ಪುಟ:ಕ್ರಾಂತಿ ಕಲ್ಯಾಣ.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೬

ಕ್ರಾಂತಿ ಕಲ್ಯಾಣ

ಅವರು ಚೆನ್ನಬಸವಣ್ಣನವರ ಮಂತ್ರಿಪದವೀ ಸ್ವೀಕಾರಕ್ಕೆ ಅನುಮತಿಯಿತ್ತರು.

ಆ ದಿನವೇ ಸಂಗಮಕ್ಕೆ ಪಯಣ ಮಾಡಿದ ಶರಣನು ನಾಲ್ಕನೆಯ ದಿನ ಹಿಂದಿರುಗಿ ಬಸವಣ್ಣನವರ ಒಪ್ಪಿಗೆಯನ್ನು ತಿಳಿಸಿದನು. ಆಗಿನ ಸಂಪ್ರದಾಯದಂತೆ ಬಸವಣ್ಣನವರು ನಿದರ್ಶನ ರೂಪವಾದ ವಚನವೊಂದನ್ನು ಚೆನ್ನಬಸವಣ್ಣನವರಿಗೆ ಕಳುಹಿಸಿದರು.

ಅರೆವನಯ್ಯಾ ಸಣ್ಣವಹನ್ನಕ್ಕ,
ಒರೆವನಯ್ಯಾ ಬಣ್ಣಗಾಣ್ಬನ್ನಕ್ಕ,
ಅರೆದರೆ ಸಣ್ಣದಾಗಿ, ಒರೆದರೆ ಬಣ್ಣವಾದರೆ,
ಕೂಡಲ ಸಂಗಮದೇವನೊಲಿದು ಸಲಹುವನು.

ಶರಣರೊಡನೆ ಪರ್ಯಾಲೋಚಿಸಿ, ವಚನದ ಫಲಿತಾರ್ಥ ತಮ್ಮ ಅಧಿಕಾರ ಸ್ವೀಕಾರಕ್ಕೆ ಒಪ್ಪಿಗೆ ಕೊಡುವುದೆಂದು ದೃಢಮಾಡಿಕೊಂಡು ಚೆನ್ನಬಸವಣ್ಣನವರು ಬಿಜ್ಜಳನಿಗೆ ಬರೆದರು.

ಆದರೆ ಬಿಜ್ಜಳನ ಕುಟಿಲನೀತಿ, ಚೆನ್ನಬಸವಣ್ಣನವರ ಒಪ್ಪಿಗೆಗಾಗಿ ಕಾಯುತ್ತ ಕುಳಿತುಕೊಳ್ಳುವಷ್ಟು ಸಹನೆಪಡೆದಿರಲಿಲ್ಲ. ಧರ್ಮಾಧಿಕರಣದ ವಿಚಾರಣೆ, ಬಸವಣ್ಣನವರ ನಿರ್ವಾಸನ, ಈ ಅಪ್ರಿಯ ವಿಚಾರಗಳು ರಾಜ್ಯದ ಸಾಮಂತ ಮಾಂಡಲಿಕರಿಗೆ ವರದಿಯಾಗಿ, ಅವರ ಪ್ರತಿಕ್ರಿಯೆ ತನ್ನ ವಿರುದ್ಧವಾಗಿ ರೂಪುಗೊಳ್ಳುವ ಮೊದಲೆ, ಚೆನ್ನಬಸವಣ್ಣನವರ ಮಂತ್ರಿಪದವೀ ಸ್ವೀಕಾರದ ವಾರ್ತೆ ರಾಜ್ಯದಲ್ಲೆಲ್ಲಾ ಹರಡಬೇಕೆಂಬುದು ಬಿಜ್ಜಳನ ಉದ್ದೇಶವಾಗಿತ್ತು. ಅದಕ್ಕಾಗಿ ಅವಸರದ ಭಟರಿಂದ ರಾಜ್ಯದ ಎಲ್ಲ ಕಡೆ ನಿರೂಪಗಳನ್ನು ಕಳುಹಿಸಿದನು. ಶೀಘ್ರದಲ್ಲಿ ನಿವೃತ್ತರಾಗುವ ಮಂಚಣ ನಾಯಕರ ಸ್ಥಾನದಲ್ಲಿ ಅನುಭವ ಮಂಟಪದ ವ್ಯವಸ್ಥಾಪಕರೂ, ಬಸವೇಶದಂಡ ನಾಯಕರ ಸೋದರ ಅಳಿಯಂದಿರೂ ಆದ ಚೆನ್ನಬಸವಣ್ಣನವರು ಮಂತ್ರಿಯಾಗಿ ನೇಮಿಸಲ್ಪಡುವರೆಂದು ನಿರೂಪಗಳಲ್ಲಿ ತಿಳಿಸಲಾಗಿತ್ತು.

ಕಲ್ಯಾಣದಲ್ಲಿ ಈ ವಾರ್ತೆ ಹರಡಿದಾಗ ಬಸವಣ್ಣನವರ ನಿರ್ವಾಸನದಿಂದ ಒಳಗೊಳಗೇ ಕುದಿಯುತ್ತಿದ್ದ ಬಹುಮಂದಿ ನಾಗರಿಕ ಸಾಮಂತ ಮನ್ನೆಯರಿಗೆ ಸಮಾಧಾನವಾಯಿತು. ನಿರ್ವಾಸನದ ಆಜ್ಞೆನಾರಣಕ್ರಮಿತನ ಕುಟಿಲ ಕುತ್ಸಿತಗಳ ಫಲವೆಂದೂ, ಶೀಘ್ರದಲ್ಲಿ ಬಸವಣ್ಣನವರು ಕಲ್ಯಾಣಕ್ಕೆ ಹಿಂದಿರುಗುವರೆಂದೂ ಅವರು ಭಾವಿಸಿದರು.

ತನಗೆ ತಿಳಿಯದೆ, ತನ್ನ ಸಲಹೆ ಕೇಳದೆ, ಇಷ್ಟೆಲ್ಲ ನಡೆಯಿತೆಂದು ನಾರಣಕ್ರಮಿತನಿಗೆ ತೀವ್ರ ಅಸಮಾಧಾನವಾಯಿತು. ಆದರೆ ತನ್ನ ಅಸಮಾಧಾನವನ್ನು ಪ್ರಕಟವಾಗಿ