ಪುಟ:ನಡೆದದ್ದೇ ದಾರಿ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಳ್ಳುಗಳು/ಮುಳ್ಳುಗಳು

೧೧

ಬರೇ ಬೂಟಾಟಿಕೆ, ನಿಷ್ಪ್ರಯೋಜಕ, ಅರ್ಥಹೀನವಾದುದು, ಎಲ್ಲಾ
ಹಿಪಾಕ್ರಸಿ-ಎಂದು ಮೊನ್ನೆ ದೇಸಾಯಿ ಅಂದದ್ದು ನೆನಪಾಯಿತು.
ಇವತ್ತೇಕೋ ಉಪಯೋಗವಿಲ್ಲದ ವಿಚಾರಗಳೇ ಬರತೊಡಗಿವೆ. ಸ್ನಾನದ
ಹೊತ್ತಾಯಿತು.ಇನ್ನು ಈ ವಿಚಾರ ಬಿಟ್ಟು ಏಳಬೇಕು.('Act,act in the living
present!' ಎಂದು ನಿನ್ನೆ ಕಲಿಸಿದ್ದು ಮನದಲ್ಲಿ ಮೂಡಿ ಅಣಕಿಸಿ ನಕ್ಕು
ಮಟಾಮಾಯ ಆಯಿತಲ್ಲ ಖೋಡಿ!)
ಸ್ನಾನದ್ದೂ ಒಂದು ಮಜ.ಬಡಬಡಾ ಒಂದು ನಿಮಿಷದಲ್ಲಿ ನೀರು
ಸುರುವಿಕೊಂಡಾದ ನಂತರ ಬಹಳ ಹೊತ್ತಿನ ವರೆಗು ಮೈ ಒರೆಸಿಕೊಳ್ಳುತ್ತ
ನಿಲ್ಲಬೇಕೆನಿಸುತ್ತದೆ. ಯಾಕೆ ಹೀಗೆ?ಕಾರಣ ಕೇಳಿದರೆ ಆ ಮಡಿವಂತ ಸಂಸ್ಕ್ರುತ ಲೆಕ್ಚರರ್
ಮಿಸ್ ಕುಲಕರ್ಣಿ 'ಥೊ, ಹೊಲಸು'ಅಂದಳು. ಇದ್ದುದನ್ನು ಇದ್ದಂತೆ ಹೇಳಿದರೆ
ಹೊಲಸಂತೆ! ಅವಳಿಗೆಂದೂ ಹಾಗನಿಸಿರಲಾರದೇ?ಮತ್ತೇಕೆ ಇಲ್ಲದ ಆತ್ಮವಂಚನೆ?
-ಡೈನಿಂಗ್ ಹಾಲಿನಲ್ಲಿ ಗದ್ದಲವೋ ಗದ್ದಲ.ಶಾಂತವಾಗಿ ಊಟ
ಮಾಡಲಿಕ್ಕೂ ಬಿಡುವುದಿಲ್ಲ ಹಾಳು ಹುಡುಗಿಯರು.ಅವರ ಟೀಕೆಗೆ, ನಗೆಗೆ, ಕೊಂಕು
ನೋಟಕ್ಕೆ ಕೊನೆಯೇ ಇಲ್ಲ-ಕೊನೆಯೇ ಇಲ್ಲ.
ಹಲವೇ ವರ್ಷಗಳ ಹಿಂದೆ ತಾನೂ ಒಬ್ಬಳಾಗಿದ್ದೆ ಇಂಥ ಗುಂಪಿನಲ್ಲಿ.
ಯಾರದೋ ಸಂಬಂಧವಿಲ್ಲದವರ ಪ್ರೇಮಪ್ರಕರಣದ ಬಗ್ಗೆ.ಹೊಸದಾಗಿ ಲೆಕ್ಚರರ್
ಆಗಿಬಂದಿರುವ ಸ್ಮಾರ್ಟ್ 'ಹುಡುಗ'ರ ಬಗ್ಗೆ ಗಂಟೆಗಟ್ಟಲೆ ಬೇಸರವಿಲ್ಲದೆ ಚರ್ಚೆ
ಮಾಡುತ್ತಿದ್ದೆ. ಈಗೇಕೆ ಈ ಬೇಸರ? ನಿರ್ಲಿಪ್ತತೆ? ಶೂನ್ಯತೆ? ಆ ಭ್ರಮೆ
ಒಳ್ಳೆಯದೋ, ಈ ಭ್ರಮೆನಿರಸನ ಒಳ್ಳೆಯದೋ?
ಎಲ್ಲವೂ ಭ್ರಮೆಯೇ ಹಾಗಾದರೆ?ದೇಸಾಯಿ ಭ್ರಮೆ, 'ಅವನು' ಭ್ರಮೆ,
ನಾಳೆಯೊಮ್ಮೆ ತನಗೆ ಗಂಡನಾಗಿ ಬರಲಿರುವ ಪ್ರಾಣಿ ಭ್ರಮೆ, ಮಾದ ಭ್ರಮೆ,
ಹಾಸ್ಟೆಲಿನ ನಾಯಿ ಭ್ರಮೆ, ತಾನು ದಿನಾ ಅನುಭವಿಸುತ್ತಿರುವ ಮುಳ್ಳಿನಂತೆ ಚುಚ್ಚುವ
ನೂರು ಮುಠ್ಹಾಳರ ದೃಷ್ಟಿಯೂ ಭ್ರಮೆ? ಛೆ, ಅಲ್ಲ. ಈ ಮುಳ್ಳಿನಂಥ
ದೃಷ್ಟಿಯೊಂದೇ ಸತ್ಯ. ಉಳಿದುದೆಲ್ಲ ಭ್ರಮೆ, ರಸ್ತೆಯಲ್ಲಿ, ಕಾಲೇಜಿನಲ್ಲಿ, ಬಸ್ಸಿನಲ್ಲಿ,
ಟ್ರೇನಿನಲ್ಲಿ, ಮಾರ್ಕೆಟಿನಲ್ಲಿ-ಈ ಇಡೀ ಜಗತ್ತಿನ ತುಂಬ ಸತ್ಯವಾದುದೆಂದರೆ
ಅದೊಂದೇ.ಸಣ್ಣ ಹುಡುಗನಿರಲಿ, ತರುಣನಿರಲಿ, ಮುದುಕನಿರಲಿ,ಪ್ರತಿಯೊಂದು
ಗಂಡಿನ ಕಣ್ಣಲ್ಲೂ ಅದೇ ಮುಳ್ಳಿನ ಮೊನೆ.ಒಂಟಿ ಹೆಣ್ಣನ್ನು, ಅದರಲ್ಲೂ
ಹುಡುಗಿಯನ್ನು, ನೋಡಲಿಕ್ಕೆ ಸ್ವಲ್ಪ ಚೆನ್ನಾಗಿರುವವಳನ್ನು ಕಂಡರೆ ಸಾಕು, ಒಂದೇ
ಸಮನೆ ಚುಚ್ಚುತ್ತವೆ ಈ ಮುಳ್ಳುಗಳು...