ಲೋಲ್ಯಾರು, ಕುಂಚಿಕೊರವರು ಇರುತ್ತಿದ್ದರು. ಇವರನ್ನು ಕಂಡು ನಾವು ಹೇಸುತ್ತಿದ್ದೆವು. ಇವರು ಬೇಡಿ ತಿನ್ನುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರು. ಈ ಬಗೆಯ ಊಟದ ವ್ಯವಸ್ಥೆಯಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಲಾಗುತ್ತಿತ್ತು. ಈ ನಿಯಮಗಳನ್ನು ಗೇಟು ಕಾಯುವ ದಂಡನಾಯಕ ನಮಗೆ ಹೇಳಿ ಒಳಗೆ ಬಿಡುತ್ತಿದ್ದ.
- * ತಟ್ಟೆಗೆ ಹೆಚ್ಚಿಗೆ ಹಾಕಿಸಿಕೊಳ್ಳಬಾರದು
- * ನಿಮಗೆ ತಿನ್ನಲು ಎಷ್ಟು ಸಾಧ್ಯವೋ ಅಷ್ಟನ್ನೇ ನೀಡಿಸಿಕೊಳ್ಳಬೇಕು.
- * ಮನೆಗೆ ಕಟ್ಟಿಕೊಂಡು ಹೋಗಬಾರದು.
- * ಊಟ ಮುಗಿಸಿ ಹೋಗುವಾಗ ಪಾತ್ರೆಯಲ್ಲಿಟ್ಟ ಬಣ್ಣದಲ್ಲಿ ಕೈ ಅದ್ದಿ ಹೋಗಬೇಕು.
ಈ ನಿಯಮಗಳು ಊರ ಜನಗಳಿಗೆ ಅನ್ವಯಿಸದು. ಅವರಿಗೆ ಬಾಳೆಲೆಯಲ್ಲಿ ಬಡಿಸಿ ಊಟ ಮಾಡಿಸುತ್ತಿದ್ದರು. ಒಮ್ಮೆ ಊಟ ಮಾಡಿ ಹೋದ ದಲಿತರು ಮತ್ತೊಮ್ಮೆ ಬಾರದಿರಲಿ ಎನ್ನುವ ವಿಚಾರದ ತಂತ್ರಕ್ಕೆ ಬಣ್ಣದಲ್ಲಿ ಕೈ ಅದ್ದಿಸಿ ಕಳುಹಿಸುತ್ತಿದ್ದರು. ಚುನಾವಣೆಯ ಸಂದರ್ಭದಲ್ಲಿ ಓಟು ಹಾಕಿದ ವ್ಯಕ್ತಿಯ ಬೆರಳಿಗೆ ಗುರುತು ಬೊಟ್ಟು, ಹಾಕಿದಂತೆ.
ಇಂಥ ನಿಯಮಗಳನ್ನು ಮುರಿಯುವುದರಲ್ಲಿ ದಲಿತರು ನಿಸ್ಸಿಮರು. ಬಣ್ಣದಲ್ಲಿ ಕೈ ಅದ್ದುವ ಸಂದರ್ಭ ಬಂದಾಗ ಅದರಿಂದ ತಪ್ಪಿಸಿಕೊಳ್ಳಲು ಅಜ್ಜಿ ಬೇರೆ ಬೇರೆ ತಂತ್ರಗಳನ್ನು ಹುಡುಕಿದ್ದಳು. ಎಂದೋ ಒಮ್ಮೆ ಎಣ್ಣೆ ಕಾಣುವ ತಲೆ ಅಂದು ಅವಶ್ಯವಾಗಿ ಎಣ್ಣೆ ಕಾಣುತ್ತಿತ್ತು. ಊಟ ಮುಗಿದಾದ ಮೇಲೆ ಬಣ್ಣದಲ್ಲಿ ಕೈ ಆದ್ದು ಸಮಯ ಬಂದಾಗ ಕೈ, ಎಣ್ಣೆ ಹತ್ತಿದ ತಲೆಗೆ ತಿಕ್ಕಿ ಬಣ್ಣದ ಪಾತ್ರೆಯಲ್ಲಿ ಅದ್ದುವಂತೆ ಅಜ್ಜಿ ಮೊದಲೇ ಹೇಳಿರುತ್ತಿದ್ದಳು. ಮೊದಲು ಹಾಗೆಯೇ ತಪ್ಪಿಸಿಕೊಂಡು ಹೊರಬರಲು ಪ್ರಯತ್ನಿಸುವುದು, ಯಾರಾದರೂ ಹಿಡಿದರೆ ಆ ತಂತ್ರವನ್ನು ಬಳಸುತ್ತಿದ್ದೆವು. ಹೊರಗೆ ಬಂದಾಕ್ಷಣ ಕೈ ಚೊಣ್ಣಕ್ಕೆ ಒರೆಸಿಕೊಂಡಾಗ ಬಣ್ಣ ಹೊರಟು ಹೋಗುತ್ತಿತ್ತು. ಅನಂತರ ಕೊನೆಯ ಪಂಕ್ತಿಯ ಊಟಕ್ಕೆ ಹಾಜರಾಗುತ್ತಿದ್ದೆವು. ಕೆಲ ಬಾರಿ ಸಿಕ್ಕಿ ಬಿದ್ದಾಗ ಕತ್ತು ಹಿಡಿದು ಹೊರಕ್ಕೆ ದಬ್ಬುತ್ತಿದ್ದರು. ಆಗ ದೇಶಾವರಿ ನಗೆ ಬೀರುತ್ತ, ಕೆಲಬಾರಿ ಅಳುತ್ತ ಹೊರಗೆ ಬರುತ್ತಿದ್ದೆವು. ಸರತಿಯಲ್ಲಿ ಊಟಕ್ಕೆ ಕುಳಿತಾಗ ನೀಡುವವನಿಗೆ ಅಜ್ಜಿ:
- "ಅಯ್ಯ....ಪ್ಪ
- ನನ್ನ ಮೊಮ್ಮಕ್ಕಳು ಸಣ್ಣು ಆದಾವು
- ಸವುಕಾಸ ತಿಂತಾವು ಇನ್ನ ಸ್ವಲ್ಪ ಹಾಕ್ಕಪ್ಪ..."