ಇಲ್ಲ, ಸರೋಜಳಿಗೆ ತಿಳಿಯುವುದಿಲ್ಲ. ಎಲ್ಲ ಅವಳಿಗೆ ತಿಳಿಸಿ ಹೇಳಬೇಕಾದ
ಅವಶ್ಯಕತೆಯೂ ಇಲ್ಲ. ಹೋಗಲಿ.
"ಹಿಂಗ ಸುಮ್ನ ಕೂತರ ಏನು ಬಂತು, ಸಹನಾ? ಮುಂಬೈಯ ಸುದ್ದೀನರೆ
ಹೇಳಲಾ, ನಿನ್ನ ಕಾಲೇಜಿನ ಸುದ್ದಿ, ನಿಮ್ಮ ಕಾಕಾ ಡಾಕ್ಟರ್ ದೇಶಮುಖರ
ಹುಚ್ಚರಾಸ್ಪತ್ರೆಯ ಸುದ್ದಿ-"
ಅವಳನ್ನು ತಡೆದು ಹೇಳಿದಳು ಸಹನಾ, "ಏ, ನಮ್ಮ ಕಾಕಾನದು ಹುಚ್ಚರಆಸ್ಪತ್ರೆ
ಅಲ್ಲಾ ಅಂತ ಎಷ್ಟು ಸರೆ ಹೇಳೀನಿ ನಿನಗೆ, ಮತ್ತ್ಯಾಕ ಹಾಂಗಂತೀ? ಅವರು
ಹುಚ್ಚರಾಸ್ಪತ್ರೆಯ ಡಾಕ್ಟರ್ ಅಲ್ಲ, ಅವರ ಕಡೆ ಬರವ್ರು ಹುಚ್ಚರಲ್ಲ. ನಮ್ಮ ಕಾಕಾ
ಒಬ್ಬರು ಸೈಕಿಯಾಟ್ರಿಸ್ಟ್. ಹಾಂಗಂದ್ರ ಏನು ಅಂತ ಕೇಳತೀಯೇನು? ಅದರ ಅರ್ಥಾ
ಹೇಳೀನಿ ನಿನಗ; ಮತ್ತ ಕೇಳಬ್ಯಾಡ. ಏನರೆ ಕಾರಣದಿಂದ ತಲೀಗೆ ತ್ರಾಸ ಆದವರು,
ಮನಸ್ಸಿನ ಚಿಂತಿ ಇದ್ದವರು ಅವರ ಕಡೆ ಬರ್ತಾರ. ಅವರ ತಲಿಯೊಳಗಿನ ವಿಚಾರ ತಗದು
ಅವರಿಗೆ ಸಮಾಧಾನ ಹೇಳೊದು, ಅವರ ಜಡ್ಡು ನೆಟ್ಟಗ ಮಾಡೂದು ನಮ್ಮ ಕಾಕಾನ
ಕೆಲಸ. ತಿಳೀತೇನು?"
"ಮತ್ತ ನಾಯೇನ ಅಂದೆ? ನನ್ನಂಥಾ ಸಾಮಾನ್ಯ ಮಂದೀ ಪ್ರಕಾರ ಅವರದು
ಹುಚ್ಚರಾಸ್ಪತ್ರೇನs ಖರೆ."
ಸರೋಜಳೊಂದಿಗೆ ವಾದಿಸಿ ಫಲವಿಲ್ಲ. ಮಳೆಗೂ ಬಿಸಿಲಿಗೂ ಅಂತರ
ಕಾಣದವಳು ಹುಚ್ಚರಿಗೂ ದುಃಖಿಗಳಿಗೂ ಏನು ಅಂತರ ಕಂಡಾಳು? ಅವಳ
ದೃಷ್ಟಿಯಲ್ಲಿ ಎಲ್ಲ ಒಂದೇ.
*
*
*
ಎರಡು ದಿನ ಕಳೆದ ನಂತರ ಇಂದು ಮಳೆ ಸ್ವಲ್ಪ ಕಡಿಮೆಯಾಗಿದೆ. ಬಿಸಿಲು
ಬೀಳದಿದ್ದರೂ ಮುಗಿಲು ಸ್ವಚ್ಛವಾಗಿದೆ. ಇಂದಾದರೂ ಚಿತ್ರ ಬರೆಯಲು ಸುರು
ಮಾಡಲೇಬೇಕು....
-"ಏನು ಸಹನಾ, ಮಧ್ಯಾಹ್ನದಿಂದ ಕೂತು ಇದೇನು ನಡೆಸೀ ನೀನು?
ಇಷ್ಟೆಲ್ಲಾ ಬಣ್ಣದ ಟ್ಯೂಬ್ಸು, ಬ್ರಷ್, ಕಾಗದಾ ಎಲ್ಲಾ ಹರವಿಕೊಂಡು ಥಣ್ಣಗ
ಕೂತೀಯಲ್ಲಾ. ನಿನಗ ಆಗೇದರೆ ಏನು?" ಸಂಜೆ ರೂಮಿನೊಳಗೆ ಬರುತ್ತ ಕೇಳಿದಳು
ಸರೋಜ.
"ಏನೂ ಇಲ್ಲ ಸರೋಜ, ಚಿತ್ರದ ಪ್ಲ್ಯಾನ್ ನಡಿಸೀನಿ."
ಪುಟ:ನಡೆದದ್ದೇ ದಾರಿ.pdf/೧೦೨
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
ಕೊನೆಯ ದಾರಿ\ ಮಳೆ ಬ೦ದಾಗ
೯೫