________________
ಹಸಿವು ! ತಿರುಗಿ ಹೋದಳು ೨೩೩ ಬರಲಾಗದಿದ್ದುದಕ್ಕೆ ಆತ ಕಾರಣವನ್ನೂ ಕೊಟ್ಟ. ರೇಖಾಗೆ ರಸ್ತೆ ಅಪಘಾತದಲ್ಲಿ ಕಾಲು ಉಳುಕಿತ್ತು. ಪ್ಲಾಸ್ಟರ್ ಹಾಕಿಸುವುದು, ಔಷಧಿ ಕೊಡಿಸುವುದು, ಮೂಳೆತಜ್ಞರ ಕಡೆ ಹೋಗುವುದು, ಹೀಗಾಗಿ ಕೆಲಸ ಇತ್ತು. ಪುಣ್ಯಕ್ಕೆ ಕಾಲು ಮತ್ತೆ ಮೊದಲಿನಂತಾಯಿತು. ಈಗೇನೂ ಕಾಳಜಿ ಮಾಡಬೇಕಾಗಿಲ್ಲ. ನಗುತ್ತಿರುವ ಎಳೆಮಗುವಿನ ಕಡೆ ನೋಡುತ್ತಿದ್ದಂತೆ ಲಕ್ಷ್ಮಿಯ ಬಿಗಿದಿದ್ದ ಹುಬ್ಬುಗಳು ಸಡಿಲವಾಗಿದ್ದವು.
ಯಾಕೋ ಎಂಥದೋ ಅನುಮಾನ-ಅಸಹನೆ-ಅಸಮಾಧಾನ ಅನಿಸತೊಡಗಿದ್ದರಿಂದ, ಅದನ್ನೆಲ್ಲ ತಾಳುವುದೇ ಆಗಿದ್ದರಿಂದ ಲಕ್ಷ್ಮಿ ಮೂರು ತಿಂಗಳಾಗುವುದಕ್ಕೆ ಮೊದಲೇ ಮುಂಬಯಿಗೆ ಹೊರಟು ಬಂದಳು, ಧೂಳು ಹಿಡಿದಿದ್ದ ಮನೆಯನ್ನು ಸ್ವತಃ ಝಾಡಿಸಿ ಸ್ವಚ್ಚ ಮಾಡಿದಳು. ಮಗುವನ್ನು ನೋಡಲೆಂದು ಜೊತೆಯಲ್ಲಿ ಕರೆತಂದಿದ್ದ ಹಮೀದಾಬಾನುವಿನ ಎರಡನೆಯ ಮಗಳಿಗೆ ನಗುನಗುತ್ತ ತನ್ನ ಮನೆಯ ಸುತ್ತಲಿನ ಅಂಗಡಿ- ಹಾಲಿನ ಡೇರಿ- ಕಾಯಿಪಲ್ಲೆ ಮಾರ್ಕೆಟು ಇತ್ಯಾದಿಗಳ ಪರಿಚಯ ಮಾಡಿಕೊಟ್ಟಳು. ಹಲವಾರು ತರದ ಅಡುಗೆ ಮಾಡಿ “ನಿಮಗೆ ಹೋಟಲ್ ಊಟ ಬ್ಯಾಸರಾಗಿರಬೇಕಲ್ಲ ?' ಅಂತ ಗಂಡನಿಗೆ ಉಪಚರಿಸುತ್ತ ಬಡಿಸಿದಳು. ಆತ 'ನಾಯಿ ದಿನಾ ಹೋಟಲಿನ್ಯಾಗ ಉಣಿದ್ದೆ ? ಅಕ್ಕನ ಮನೀ ಇತ್ತಲ್ಲ ಬ್ಯಾಸರಾದಾಗ ?” ಅಂದಾಗ ಪೆಚ್ಚಾದಳು. ಆದರೂ ಸುಧಾರಿಸಿಕೊಂಡು ರಾತ್ರಿ ಮಲ್ಲಿಗೆ ಮುಡಿದು ಇಂಪೋರ್ಟೆಡ್ ಪರ್‌ಫ್ಯಮು ಬಳಸಿ ಮಾದಕವಾಗಿ ನಕ್ಕು ಆತನ ಹತ್ತಿರ ಹೋಗಿ ಕುಳಿತಳು. ಆತ `ಹೊತ್ತಾಯ್ತು ಮಲಗಿಕೋ ಹೋಗು ಲಕ್ಷ್ಮೀ, ಮತ್ತ ಕೂಸು ಎದ್ದರ ನಿನಗೆ ನಿದ್ದಿ ಆಗೂದಿಲ್ಲ,' ಅಂತಂದು ಮುಸುಕೆಳೆದುಕೊಂಡು ಆಚೆ ಮಗ್ಗುಲಾದಾಗ ಮತ್ತೆ ಪೆಚ್ಚಾಗಿ ಮಗುವಿನ ಪಕ್ಕ ಹೋಗಿ ಮಲಗಿದಳು. ಒಂದು ತಿಂಗಳು, ಎರಡು ತಿಂಗಳು. ತಾನು ಮುಂಬಯಿಗೆ ಬಂದು ನಾಲ್ಕು ತಿಂಗಳಾದರೂ ಪ್ರತಿ ರಾತ್ರಿ ಇದೇ ಕಥೆಯಾದಾಗ ಲಕ್ಷ್ಮಿ ನಿಜವಾಗಿ ಅಸ್ವಸ್ಥಳಾದಳು. ಸಾಲದ್ದಕ್ಕೆ ಪಕ್ಕದ ಮನೆಯಾಕೆ ಬೇರೆ ನೀವು ತವರಿಗೆ ಹೋಗಿದ್ದಾಗ ನಿಮ್ಮವರ ಅಕ್ಕನ ಮಕ್ಕಳು ಆಗಾಗ ಬರುತ್ತಿದ್ದ ರಪ್ಪ' ಅಂತ ವ್ಯಂಗ್ಯವಾಡಿದ್ದಳು. ಏನು ಮಾಡಲೂ ತೋಚದೆ, ಗಂಡ ವಿಪರೀತವಾಗಿ ಕುಡಿದು ತಡವಾಗಿ ಮನೆಗೆ ಬಂದ ಒಂದು ರಾತ್ರಿ ಲಕ್ಷ್ಮಿ ತಾನಾಗಿ ಆತನೆಡೆ ಹೋದಳು. ಆ ರಾತ್ರಿಯ ಆತನ ವರ್ತನೆಯಲ್ಲಿ ಒಂದಿನಿತೂ ಮಾರ್ದವವಾಗಲೀ, ಪ್ರೀತಿಯಾಗಲೀ ಇರಲಿಲ್ಲ. ಲಕ್ಷ್ಮಿಗೆ ಮೈಯೆಲ್ಲಾ ಮೈಲಿಗೆಯಾದಂತೆನಿಸಿ ತೀರ ಅವಮಾನವೆನಿಸಿ ವಿಪರೀತ ಹೇಸಿಕೆಯೆನಿಸಿತು.