿದ್ದ ಮರದ ನೆರಳಿಗೆ ಕರೆದುಕೊಂಡು ಹೋದನು. ನಿಬಿಡವಾದ ಕತ್ತಲೆ ತುಂಬಿತ್ತು ಅಲ್ಲಿ.

"ಏನಾಯಿತು, ಬ್ರಹ್ಮಶಿವ?” ಬೊಮ್ಮರಸನು ಮೆಲುದನಿಯಲ್ಲಿ ಕೇಳಿದನು. "ಶೃಂಗಿಣಾಂ ಶಸ್ತ್ರಪಾಣಿನಾಂ ಎಂದು ಹೇಳಿದ್ದಾನೆ ಚಾಣಕ್ಯ. ಆ ನೀತಿ ಬೋಧೆಯನ್ನು ನಾವು ಕಡೆಗಣಿಸುವುದು ಸಾಧ್ಯವೆ?” ಬ್ರಹ್ಮಶಿವನು ಮಾರ್ಮಿಕವಾಗಿ ನುಡಿದನು.