ವಿಷಯಕ್ಕೆ ಹೋಗು

ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೮
ಗೌರ್ಮೆಂಟ್ ಬ್ರಾಹ್ಮಣ

ಕಾಟವಿರುತ್ತಿರಲಿಲ್ಲ. ಹೀಗಾಗಿ ಇಲ್ಲಿ ಕದನಕ್ಕೆ ಅವಕಾಶಗಳಿರುತ್ತಿರಲಿಲ್ಲ. ಅವ್ವಯವರು ಇಲ್ಲಿ ಬಟ್ಟೆ ತೊಳೆಯುವಾಗ ನಾವು ಇದೇ ನೀರಲ್ಲಿ ಈಜುತ್ತಿದ್ದೆವು. ಚಡ್ಡಿ ಇಲ್ಲದೆ ನೀರಲ್ಲಿ ಬೀಳುವ ನಮಗೆ ಜಿಗಣೆಗಳ (ಇವು ಮಳೆಯ ಹುಳದ ಹಾಗೆ ಉದ್ದವಾಗಿದ್ದು ಮೈಗೆ ಹತ್ತಿಕೊಂಡು ರಕ್ತ ಹೀರುವುದು, ಸಂದು ಕಂಡಲ್ಲಿ ಒಳಸೇರುವುದು ಇವುಗಳ ಕೆಲಸ) ಕಾಟ ತುಂಬ ಜೋರು. ಗುದದಲ್ಲಿ ಹೊಕ್ಕರೆ ಹೇಗೆಂಬ ಭಯವಿದ್ದರೂ ಪರಿವೇ ಇರುತ್ತಿರಲಿಲ್ಲ. ಆದರೆ ಹೆಚ್ಚು ಹೊತ್ತು ನೀರಲ್ಲಿ ಒಂದೆಡೆ ನಿಲ್ಲುತ್ತಿರಲಿಲ್ಲ. ಅವ್ವೆಯರು ನೀರಿಂದ ಬೇಗನೆ ಹೊರಕ್ಕೆ ಎಬ್ಬಿಸುತ್ತಿದ್ದರು. ಕೆಲವೊಮ್ಮೆ ಮನೆಯವರನ್ನು ತಪ್ಪಿಸಿಯೂ ಇಲ್ಲಿಗೆ ಬರುವ ವಾಡಿಕೆ ಇತ್ತು. ಹೆಚ್ಚು ಆಳವಿಲ್ಲದ ಈ ನೀರಲ್ಲಿ ಈಜುವುದೆಂದರೆ ಮೋಜು, ದನಕರುಗಳು ನಮ್ಮೊಂದಿಗೆ ಸಲೀಸಾಗಿ ಈಜುತ್ತಿದ್ದವು. ನೀರಿನಲ್ಲಿದ್ದೇ ಅವುಗಳ ಸವಾರಿ ಮಾಡುವುದೆಂದರೆ ಇನ್ನೂ ಮೋಜು.

ಇಲ್ಲಿಂದ ಸ್ವಲ್ಪು ಮುಂದೆ ಎರಡು ಬಾವಿಗಳಿದ್ದವು. ಒಂದು ಚೌಕಬಾವಿ, ಎಡನೆಯದು ಗುಂಡಪ್ಪನ ಬಾವಿ. ನನ್ನ ಸಹೋದರರೊಂದಿಗೆ ಈಜುವುದಕ್ಕೆ ಇಲ್ಲಿಗೆ ಬರುವುದು ವಾಡಿಕೆ. ಅದು ಸಾರ್ವತ್ರಿಕವಾದ ಬಾವಿಯಲ್ಲದಿದ್ದರೂ ಊರಿನ ಎಲ್ಲ ಜನ ಅಲ್ಲಿ ಈಜಲು ಬರುತ್ತಿದ್ದರು. ಆ ಬಾವಿಯನ್ನು ಕಾಯುವುದಕ್ಕೆ ಒಬ್ಬ ವ್ಯಕ್ತಿ ಇದ್ದ. ಈತ ಊರವರನ್ನು ಈಜಲು ಬಿಡುತ್ತಿದ್ದ. ಆದರೆ ನಾವು ಬಂದರೆ ಮುಳ್ಳಾಗುತ್ತಿದ್ದ, ಹುಲಿಯಾಗುತ್ತಿದ್ದ. ಆತನನ್ನು ಕಂಡರೆ ನಮಗೆ ಭಯವೂ ಆಗುತ್ತಿತ್ತು. ಕೆಲವೊಮ್ಮೆ ಮೋಜು ಎನಿಸುತ್ತಿತ್ತು. ಮುಖಕ್ಕೆ ಮೈಗೆ ಖಾದಿ ಗ್ರಾಮೋದ್ಕೋಗದ ಬೇವಿನೆಣ್ಣೆಯ ಸಾಬೂನು ಹಚ್ಚಿಕೊಂಡು ನೀರಿಗೆ ಇಳಿಯಬೇಕು ಎನ್ನುವಾಗಲೇ ಆತ ಪ್ರತ್ಯಕ್ಷನಾಗುತ್ತಿದ್ದ. ಆಗ ನಮ್ಮ ಸ್ಥಿತಿ ಹೇಳತೀರದು. ಬಟ್ಟೆ ಬಿಚ್ಚಿ ಬಾಹುಬಲಿಗಳಾಗಿ ಈಜುವುದು ವಾಡಿಕೆ. ಆತ ಬಂದ ನಂತರ ಕೈಗೆ ಸಿಕ್ಕಷ್ಟು ಬಟ್ಟೆಗಳನ್ನು ಹಿಡಿದುಕೊಂಡು ಓಡುತ್ತಿದ್ದೆವು. ಆ ಬೆತ್ತಲೆಯ ಓಡಾಟ, ಸಾಬೂನು ಹಚ್ಚಿದ್ದರಿಂದ ಕಣ್ಣಿನ ಉರಿತ. ಬಾವಿಯ ಬದುವು ದಾಟಿದರೆ ಊರಿನ ಜನ. ಬೆತ್ತಲೆ ಊರಲ್ಲಿ ಹೋಗುವ ಹಾಗಿಲ್ಲ. ಸಾಬೂನಿನ ಮೈಯಲ್ಲಿ ಬಟ್ಟೆ ತೊಟ್ಟುಕೊಳ್ಳುವ ಹಾಗಿಲ್ಲ. ಒಟ್ಟು ಎಡೆಬಿಡಂಗಿಯ ಪ್ರಸಂಗ. ಅರ್ಧ ಗಂಟೆ, ಕೆಲವೊಮ್ಮೆ ಗಂಟೆಗಟ್ಟಲೆ ಗಿಡದ ಮರೆಗೂ ಹಾಳುಬಿದ್ದ ಗೋಡೆಯ ಮರೆಗೂ ನಿಂತು ಆ ಬಾವಿ ಕಾಯುವಾತ ಮರೆಯಾದರೆ ಸಾಕು ಕಳ್ಳ ಹೆಜ್ಜೆ ಹಾಕಿ ಕಾಗೆ ಸ್ನಾನ ಮಾಡಲು ಹಾತೊರೆಯುತ್ತಿದ್ದೆವು. ಆತನೂ ಜಾಣ, ಅವಿತು ಹಿಡಿಯಲು ಪ್ರಯತ್ನಿಸುತ್ತಿದ್ದ. ಜಾತಿಯ ಹೆಸರೆತ್ತಿ ಬಯ್ಕುತ್ತಿದ್ದ. ಆದರೆ ಒಮ್ಮೆಯೂ ಅವನ ಕೈಗೆ ಸಿಕ್ಕಿಹಾಕಿಕೊಳ್ಳಲಿಲ್ಲ. ಆದರೆ ಬೆತ್ತಲೆಯಾಗಿದ್ದು ಗಂಟೆ ಹೊಡೆಯುತ್ತಾ ಊರಲ್ಲಿಯೂ ಅರೆಮರೆಯಾಗಿ ದರ್ಶನ ಕೊಟ್ಟದ್ದೂ ಇದೆ.

ಮೂರನೆಯ, ಬಟ್ಟೆ ತೊಳೆಯುವ ಸ್ಥಳವೇ ಭಯಾನಕವಾದ ಕೊಳ್ಳ. ಭಗ್ನವಾದ