ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೪
ಚ೦ದ್ರಮತಿ,

ವಿವೇಕಾದಿಗಳೂ, ವಿದ್ಯಾ ಕೌಶಲವೂ ಜನಜನಿತವಾಯಿತು. ಚಂದ್ರಮತಿಯು ಪಾಠಶಾಲೆಯಲ್ಲಿ ಓದಿಕೊಳ್ಳುತ್ತಿದ್ದಾಗಲೇ ಆತನ ಸುಗುಣಸಂಪತ್ತನ್ನು ಹಲವು ಬಾರಿ ತನ್ನ ಗುರುವಿನ ಬಾಯಿಂದಲೂ, ಇತರರ ಬಾಯಿಂದಲೂ ಕೇಳಿದ್ದಳಾದುದರಿಂದ ತಾನು ಆತನನ್ನೇ ವರಯಿಸಬೇಕೆಂದು ಮನಸ್ಸಿನಲ್ಲಿ ನಿಷ್ಕರ್ಷೆಮಾಡಿಕೊಂಡಿದ್ದಳು. ವಯಸ್ಸು ಬಂದಹಾಗೆಲ್ಲ ಆತನ ಸುಚರಿತ್ರೆಯನ್ನು ಶ್ರವಣಾನಂದವಾಗುವಂತೆ ಒಡನಾಡಿಯರಿಂದ ಕೇಳಿಕೇಳಿ ಅವಳ ಆಸೆಯು ಅಷ್ಟಷ್ಟಕ್ಕೆ ಪ್ರಬಲವಾಗುತ್ತೆ ಬಂದಿತು. ಹರಿಶ್ಚಂದ್ರನೂ ಚಂದ್ರಮತಿಯ ಸದ್ಗುಣಸಮೃದ್ಧಿಯನ್ನು ಕೇಳಿ ಅವಳನ್ನೇ ಮದುವೆಮಾಡಿ ಕೊಳ್ಳಬೇಕೆಂದು ದೃಢಸಂಕಲ್ಪನಾಗಿದ್ದನು. ಹೀಗೆ ಸ್ವಲ್ಪ ಕಾಲ ಕಳೆದ ಬಳಿಕ ಚಂದ್ರಮತಿಯೊಂದುದಿನ ತನ್ನ ಅಭಿಪ್ರಾಯವನ್ನು ತಾಯಿಯೊಡನೆ ಮೆಲ್ಲನೆ ಉಸಿರಿದಳು. ಆಕೆಯು ಮಗಳ ಅಭಿಪ್ರಾಯವನ್ನು ತಿಳಿದುಕೊಂಡು ಒಂದಾನೊಂದು ದಿನ ರಹಸ್ಯವಾಗಿ ಗಂಡನಿಗೆ ತಿಳಿಸಲು, ಆತನು ತನ್ನ ಮಗಳ ಮನಸ್ಸು ಯೋಗ್ಯನಾದ ವರನನ್ನು ಸೇರಿದುದರಿಂದ ಪರಮಾನಂದಭರಿತನಾಗಿ, ಯೌವನವತಿಯಾಗಿದ್ದ ಚಂದ್ರಮತಿಯನ್ನು ಜಾಗ್ರತೆಯಾಗಿ ಆತನಿಗೆ ಕೊಟ್ಟು ಮದುವೆಮಾಡುವುದು ಯುಕ್ತವೆಂದು ನಿಶ್ಚಯಿಸಿ, ತಕ್ಷಣವೇ ದೃಢವ್ರತನೆಂಬ ಬ್ರಾಹ್ಮಣನನ್ನು ಕರೆಯಿಸಿ ಹೇಳಬೇಕಾದ ಸಂಗತಿಗಳನ್ನೆಲ್ಲ ಹೇಳಿ ತನ್ನ ಮಗಳನ್ನು ಹರಿಶ್ಚಂದ್ರನಿಗೆ ಕೊಡಬೇಕೆಂದು ಉದ್ದೇಶಿಸಿರುವ ವಿಷಯವನ್ನು ಬರೆದು ತ್ರಿಶಂಕುಮಹಾರಾಜನಿಗೆ ಚಿನ್ನದ ತಲೆಯನ್ನು ಕಳುಹಿಸಿದನು. ತ್ರಿಶಂಕುಮಹಾರಾಜನಾದರೋ ತನ್ನ ಮಗನಿಗೆ ಚಂದ್ರಮತಿಯಲ್ಲಿ ಮನಸ್ಸು ಅನುರಕ್ತನಾಗಿರುವುದೆಂಬ ವಿಷಯವನ್ನು ಮೊದಲೇ ಅರಿತಿದ್ದನಾದುದರಿಂದ, ಮರುಮಾತಾಡದೆ ಅದಕ್ಕೆ ಸಮ್ಮತಿಸಿ, ದೃಢವ್ರತನಿಗೆ ಉಡುಗೊರೆಯನ್ನು ಕೊಟ್ಟು ಮದವಣಗಿತ್ತಿಯನ್ನು ನೋಡಿಕೊಂಡು ಬರಲೋಸುಗ ಮತ್ತೊಬ್ಬ ಬ್ರಾಹ್ಮಣನನ್ನು ಆತನೊಡನೆ ಉಶೀನರಮಹಾರಾಜನ ಬಳಿಗೆ ಕಳುಹಿಸಿದನು. ಮುಹೂರ್ತ ನಿಶ್ಚಯವಾದ ಬಳಿಕ ಚಂದ್ರಮತಿ ಹರಿಶ್ಚಂದ್ರರಿಗೆ ಮಹಾ ವೈಭವದಿಂದ ವಿವಾಹವು ನಡೆಯಿತು. ಸುಗುಣ ಸಂಪತ್ತುಗಳನ್ನು ಕೇಳಿಯೇ ಮೋಹಿಸಿದ್ದವರಾದರೂ ರೂಪಸಂಪತ್ತುಗಳು ಆಯೀರ್ವರನ್ನೂ ಅತ್ಯಧಿಕವಾಗಿ ಒಲಿದಿದ್ದುದರಿಂದ ಅವರಾಪ್ರೀತಿಯು ದೃಢ