ಪುಟ:ಕ್ರಾಂತಿ ಕಲ್ಯಾಣ.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೪

ಕ್ರಾಂತಿಕಲ್ಯಾಣ

ಪ್ರತಿಕ್ಷಣದಲ್ಲಿ ಭೂಮಿ ಇಬ್ಬಾಗವಾಗಿ ತಮ್ಮನ್ನು ನುಂಗಿಬಿಡುವುದೆಂದು ಅವರು ಭಾವಿಸಿದರು. ಕಾಲ ಚಲಿಸದೆ ನಿಂತಿತು ಅವರಿಗೆ.

"ನಿಮ್ಮ ಗುರುಗಳ ಸ್ಥಳ ಯಾವುದು?" -ಮಾಚಿದೇವರು ಪುನಃ ಕೇಳಿದರು.

"ತಾಳಿಕೋಟೆಯ ಹತ್ತಿರ ಸತ್ಯಸಾಗರ. ಅಲ್ಲಿ ನಮ್ಮ ಗುರುಗಳ ಮಠವಿದೆ." -ಬ್ರಹ್ಮಶಿವನು ಚೇತರಿಸಿಕೊಂಡು ಉತ್ತರ ಕೊಟ್ಟನು.

"ನಿಮ್ಮ ಗುರುಗಳಿಗೆ ತಾಳಿಕೋಟೆಯ ವಿರುಪರಸರ ಪರಿಚಯವಿದೆಯ?"

"ಅವರು ಸತ್ಯಸಾಗರಕ್ಕೆ ಬಂದಾಗಲೆಲ್ಲ ನಮ್ಮ ಮಠದಲ್ಲೇ ಬಿಡಾರ ಮಾಡುವುದು."

"ನೀವು ಕಲ್ಯಾಣಕ್ಕೆ ಬಂದ ಉದ್ದೇಶ?"

"ಶರಣರೊಡನಿದ್ದು ಎಲ್ಲ ಕಾರ್ಯಗಳಲ್ಲಿ ಅವರಿಗೆ ಸಹಾಯ ಮಾಡುವುದು."

ಮಾಚಿದೇವರು ಕೆಲವು ಕ್ಷಣಗಳು ಯೋಚಿಸಿ, "ನೀವು ಹೆಚ್ಚು ದಿನಗಳು ಮಹಮನೆಯಲ್ಲಿರುವುದಾದರೆ ಏನಾದರೊಂದು ಕಾಯಕ ಮಾಡಬೇಕಾಗುವುದು." ಎಂದರು.

ಕಾಯಕದ ವಿಚಾರ ಏನೂ ಅರಿಯದವನಂತೆ ಬ್ರಹ್ಮಶಿವನು ಮಾಚಿದೇವರ ಮುಖ ನೋಡಿದನು.

ಮಾಚಿದೇವರು ಹೇಳಿದರು: "ಗುರುಲಿಂಗ ಜಂಗಮವೆಲ್ಲ ಕಾಯಕಕ್ಕೆ ಒಳಗು ಎಂಬ ಮಹಮನೆಯ ನಿಯಮ ನಿಮಗೆ ತಿಳಿಯದೆ, ಹರೀಶರುದ್ರ? ನಿಮ್ಮ ಗುರುಗಳೂ ಏನಾದರೊಂದು ಕಾಯಕ ಹಿಡಿಯಬೇಕಾಗುವುದು."

ಬ್ರಹ್ಮಶಿವ ಅರ್ಥಾತ್ ಹರೀಶರುದ್ರನು ಅಪ್ರತಿಭನಂತೆ ತನ್ನ ಗುರುಗಳ ಮುಖ ನೋಡಿದನು.

ಇಂಗಿತವರಿತು ಮಾಚಿದೇವರು, "ನಿಮಗೆ ಈ ಮಾತು ಹೇಳುತ್ತಿರುವ ನಾನು ಕೂಡಾ ಈ ನಿಬಂಧನೆಗೆ ಒಳಗು, ಬ್ರಹ್ಮೇಂದ್ರ ಶಿವಯೋಗಿಗಳೆ. ಪ್ರತಿನಿತ್ಯ ಮಹಮನೆಗೆ ಬರುವ ಪ್ರವಾಸಿ ಜಂಗಮರ ಬಟ್ಟೆಗಳನ್ನು ಒಗೆದು ಸ್ವಚ್ಛ ಮಾಡುವುದು ನನ್ನ ಕಾಯಕ," ಎಂದರು.

ಬ್ರಹ್ಮೇಂದ್ರ ಶಿವಯೋಗಿ ಅರ್ಥಾತ್ ಬೊಮ್ಮರಸನು ತಲೆಯಾಡಿಸಿ ಸಮ್ಮತಿ ಸೂಚಿಸಿದನು.

ಬ್ರಹ್ಮಶಿವನು ಕೈಜೋಡಿಸಿ, "ಗುರುದೇವರು ಒಪ್ಪಿದ್ದಾರೆ. ಅವರ ಕಾಯಕವೇನೆಂಬುದನ್ನು ಅಯ್ಯನವರೇ ಹೇಳಿಬಿಟ್ಟರೆ....." ಎಂದು ವಿನಯವಾಡಿದನು.

"ಪ್ರತಿ ಶನಿವಾರ ಅನುಭವಮಂಟಪದಲ್ಲಿ ಅರ್ಧ ಪ್ರಹರಕಾಲ ಪ್ರವಚನ.