ಪುಟ:ನಡೆದದ್ದೇ ದಾರಿ.pdf/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೦ ನಡೆದದ್ದೇ ದಾರಿ

   ಮನಸ್ಸಿನಲ್ಲಿ ಈ ಬಗೆಯ ವಿಚಿತ್ರ ಕಾಠಿಣ್ಯ  ?
              ಅಂದು ಅರಮನೆಯಲ್ಲಿ ಅಷ್ಟೊಂದು ನಿಷ್ಠುರವಾಗಿ ತನ್ನನ್ನು ಹೊರಗಟ್ಟಿದ ಈ ಮನುಷ್ಯ ಇಂದು ತನ್ನೆದುರು ವಿನೀತನಾಗಿ ಮೊಳಕಾಲೂರಿದ್ದಾನೆ. 'ನಾನಂದು ಯಾವುದೋ ಬುದ್ಧಿಮಾಂದ್ಯಕ್ಕೊಳಗಾಗಿ ನಿನ್ನನ್ನು ತಿರಸ್ಕರಿಸಿದೆ. ನನ್ನನ್ನು ಕ್ಷಮಿಸು' - ಎಂದು ಬೇಡಿಕೊಳ್ಳುತ್ತಿದ್ದಾನೆ. 'ನನ್ನದು ಮಹಾಪರಾಧವಾಯಿತು. ನಾನು ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದಿರುವೆ. ಈಗ ನೀನು ನನ್ನನ್ನು ಸ್ವೀಕರಿಸುವ ಗಳಿಗೆ ಬಂದಿದೆ' - ಎಂದು ಅಲ್ಪರಿಯುತ್ತಿದ್ದಾನೆ.
              ಹ್ಞ ! ಅಪರಾಧ-ಕ್ಷಮೆ-ಪಶ್ಚಾತ್ತಾಪ ಈ ಶಬ್ದಗಳಿಗೀಗ ನನ್ನ ದೃಷ್ಟಿಯಲ್ಲಿ ಯಾವ ಅರ್ಥವೂ ಉಳಿದಿಲ್ಲ. ನೂರು ಆಸೆ ಹೊತ್ತು ನಿನ್ನೆಡೆ ಬಂದಿದ್ದ ನನ್ನನ್ನು ನೀನು ಎಂದು ತಿರಸ್ಕರಿಸಿದೆಯೋ, ಜೀವನದ ಬಹುಪಾಲು ಮಧುರ ಭಾವನೆಗಳೆಲ್ಲಾ ಆ ದಿನವೇ ಸತ್ತು ಹೋದವು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಈ ಶಕುಂತಲೆಯ ಬದುಕು ಒಂದು ಅಗ್ನಿಕುಂಡವಾಗಿದೆ... ಬೆಂಗಾಡಾಗಿದೆ... ದಾವಾನಲವಾಗಿದೆ.... ಬತ್ತಿ ಹೋದ ಸಮುದ್ರವೂ ಆಗಿದೆ.. - ಇಂತಹ ತಾನು ಈತನನ್ನು ಸ್ವೀಕರಿಸಬೇಕಂತೆ ! ಏನಿದು ವಿಧಿಯ ಕ್ರೂರ ಅಪಹಾಸ್ಯ !
            "ದೇವಿ, ಕುಮಾರನನ್ನು ಎತ್ತಿಕೋ. ನಿನ್ನೊಡಗೂಡಿಯೇ ಪೂಜ್ಯ ಮಾರೀಚರ ದರ್ಶನ ಪಡೆಯಬಯಸುವೆ."
             ಆಹಾ ! ಎಂತಹ ಕೋಮಲತೆ ಆತನ ದನಿಯಲ್ಲಿ ! ಯಾವ ನಾರಿಯನ್ನಾದರೂ ಮೋಹದಿಂದ ಪರವಶಗೊಳಿಸಬಲ್ಲ ಮೋಡಿ ಆತನ ದನಿಯಲ್ಲಿ, ಆತನ ಇಡೀ ವ್ಯಕ್ತಿತ್ವದಲ್ಲಿ. ಅಂತೆಯೇ ತಾನು ಪರವಶಳಾದದ್ದು, ಮೈಮರೆತದ್ದು, ಸರ್ವಸ್ವ ಧಾರೆಯೆರೆದದ್ದು, ಎಲ್ಲ ಕಳಕೊಂಡದ್ದು....ಕೊನೆಗೆ ಈ ಅವಮಾನದ-ನಿರೀಕ್ಷೆಯ-ಕಾತರದ-ಅಪಾರ ನೋವಿನ ನಿರಂತರ ಅನುಭವಕ್ಕೊಳಗಾದದ್ದು....
             - ಈಗ ಈತ ಬಂದನೆಯ ಸಂತೋಷಿಸಲೆ ? ಓಡಿಹೋಗಿ ಈತನ ತೆರೆದ ತೋಳುಗಳಲ್ಲಿ ಸೇರಿಕೊಂಡು ಇಷ್ಟು ದಿನ ಅನುಭವಿಸಿದ್ದನ್ನೆಲ್ಲಾ ಮರೆತುಬಿಡಲೆ ? ಇಷ್ಟು ದಿನಗಳು ಆಚರಿಸಿದ ವ್ರತಗಳು, ಗೈದ ತಪಸ್ಸು, ಮಾಡಿದ ಪೂಜೆ -ಎಲ್ಲಾ ಸಫಲವಾಯಿತೆಂದು ಧನ್ಯಳಾಗಲೇ ? 
             "ಇಲ್ಲ, ಸಾಧ್ಯವಿಲ್ಲ...." ಶಕುಂತಲೆಗೆ ಅರಿವಾಗದಂತೆ ಅವಳಿಂದ ಹೊರಬಿದ್ದ ಮಾತಿಗೆ ಬೇರೆಯೇ ಅರ್ಥ ಕಲ್ಪಿಸಿದ ದುಷ್ಯಂತ : "ಅದೇಕೆ ? ನಾಚಿಕೆಯೆ ? ನಮಗಿದು ಅಭ್ಯುದಯ ಕಾಲ. ಮಹಾ ಸುದಿನ. ಗುರುಗಳನ್ನು ನಾವಿಬ್ಬರೂ ಒಟ್ಟಾಗಿಯೇ ನೋಡೋಣ."