ವಿಶ್ವಾ-ಎಲಾ! ನೃಪಾಧಾಮನೇ! ಪೂರ್ವದಲ್ಲಿ ರಾಜರು ಬೇಟೆಯಾಡುವುದಕ್ಕೆ ಎಂದೂ ಬಂದಿರಲಿಲ್ಲವೆ? ಅವರೆಂದಾದರೂ ನಿನ್ನಂತ ಋಷ್ಯಾಶ್ರಮಗಳಿಗೆ ಬಾಧೆಯನ್ನುಂಟುಮಾಡಿರುವರೇ? ಹೀಗೆ ನೀನು ನನ್ನ ತಪೋವನಗಳನ್ನು ಪ್ರವೇಶಿಸಿ ಆಶ್ರಮಮೃಗಗಳಿಗೆ ನಿಷ್ಕಾರಣವಾಗಿ ಬಾಧೆಯನ್ನುಂಟುಮಾಡಿದುದಲ್ಲದೆ ನನ್ನ ವಿಷಯದಲ್ಲಿ ಮಹಾಪರಾಧವನ್ನೇ ಮಾಡಿರುವೆ. ಇದೂ ಅಲ್ಲದೆ ಹೆತ್ತ ಮಕ್ಕಳಂತೆ ನಾವು ನೋಡುತ್ತಿರುವ ಈವುದ್ಯಾನವಾಲಕಿಯರು ನೀನೇನೋ ಮಹೋದಾರಿಯೆಂದು ತಿಳಿದು ನಿನ್ನನ್ನು ಯಾಚಿಸುವುದಕ್ಕೆ ಬಂದಾಗ ಅವರನ್ನು ನಿಷ್ಕಾರಣವಾಗಿ ಹೊಡೆಯಿಸಿ ಘೋರಪಾತಕವನ್ನು ಸ೦ಗಳಿಸಿಕೊಂಡೆ. ಇಂತಹ ನಿನ್ನನ್ನೇನು ಮಾಡಿದರೂ ಪಾಪಬಾರದು!
ಹರಿ--ಸ್ವಾಮಿಾ! ತಿಳಿದೋ ತಿಳಿಯದೆಯೋ ನಾನು ತಮ್ಮ ವಿಷಯದಲ್ಲಿ ಅಪರಾಧವನ್ನು ಮಾಡಿ ತಮ್ಮ ಆಗ್ರಹಕ್ಕೆ ಪಾತ್ರನಾದೆನು. ಹಾಗಿದ್ದರೂ ಶರಣಾಗತರಕ್ಷಕರಾದ ತಾವು ಮರೆಹೊಕ್ಕಿರುವ ನನ್ನನ್ನು ಕಾಪಾಡಬೇಕೆಂದು ಬೇಡಿಕೊಳ್ಳುವೆನು. ಹಾಲಿನಲ್ಲಿ ಮುಳುಗಿಸಿದರೂ ನೀರಿನಲ್ಲಿ ಮುಳುಗಿಸಿದರೂ ಅನುಗ್ರಹಾಗ್ರಹಗಳು ತಮಗೇ ಸೇರಿದುದಾಗಿರುವುವು.
ವಿಶ್ವಾ-ನಿಶ್ಚಯವಾದ ಅನುತಾಪವುಳ್ಳವನಾಗಿ ನೀನು ಬಹುದೀನತ್ವದಿಂದ ಬೇಡಿಕೊಳ್ಳುತ್ತಿರುವೆಯಾದಕಾರಣ ನೀನು ಮಾಡಿರುವ ಆ ಕ್ರೂರ ಕಾರ್ಯವನ್ನು ಕ್ಷಮಿಸಿರುವೆವು. ಇನ್ನು ನೀನು ನಮ್ಮ ಮಾತನ್ನು ಕೇಳಿ ನಮಗೆ ಪುತ್ರಿಕಾಪ್ರಾಯರಾದೀ ಈರ್ವರನ್ನೂ ಪಾಣಿಗ್ರಹಣ ಮಾಡಿಕೋ.
ಹರಿ-ನನಗಿರುವ ರಾಜ್ಯ ಸಂಪತ್ತುಗಳನ್ನೆಲ್ಲ ಕೊಡೆಂದರೂ ಕೊಡುವೆನಲ್ಲದೆ ಅಗ್ನಿಸಾಕ್ಷಿಕವಾಗಿ ಮದುವೆಯಾದ ಧರ್ಮಪತ್ನಿಯನ್ನು ಅಧರ್ಮ ಮಾರ್ಗಾವಲಂಬನೆಯಿಂದ ತ್ಯಜಿಸಿ ಚಂಡಾಲಸ್ತ್ರೀಯರನ್ನು ವರಯಿಸಲಾರೆನು.
ವಿಶ್ವಾ-ಹಾಗಾದರೆ ನೀನು ಆಡಿದ ಮಾತಿಗೆ ತಪ್ಪದವನಾದುದರಿಂದ ನಿನ್ನ ರಾಜ್ಯವನ್ನೂ ಐಶ್ವರ್ಯವನ್ನೂ ನನಗೆ ಕೊಟ್ಟು ಉಟ್ಟ ಬಟ್ಟೆಯೊಂದರೊಡನೆ ಪತ್ನೀ ಪುತ್ರಸಮೇತನಾಗಿ ಹೊರಟುಹೋಗು:-