ಪುಟ:ಕ್ರಾಂತಿ ಕಲ್ಯಾಣ.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೦

ಕ್ರಾಂತಿಕಲ್ಯಾಣ

"ನನಗೀಗ ಅಂಥಾ ಬೆಲೆ ಬಾಳೋ ಒಡವೇ ವಸ್ತು ಬೇಕಾಗಿಲ್ಲ, ಅಣ್ಣ. ಅದೆಲ್ಲಾ ಗೋಕರ್ಣದಾಗ ಕೊಂಡೀನಿ, ಬಾಳಾ ಸಲೀಸ ಬೆಲೆಗೆ, ಈಗ ನಂಗೆ ಬೇಕಾದ್ದು ವಿಶ್ವಾಮಿತ್ರ ಪಾತ್ರಕ್ಕೆ ಕಪನಿ, ಗಡ್ಡ, ಜಟಾ, ಕಮಂಡಲು, ಯೋಗದಂಡ ಮತ್ತಾ......ಅವನ ಇಬ್ಬರು ಶಿಷ್ಯರಿಗೆ ಉಡುಪುಗಳು. ಒಂದೆರಡು ಅಂಗವಸ್ತ್ರ, ಇಷ್ಟೇ."

ಉದ್ದಾನಯ್ಯ ಮನೆಯ ಒಳಗಿಂದ ಕೆಲವು ಅರಿವೆ ಗಂಟುಗಳನ್ನು ತಂದು ಬ್ರಹ್ಮಶಿವನ ಮುಂದಿಟ್ಟು "ಇದರಾಗ ನಿಮಗೇನು ಬೇಕೋ ತೆಗೆದಿಡಿಯಪ್ಪ" ಎಂದು ಹೇಳಿ ಅಲ್ಲಿಯೇ ಮೂಲೆಯಲ್ಲಿದ್ದ ದೊಡ್ಡ ಪೆಟ್ಟಿಗೆಯಲ್ಲಿ ಗಡ್ಡ ಜಟೆಗಳನ್ನು ಹುಡುಕಲು ಪ್ರಾರಂಭಿಸಿದನು.

ಬ್ರಹ್ಮಶಿವನು ಗಂಟುಗಳನ್ನು ಬಿಚ್ಚಿ ತನಗೆ ಬೇಕಾದ ಮೂರು ಜೊತೆ ಕಪನಿ, ಧೋತ್ರಗಳು, ಚೀವರಗಳು, ಮುಂತಾದವನ್ನು ಆರಿಸಿ ಬೇರೆ ತೆಗೆದಿಟ್ಟನು. ಅಷ್ಟರಲ್ಲಿ ಗಡ್ಡ ಮೀಸೆ ಜಟೆ ಯೋಗದಂಡ ಕಮಂಡಲಗಳು ಸಿದ್ಧವಾದುವು.

ಬ್ರಹ್ಮಶಿವನು ಒಂದೊಂದು ವಸ್ತುವನ್ನೂ ಪರೀಕ್ಷಿಸಿ ನೋಡಿ, "ಈ ಎಲ್ಲ ವಸ್ತುಗಳ ಬೆಲೆ ಏನಾಗ್ತದ, ಉದ್ದಾನಪೋರ?" ಎಂದನು.

ಉದ್ದಾನಯ್ಯ ಆರಿಸಿಟ್ಟ ವಸ್ತುಗಳನ್ನು ಇನ್ನೊಂದು ಸಾರಿ ಸರಿ ನೋಡಿ, ದೀರ್ಘವಾಗಿ ಯೋಚಿಸುವವನಂತೆ ಸ್ವಲ್ಪ ಹೊತ್ತು ಸುಮ್ಮನೆ ಕುಳಿತು ಅನಂತರ, "ಬೇರೆಯವರಾಗಿದ್ದ ಇಪ್ಪತ್ತುವರಹಕ್ಕೆ ಕಮ್ಮಿ ಇದನ್ನ ಕೊಡ್ತಿರಲಿಲ್ಲ, ಬ್ರಹ್ಮಪ್ಪ. ನೀವು ತಿಳಿದ ಜನ, ನಿಮಗೆ ಹಂಗ ಹೇಳಲಿಕ್ಕಾದೀತ? ಹತ್ತು ವರಹ ಕೊಟ್ಟು ತಕೊಂಡು ಹೋಗಿ," ಎಂದನು.

ಎರಡು ಗಳಿಗೆ ಕಾಲ ಚೌಕಾಸಿ ನಡೆದ ಮೇಲೆ ಬೆಲೆ ಐದು ವರಹಕ್ಕಿಳಿಯಿತು. ಬ್ರಹ್ಮಶಿವನು ಕಿಸೆಯಿಂದ ಹಣ ತೆಗೆದುಕೊಟ್ಟು ಅವುಗಳನ್ನು ಮೂಟೆ ಕಟ್ಟುತ್ತಿದ್ದಂತೆ ಉದ್ದಾನಯ್ಯನ ಪತ್ನಿ ತಿನಸಿ ತಟ್ಟೆಗಳು ಮತ್ತು ನೀರಿನ ಪಾತ್ರೆಯನ್ನು ತಂದಿಟ್ಟಳು. ಉಪಾಹಾರ ಮುಗಿಸಿ, ಉದ್ದಾನಯ್ಯನ ಅಭಿನಯವನ್ನು ಪ್ರಶಂಸಿಸಿ ನಾಲ್ಕು ಮಾತುಗಳನ್ನಾಡಿ ಬ್ರಹ್ಮಶಿವನು ಅಲ್ಲಿಂದ ಹೊರಟಾಗ ಸಂಜೆಯಾಗಿತ್ತು. ಅಂಗಡಿಗೆ ಹೋಗಿ ಎರಡು ಸಣ್ಣಗಂಬಳಿ ಮತ್ತು ಅಗತ್ಯವಾದ ಬೇರೆ ಅರಿವೆಗಳನ್ನು ಕೊಂಡುಕೊಂಡು ಕತ್ತಲೆ ಕವಿದ ಕೆಲವು ಗಳಿಗೆಗಳ ಅನಂತರ ಅವನು ಮಠಕ್ಕೆ ಹಿಂದಿರುಗಿದನು.

ಬೊಮ್ಮರಸನು ಇನ್ನೂ ಎದ್ದಿರಲಿಲ್ಲ. ಬ್ರಹ್ಮಶಿವನು ಕೋಣೆಯಲ್ಲಿನ ದೀಪ ಹಚ್ಚಿ "ನಿನ್ನೆ ಕಳೆದುಕೊಂಡ ನಿದ್ದೆಯನ್ನು ಒಡೆಯರು ಇಂದು ಬಡ್ಡಿಸಹಿತ ಹಿಂದಕ್ಕೆ