ಎಂದು ವಿಶ್ವಾಮಿತ್ರನು ನುಡಿದ ತತ್‌ಕ್ಷಣವೇ ಹರಿಶ್ಚಂದ್ರನು ತನ್ನ ಹೆಂಡತಿಯೇನೆನ್ನುವಳೋ ಎಂಬ ಅಭಿಪ್ರಾಯದಿಂದ ಆಕೆಯ ಕಡೆಗೆ ತಿರುಗಲು, ಚಂದ್ರಮತಿಯು ಆಡಿದಮಾತಿಗೆ ತಪ್ಪಿ ಅಪಕೀರ್ತಿಯನ್ನು ಹೊಂದುವುದಕ್ಕಿಂತ ಸಮಸ್ತ ರಾಜ್ಯವನ್ನೂ ವಿಶ್ವಾಮಿತ್ರನಿಗೆ ಧಾರೆಯೆರೆದುಕೊಟ್ಟು ಹೊರಟು ಹೋಗುವುದೇ ಯುಕ್ತವೆಂದೆಣಿಸಿ ಪತಿಯ ಅಭಿಪ್ರಾಯಕ್ಕೆ ಅನುಗುಣವಾಗಿ ಪ್ರೋತ್ಸಾಹವಚನಗಳನ್ನಾಡಿದಳು. ಒಡನೆಯೇ ರಾಜನು ಸರ್ವಧನವನ್ನೂ ಸರ್ವರಾಜ್ಯವನ್ನೂ ವಿಶ್ವಾಮಿತ್ರನಿಗೆ ಧಾರಾಪೂರ್ವಕವಾಗಿ ದಾನಮಾಡಿ, ತರುವಾಯ ರಾಜಧಾನಿಗೆ ಬಂದು ನಡೆದ ವರ್ತಮಾನವನ್ನೆಲ್ಲ ಮಂತ್ರಿಗಳಿಗೆ ತಿಳಿಸಿ, ವಿಶ್ವಾಮಿತ್ರನ ಆಜ್ಞೆಗಧೀನರಾಗಿರತಕ್ಕುದೆಂದು ಅವರಿಗೆಲ್ಲ ಹೇಳಿ, ಪೌರರೆಲ್ಲರೂ ಒಟ್ಟುಗೂಡಿ ಬ೦ದು ಈ ವೃತ್ತಾಂತದಿಂದ ದುಃಖಿತರಾಗಿ "ನಮ್ಮನ್ನೆಲ್ಲ ಯಾರಿಗೆ ಒಪ್ಪಿಸಿ ಹೋಗುವೆ?" ಎಂದು ಕೇಳುತ್ತಿರಲು ಅವರನ್ನೆಲ್ಲ ಸಂತನಿಸಿ ಹಿಂದಕ್ಕೆ ಕಳುಹಿ, ಪತ್ನೀಪುತ್ರರಿಂದೊಡಗೂಡಿ ಉಟ್ಟಬಟ್ಟೆಯೊಂದರೊಡನೆ ಹೊರಟನು. ಇಷ್ಟರಲ್ಲಿ ವಿಶ್ವಾಮಿತ್ರನು ಹರಿಶ್ಚಂದ್ರನನ್ನು ಕರೆತರುವಂತೆ ಶಿಷ್ಯರಿಗಾಜ್ಞಾಪಿಸಲು ಅವರು ಅವನನ್ನು ಕರೆದುಕೊಂಡು ಹೋದರು. ವಿಶ್ವಾಮಿತ್ರನು ಆಗಳಾ ಹರಿಶ್ಚಂದ್ರನನ್ನು ಕುರಿತು "ಎಲೈ! ಯಜ್ಞಕ್ಕೋಸುಗ ನಾನು ಪೂರ್ವದಲ್ಲಿ ನಿನ್ನನ್ನು ಯಾಚಿಸಿ ಪಡೆದು ನಿನ್ನ ಬಳಿಯಲ್ಲಿಯೇ ಇಟ್ಟಿದ್ದ ಧನವನ್ನೂ ಕೊಟ್ಟು ಹೋಗು" ಎಂದು ನಿರ್ಬ೦ಧಪಡಿಸಿದನು. ಹರಿಶ್ಚಂದ್ರನಾ ವಿಶ್ವಾಮಿತ್ರನನ್ನು ಕುರಿತು "ಎಲೈ, ಮುನಿಶ್ರೇಷ್ಠನೇ! ಮೂವತ್ತು ದಿನಗಳ ಅವಕಾಶವನ್ನಿತ್ತರೆ ಅದನ್ನೂ ಸಮರ್ಪಿಸುವೆನು" ಎಂದು ಹೇಳಲು, ಆ ಋಷಿಯು ಅದಕ್ಕೆ ಸಮ್ಮತಿಸಿ, ಪರಮ ಧೂರ್ತಾಗ್ರಗಣ್ಯನಾದ ನಕ್ಷತ್ರಕನೆಂಬ ಶಿಷ್ಯನೊಬ್ಬನನ್ನು ಕರೆದು" ಎಲಾ, ನಕ್ಷತ್ರಕಾ! ನಮ್ಮ ಗಡುಬದೊಳಗಾಗಿ ಹಣವನ್ನು ಕೊಡುವವರೆಗೂ ನೀನೀ ಕ್ಷತ್ರಿಯನೊಡನಿದ್ದು ನಿನ್ನ ಬಹುಮಾನದೊಡನೆ ನಮ್ಮ ಹಣವನ್ನು ಭದ್ರವಾಗಿ ತೆಗೆದುಕೊಂಡು ಬಾ" ಎಂದು ಹೇಳಿ ಚಂದ್ರಮತೀಹರಿಶ್ಚಂದ್ರರೊಡನೆ ಕಳುಹಿಸಿದನು.
ಹರಿಶ್ಚಂದ್ರನು ಕಾಶೀಪಟ್ಟಣಕ್ಕೆ ಹೋಗಬೇಕೆಂದು ಭಾರ್ಯಾಪುತ್ರರೊಡನೆ ಹೊರಟು, ಅರಣ್ಯ ಮಾರ್ಗದಲ್ಲಿ ಪ್ರಯಾಣಮಾಡುತ್ತಿರಲು, ನಕ್ಷತ್ರಕನು