ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೦
ಚಂದ್ರಮತಿ.

ಗುರು-ಈಗ ನೀನು ಮಾಡಿದುದರಲ್ಲಿ ಯಾವದೋಷವೂ ಇಲ್ಲ. ನಂಬುಗೆಯಾಗಿ ಕೆಲಸಮಾಡುತ್ತಿದ್ದ ದಾಸಿಯ ವಿಷಯದಲ್ಲಿ ನಿನಗಿಷ್ಟು ಕನಿಕರವುಂಟಾಗಿರುವುದನ್ನು ಕಂಡು ನನಗೂ ಬಹು ಸಂತೋಷವಾಯಿತು. ಅವಳು ನೆನ್ನೆಯರಾತ್ರಿ ಮೃತಳಾದಳೆಂದು ಹೇಳುವೆಯಲ್ಲವೆ? ಸ್ವಲ್ಪ ಹೊತ್ತಿಗೆ ಮೊದಲು ನಾನು ನಿಮ್ಮ ತಂದೆಯವರ ದರ್ಶನವನ್ನು ಮಾಡಿಕೊಂಡು ಇಲ್ಲಿಗೆ ಬರುತ್ತಿರುವಾಗ ಮಾರ್ಗದಲ್ಲಿ ಹಸುವಿನ ಕೊಟ್ಟಿಗೆಯ ಬಳಿಯಲ್ಲಿ ಅವಳನ್ನು ನೋಡಿದ್ದೆನು. ನಾನು ಕ್ಷಣಕಾಲಕ್ಕೆ ಮೊದಲು ನೋಡಿದ್ದುದು, ಮೊದಲು ನಿನ್ನೊಡನೆ ಪ್ರತಿದಿನವೂ ಬರುತ್ತಿದ್ದಾಗ ನೋಡುತ್ತಿದ್ದ ಕಣ್ಣು, ಮುಖ, ತಲೆ ಮೊದಲಾದ ಸಕಲಾಂಗಗಳೂ ಇದ್ದ ದೇಹವೇ ಅಹುದೆನ್ನುವುದಕ್ಕೆ ಸಂದೇಹವಿಲ್ಲ. ಈಗ ನೀನು ಅವಳು ಮೃತಳಾದಳೆಂದು ಹೇಗೆ ಹೇಳುವೆ?

ಚಂದ್ರ-ಈಗ ಅವಳ ಶರೀರವು ಮಾತ್ರ ಈ ಲೋಕದಲ್ಲಿರುವುದು ಅದೂ ಇನ್ನೆರಡು ಗಳಿಗೆಯೊಳಗಾಗಿ ಕಾಣಿಸದೆ ಹೋಗುವುದು. ಅದರೊಳಗಿದ್ದ ಜೀವಾತ್ಮವು ಹಾರಿಹೋಯಿತು.

ಗುರು-ಈ ವಿಷಯವು ನಿನಗೆ ತಿಳಿದಿರುವುದೋ ಇಲ್ಲವೋ ಎಂಬುದನ್ನರಿಯಬೇಕೆಂದೇ ಈ ಪ್ರಶ್ನೆಯನ್ನು ಹಾಕಿದೆನು. ನಮ್ಮ ದೇಹವೂ ಜೀವಾತ್ಮವೂ ಬೇರೆಬೇರೆಂಬುದನ್ನೂ, ದೇಹವು ಯಾವ ಕ್ಷಣದಲ್ಲಿಯೋ ನಶಿಸಿಹೋಗುತಕ್ಕುದೆಂಬುದನ್ನೂ, ನೀನು ತಿಳಿದುಕೊಂಡಿರುವುದರಿಂದ ನನಗೆ ಬಹುಸಂತೋಷವುಂಟಾಯಿತು. ನಮ್ಮ ಆತ್ಮವು ಶರೀರದೊಡನೆಯೇ ನಾಶವನ್ನು ಹೊಂದದೆ ಪರಲೋಕಕ್ಕೆ ಹೋಗುವುದೆಂದು ನಿನಗೆ ತಿಳಿದಿರುವುದಾದುದರಿಂದ ಈ ವಿಷಯವನ್ನು ನಿರ್ಧರಿಸುವುದಕ್ಕೋಸುಗ ನಾನು ಶ್ರಮಪಟ್ಟು ನಿದರ್ಶನಗಳನ್ನು ತೋರಿಸಬೇಕಾದವಶ್ಯಕತೆಯಿಲ್ಲವಷ್ಟೆ? ಸಕಲ ಚರಾಚರಕರ್ತನಾದ ಪರಮೇಶ್ವರನೊಬ್ಬನೇ ಶಾಶ್ವತನಾದವನೆಂದು ಮೊದಲು ನಾನು ತಿಳಿಸಿರುವೆನಲ್ಲವೆ? ಈ ಎರಡು ವಿಷಯಗಳೂ ತಿಳಿದ ತರುವಾಯ ನಿನಗೆ ತಿಳಿಸಬೇಕಾದ ವಿಷಯಗಳು ಇನ್ನೂ ಹಲವಿರುವುವು. ನಾವು ಈ ಲೋಕದಲ್ಲಿ ನೂರುವರ್ಷಗಳು ಬದುಕಿದರೂ ಅದು ಬಹುಸ್ವಲ್ಪಕಾಲವೇ