ಪುಟ:ಕ್ರಾಂತಿ ಕಲ್ಯಾಣ.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೦

ಕ್ರಾಂತಿ ಕಲ್ಯಾಣ

"ಚಾಲುಕ್ಯರಾಜ್ಯದ ನವೋದಯಕ್ಕೆ ಶುಭಸೂಚನೆಯೇ ಇದು!" ಬಿಜ್ಜಳನ ಮನದಲ್ಲಿ ಅಂಕುರಿಸಿರುವ ಈ ತ್ಯಾಗಶೀಲ ಉದಾರ ಪ್ರವೃತ್ತಿ ಬೆಳೆದು ಗಿಡವಾಗಿ ಸತ್ಫಲವನ್ನು ಕೊಡಲಿ," ಎಂದು ಹಾರೈಸಿದಳು.

ಭಾವಪರವಶೆಯಾಗಿ ಮನದಳಲನ್ನು ತೋಡಿಕೊಂಡ ನೀಲಲೋಚನೆ, ಅಣ್ಣನ ಮನಃಕ್ಲೇಶಕ್ಕೆ ಕಾರಣಳಾದೆನೆಂಬ ಪಶ್ಚಾತ್ತಾಪದಿಂದ ನೊಂದು, ಬಿಜ್ಜಳನ ಕಾಲುಗಳ ಮೇಲೆ ಬಿದ್ದು, "ಕ್ಷಮಿಸು ಅಣ್ಣ, ನಿನ್ನ ಮಹತ್ವವನ್ನು ಅರಿಯದೆ ಬಿರುನುಡಿಯಾಡಿದೆ!" ಎಂದು ಮೊರೆಯಿಟ್ಟಳು.

ರಾಜಕೀಯ ವಂಚನೆ ವಿಪರ್ಯಾಸಗಳ ಪೂರ್ಣ ಪರಿಚಯ ಪಡೆದಿದ್ದ ಮಂಚಣ ನಾಯಕನು, "ಬಿಜ್ಜಳರಾಯರ ಮನಸ್ಸಿನಲ್ಲೇನಿದೆ ಎಂಬುದನ್ನು ತಿಳಿಯಲು ಜಗತ್ಕರ್ತನಿಗೂ ಸಾಧ್ಯವಿಲ್ಲ. ಯಾವುದೋ ಹೊಸ ತಂತ್ರದ ನಾಂದಿಯಿದು, ಕೊನೆಗಾಲದಲ್ಲಿ ನಾನು ಇನ್ನೇನನ್ನು ನೋಡಬೇಕಾಗಿದೆಯೋ! " ಎಂದು ತಲ್ಲಣಿಸಿದನು.

ಬಿಜ್ಜಳನ ತೊಡೆಯ ಮೇಲೆ ಕುಳಿತಿದ್ದ ಬಾಲಕ ಸಂಗಮನಾಥನು ಮಾತ್ರ ಈ ಎಲ್ಲ ಭಾವನೆಗಳಿಂದ ದೂರವಾಗಿ, ಮಾವನ ಕದಪುಗಳ ಮೇಲೆ ಬೆರಳಾಡಿಸುತ್ತ, "ಏಕೆ ಅಳುವಿರಿ, ಮಾವಯ್ಯ. ನೀವು ಬರುವ ಸುದ್ದಿ ಕೇಳಿ ನನಗೆಷ್ಟು ಆನಂದವಾಯಿತು, ಗೊತ್ತೆ? ನೀಲಕ್ಕೆ ಎರಡು ದಿನದಿಂದ ಹೇಳುತ್ತಿದ್ದರು, ನಿಮ್ಮನ್ನ ನೋಡಲು ಅರಮನೆಗೆ ಹೋಗಬೇಕು ಅಂತ. ಮೈ ಸ್ವಸ್ಥವಿಲ್ಲದೆ ಆಗಲಿಲ್ಲ," ಎಂದನು.

ಸಂಗಮನಾಥನನ್ನು ಬಿಗಿದಪ್ಪಿದನು ಬಿಜ್ಜಳ. ತಡೆದಿದ್ದ ಕಣ್ಣೀರು ಧಾರೆಯಾಗಿ ಸುರಿದು ಬಾಲಕನ ಮಂಡೆ ಬೆನ್ನುಗಳನ್ನು ತೋಯಿಸಿತು. ನೀರವವಾಗಿ ಅತ್ತನು ಚಾಲುಕ್ಯರಾಜ್ಯದ ಸರ್ವಧಿಕಾರಿ ಮಹಾಮಂಡಲೇಶ್ವರ!

ತುಸು ಹೊತ್ತು ಸಭಾಂಗಣದಲ್ಲಿ ಮೌನ. ಆಮೇಲೆ ದೂರದ ಪೂಜಾಗೃಹದಲ್ಲಿ ಶರಣನೊಬ್ಬನು ಮಧುರವಾಗಿ ಹಾಡುತ್ತಿದ್ದ ವಚನಗೀತ ಗಾಳಿಯಲ್ಲಿ ತೂರಿ ಬಂದು ಕೇಳಿಸಿತು:

ಭಾಂಡವ ತುಂಬಿದ ಬಳಿಕ ಸುಂಕದ ತೆತ್ತಲ್ಲದೆ,
ವಿರಹಿತ ಹೋಗಬಾರದು.
ಕಳ್ಳನಾಣ್ಯ ಸಲುಗೆಗೆ ಸಲ್ಲದು, ಕಳ್ಳನಾಣ್ಯವ ಸಲ್ಲಲೀಯರ್ಯ!
ಭಕ್ತಿಯೆಂಬ ಭಾಂಡಕ್ಕೆ ಜಂಗಮವೇ ಸುಂಕಿಗ,
ಕೂಡಲ ಸಂಗಮ ದೇವ!
ಬಿಜ್ಜಳನು ಚಕಿತನಾಗಿ, "ಎಲ್ಲಿಂದ ಕೇಳಿಬರುತ್ತಿದೆ ಈ ಗೀತ?" ಎಂದನು.
"ಮಹಮನೆಯಲ್ಲಿ ಪೂಜಾರಂಭವಾಗಿದೆ, ಅಣ್ಣನವರೆ. ಯಾರೋ