ಪುಟ:ಕ್ರಾಂತಿ ಕಲ್ಯಾಣ.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೮೫

ನಮಗೆ ಮಾನ್ಯವಲ್ಲ, ಅದನ್ನು ನಾವು ವಿರೋಧಿಸುವೆವು. ಭವಿಯಾದ ಬಿಜ್ಜಳನ ಮಂತ್ರಿಮಂಡಲದಲ್ಲಿ ಭಾಗವಹಿಸುವುದು ಚೆನ್ನಬಸವಣ್ಣನವರಿಗೆ ಸಲ್ಲದು" ಎಂದರು, ಸಲಹೆಯ ವಿರೋಧಿಗಳು.

ಈ ವಿತಂಡವಾದವನ್ನು ಕೊನೆಗಾಣಿಸಲು ಮಾಚಿದೇವರು ಹೇಳಿದರು:

"ಕೈಗೆ ಸಿಕ್ಕ ಮಾಣಿಕವನ್ನು ಬೆಣಚುಕಲ್ಲೆಂದು ಬಿಸುಡುವಂತಿದೆ ನಿಮ್ಮ ವಾದ. ನಾಲ್ಕು ವಾರಗಳ ಹಿಂದೆ ಅನುಭವಮಂಟಪದ ಧರ್ಮಪ್ರಸಾರ ಸುಧಾರಣೆಗಳನ್ನು ವಿರೋಧಿಸಿದ ಸರ್ವಾಧಿಕಾರಿ ಬಿಜ್ಜಳರಾಯರೇ ಇಂದು ಶರಣ ಧರ್ಮದ ನೆರಳಲ್ಲಿ ಆಶ್ರಯಪಡೆದು ತಮ್ಮ ಪದವಿ ಪ್ರತಿಷ್ಠೆಗಳನ್ನು ಉಳಿಸಿಕೊಳ್ಳಲು ಯೋಚಿಸುತ್ತಿದ್ದಾರೆ. ಮಂತ್ರಿಮಂಡಲಕ್ಕೆ ಸೇರಲು ಚೆನ್ನಬಸವಣ್ಣನವರಿಗೆ ಬಂದಿರುವ ಆಹ್ವಾನಕ್ಕೆ ರಾಜಕೀಯದಲ್ಲಿ ಅದೊಂದೇ ಸ್ಪಷ್ಟಾರ್ಥ.

ನಾವು ಅವಿಚಾರದಿಂದ ಆಹ್ವಾನವನ್ನು ನಿರಾಕರಿಸಿದರೆ ಸರ್ವಕಾಲವೂ ಬಿಜ್ಜಳನ ಪ್ರತಿಕಕ್ಷಿಗಳಾಗಿ ನಿಲ್ಲಬೇಕಾಗುತ್ತದೆ. ಅದು ನಮ್ಮಿಂದ ಸಾಧ್ಯವೆ? ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಧರ್ಮ ರಾಜಕೀಯಗಳನ್ನು ಸಮನ್ವಯಗೊಳಿಸಿ ಶರಣರ ಹಿತಸಾಧನೆಯಾಗುವಂತೆ ನಡೆಯಲು ಪ್ರಯತ್ನಿಸಬೇಕು. ಇದೊಂದು ಗಾರುಡಿವಿದ್ಯೆಯೆಂದೂ, ಗೋವು ಹುಲಿಗಳನ್ನು ಒಂದೇ ಹಗ್ಗದಲ್ಲಿ ಕಟ್ಟಿ ಒಂದೇ ಕೊಟ್ಟಿಗೆಯಲ್ಲಿ ಸಾಕುವಂತೆ ಕಷ್ಟಸಾಧ್ಯವೆಂದೂ ತಿಳಿದಿದ್ದೇನೆ. ಆದರೂ ಶರಣರಿಗೆ ಸಾಧ್ಯವಿಲ್ಲದ್ದು ಜಗತ್ತಿನಲ್ಲಿ ಯಾವುದೂ ಇಲ್ಲವೆಂದು ನನ್ನ ದೃಢ ವಿಶ್ವಾಸ. ಸದ್ಯದಲ್ಲಿ ಚೆನ್ನಬಸವಣ್ಣನವರು ಬಿಜ್ಜಳನ ಸಲಹೆಯಂತೆ ಮಂತ್ರಿಗಳಾಗಲಿ. ಆಗ ನಮಗೆ ಉಸಿರಾಡುವ ಅವಕಾಶ ದೊರಕುವುದು. ಮುಂದಿನ ಕಾರ್ಯವಿಧಾನವನ್ನು ನಾವು ಆಮೇಲೆ ನಿರ್ಧರಿಸಿಕೊಳ್ಳಬಹುದು. ಹಾಗಲ್ಲದೆ ಬಿಜ್ಜಳರಾಯರ ಕೋಪಕ್ಕೆ ಕರೆಯಿತ್ತು ಕಲ್ಯಾಣದಲ್ಲಿ ಉಳಿದಿರುವುದೆಂದರೆ ಆಗದ ಕಾರ್ಯ ಅದು"

"ಮಾಚಿತಂದೆಯ ಕೈಲಾಗದು, ಹೋಚಿತಂದೆಯ ಕೈಲಾಗದು,
(ಈಗ ನಾವು) ಇಚ್ಛೆ ಬಂದಂತೆ ಇರಲಾಗದು,
ಅಚ್ಚೊತ್ತಿದಂತೆ ಇರಬೇಕು.
ಮಚ್ಚು ಪಲ್ಲಟವಾಗದೆ, ಆಶ್ಚರ್ಯಭರಿತರಾಗಿರಬೇಕು.
ಕಲಿ, ಕರುಳನೊತ್ತಿ ಮುಂದಕ್ಕೆ ಹರಿವನಲ್ಲದೆ,
ಎಡೆಗೊಲನಾಸೆ ಮಾಡುವನೆ, ಹೇಳಾ!
ಕಲಿದೇವರ ದೇವನ ಅಂಕೆಗೆ ಝಂಕೆಗೆ ಬೆಚ್ಚಿ ಓಡದಿರು!
ವೀರ ಕಂಕಣ ಕಟ್ಟು!"
ಮಾಚಿದೇವರ ವೀರವಾಣಿ ಶರಣರನ್ನು ಒಂದುಗೂಡಿಸಿತು. ಒಮ್ಮತದಿಂದ