ಪುಟ:ನಡೆದದ್ದೇ ದಾರಿ.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ದಾರಿ/ನೆರಳು

೧೧೫

ಹೇಳು ? ಆಕೀಗೆ ಮೊದಲs ತ್ರಾಸಾಗೇದ. ಇನ್ನ ಅ೦ಥಾ ಹೋಮ್ಸ್ ಅಥವಾ ಹಾಸ್ಪಿಟಲಿಗೆ ಕಲಿಸಿದರಂತೂ ಆಕಿ - ಎದಿ ಒಡಕೊಂಡು ಪ್ರಾಣಾನೇ ಬಿಡತಾಳ."

"ಹಾಂಗಾದರ ಛಲೋನೇ ಆತು -"

"ಶಟಪ್ ಬೀನಾ, ಇನ್ನೊಂದು ಹತ್ತು ವರ್ಷಕ್ಕೆ ನಾನೂ ಮುದುಕಿ ಆಗ್ತೀನಿ. ಆವಾಗ ನನ್ನನ್ನೂ ನೀ ಒಯ್ದು ಅಲ್ಲೇ ಹಾಕುವಾಕೆ ಹೌದಲ್ಲೋ" - ಮಾಲತಿಯ ದನಿ ಅಸಹನೆಯಿಂದ ಕಂಪಿಸುತಿತ್ತು.

"Oh God ! ನಿನ್ನ ಜೋಡೀ ವಾದಾ ಹಾಕೋದು ಕಠಿಣ ಮಮ್ಮೀ. ಆದರ ಒಟ್ಟ ಇಷ್ಟ ಕೇಳು - ನಿನಗ ಇವತ್ತೋ ನಾಳೆಯೋ ಸಾಯುವ ಮುದುಕಿ ಬೇಕೋ ಅಥವಾ ಬಾಳಿ ಬದುಕುವ ನಿನ್ನ ಮಕ್ಕಳು ಗಂಡ ಬೇಕೋ ಅನ್ನೂದನ್ನ ನೀ ಈಗ ನಿರ್ಧಾರ ಮಾಡ್ಲಿಕ್ಕೇ ಬೇಕು" - ಬೀನಾ ಹೆಜ್ಜೆ ಅಪ್ಪಳಿಸುತ್ತ ರೂಮಿಗೆ ಹೋದ ಸದ್ದಿನೊಂದಿಗೆ ಅವಳ 'ಹೆಲ್ - ಹೆಲ್' ಕರಗಿಹೋಗುತ್ತಿತ್ತು....

-ಬೀನಾ ಹೇಳಿದಂತೆ ಮನೆ ನಿಜವಾಗಿಯೂ ನರಕವಾಗುತ್ತಿದೆ. ಇಂದೋ ನಾಳೆಯೋ ಸಾಯುವ ಮುದುಕಿ ತನ್ನ ಅವ್ವ ನಿಜ ; ಆದರೆ ಇವರೆಲ್ಲ ಹೇಳುವಂತೆ ಆಕೆ ಖಂಡಿತ ಹುಚ್ಚಿಯಲ್ಲ. ತನ್ನ ಅವ್ವ, ಇಷ್ಟು ವರ್ಷ ಇಷ್ಟೊಂದು ಮೆರೆದಾಡಿದ್ದ ಅವ್ವ, ಹುಚ್ಚಿಯಾಗಲು ಸಾಧ್ಯವೇ ಇಲ್ಲ. ಅವ್ವನ ಕಣ್ಣೊಳಗೆ ಸದಾ ಜ್ವಲಿಸುತ್ತಿರುವ ಆ ಏನೋ ಒಂದು - ಹುಚ್ಚಲ್ಲ ಅದು,ಎಂಥದೋ ವೇದನೆ, ಎಂಥದರಿಂದಲೋ ಪಾರಾಗಬೇಕೆನ್ನುವ ಉತ್ಕಟ ಹವಣಿಕೆ- ತನ್ನ ಗಂಡ, ಬೀನಾ, ರಾಜ ಯಾರಿಗೂ ಅದು ತಿಳಿಯಲಾರದು.

ತನ್ನ ಗಂಡನ ಬಾಸ್ ಗೆ ವರ್ಗವಾಗಿದ್ದರಿಂದ ಅಂದು ಆಫೀಸಿನ ಜನರೆಲ್ಲ ತಮ್ಮ ಮನೆಗೆ ಡಿನರ್ ಗೆ ಆಮಂತ್ರಿತರಾಗಿ ಬಂದಿದ್ದರು. ಊಟದ ನಂತರ ಅವರೆಲ್ಲ ಕೋಕಾ-ಕೋಲಾ ಕುಡಿಯುತ್ತ, ಸಿಗರೇಟು ಸೇದುತ್ತ, ಗಟ್ಟಿಯಾಗಿ ನಗುತ್ತ, ಹಾಲ್ ನಲ್ಲಿ ಯಾವುದೋ ಇಂಗ್ಲೀಷ್ ರಿಕಾರ್ಡ್ಸು ಕೇಳುತ್ತ ಕೂತಿದ್ದರು ; ವರ್ಗವಾಗಿ ಹೋಗಲಿದ್ದ ಬಾಸ್ ಬೀನಾಳನ್ನು ಹಾಡು ಹೇಳಲು ಒತ್ತಾಯಿಸುತ್ತಿದ್ದ ; ಫಿಲ್ಮ್ ಸ್ಟಾರ್ ಹಾಗೆ ಮೇಕಪ್ ಮಾಡಿಕೊಂಡಿದ್ದ ಅವಳು ಯಾವುದೋ ಹಿಂದಿ ಪಿಕ್ಚರಿನ ವಿರಹಗೀತೆ ಹಾಡಿದಾಗ 'ವಂಡರಫುಲ್' ಎಂದು ಅವಳ ಬೆನ್ನು ಚಪ್ಪರಿಸುತ್ತಿದ್ದ. ಅಡಿಗೆ ಮನೆಯಲ್ಲಿದ್ದರೂ ಹೊರಗೆ ನಡೆದದ್ದೆಲ್ಲ ತಿಳಿಯುತ್ತಿತ್ತು ಮಾಲತಿಗೆ. ಕೆಲಸದ ಗಡಿಬಿಡಿಯಲ್ಲಿ ಅವ್ವನನ್ನು ಮರೆತಿದ್ದಳು ಆಕೆ.

"ಮಮ್ಮೀ, ಮಮ್ಮೀ...." ಹೊರಗಿನಿಂದ ಬೀನಾ ಗಟ್ಟಿಯಾಗಿ ಕೂಗಿದಾಗ ಕೈಯಲ್ಲಿಯ ಕೆಲಸಬಿಟ್ಟು ಓಡಿಬಂದಳು ಮಾಲತಿ. "ಏನು ? ಏನಾತು ಬೀನಾ ?"