ವ್ಯಕ್ತಿತ್ವ ಅ೦ತಹ ಔನ್ನತ್ಯವನ್ನು ದೈವತ್ವವನ್ನು ಪಡೆದಿತ್ತು !-ಬಹಳ ಕಾಲ ಈ ಬಗ್ಗೆ ನಾನು ವಿಚಾರ ಮಾಡುತ್ತಲೇ ಇದ್ದೆ. ನ್ನನ ತಾಯಿ ಕೊನೆಯುಸಿರೆಳೆದಾಗ ಅವಳ ಹತ್ತಿರವಿದ್ದ ನನ್ನ ತಂದೆ , ನಾನು ಹಾಗೂ ರಾಧವ್ವ ಕೆಲವು ಕ್ಷಣ ನಿಶ್ಚಲರಾಗಿ ಸುಮ್ಮನೇ ಕೂತಿದ್ದೆವು.ಅವರಿವರು ಬಂದು ಹೋ ಅಂತ ಆಳಲುಪಕ್ರಮಿಸಿದಾಗಲೇ ನಾವು ಎಚ್ಚರಗೊಂಡದ್ದು,ತಟ್ಟನೇ ಎದ್ದು ಶವದ ಕಾಲು ಮುಟ್ತಿ ನಮಸ್ಕರಿಸಿದ ರಾಧವ್ವ ಊರಿನಿಂದ ಒಂದು ಮೈಲಿಯಾಚೆ ಹರಿಯುತ್ತಿದ್ದ ಕೃಷ್ಣಾ ನದಿಯಲ್ಲಿ ಮುಳುಗುಹಾಕಿ ತನ್ನ ಹಟ್ಟಿಗೆ ಹೋಗಿ ಮಲಗಿದವಳು ಮುಂದೆ ಮೂರು ದಿನ ಏಳಲೇ ಇಲ್ಲವಂತೆ.
ನನ್ನ ತಾಯಿ ಕಾಲವಾದ ನಂತರವೂ ವರ್ಷದಲ್ಲಿ ಐದಾರುಸಲ ಯಥಾ
ಪ್ರಕಾರ ಹನುಮಾಪುರಕ್ಕೆ ಹೋಗುತ್ತಲೇ ಇದ್ದೆವು.ಪ್ರತಿಸಲ ಅಲ್ಲಿಗೆ ಹೋದಾಗ ನಾವು ಅಲ್ಲಿರುವಷ್ಟು ಕಾಲವೂ ತಂದೆಯವರ ಹಿಂದೆ-ಮುಂದೆ ಸುಳಿದಾಡಿ ನಮ್ಮ ತಾಯಿಯ ಗುಣಗಾನ ಮಾಡಿ ಕಣ್ಣೀರು ಸುರಿಸಿ ತಂದೆಯವರ ಮನದಲ್ಲಿ ಅನುಕಂಪದ ಅಲೆಗಳಾನ್ನು ಹುಟ್ಟಿಸಿ ಅವರಿಂದ ಧನಸಹಾಯ ಪಡೆದು ಕೃತಾರ್ಥರಾಗುತ್ತಿದ್ದವರೇ ಬಹಳ.ಅದೆಲ್ಲ ಈಗ ನಮಗೆ ಬೇಸರ ತರಿಸುತ್ತಿತ್ತು.ನಿಜವಾದ ಭಾವನೆಗಳುಳ್ಳವಳು ರಾಧವ್ವ ಒಬ್ಬಳೇ ಅಂತ ನಮಗೆ ಚೆನ್ನಾಗಿ ಗೊತ್ತಿತ್ತು.ಈಗಲೂ ಆಕೆ ನಾವು ಹೋದ ತಕ್ಷಣ ಬರುತ್ತಿದ್ದಳು.ನನ್ನ ಅಣ್ಣ-ತಮ್ಮ೦ದಿರ ಮದುವೆಗಳಾದಾಗ,ಅಕ್ಕ-ತ೦ಗಿಯರಿಗೆ ಮಕ್ಕಳು ಹುಟ್ಟಿದಾಗ,'ನನ್ನ ಅವ್ವನ ಬಳಗ ಹಿ೦ಗ ದೊಡ್ಡದಾಗ್ಲಿ'ಅ೦ತ ಹರಿಸುತ್ತಿದ್ದಳು .'ನೀ ಥೇಟು ನಮ್ಮವ್ವನ್ಹಾ೦ಗ' ಅ೦ತ ನನಗೆ ನೆಟಿಕೆ ಮುರಿಯುತ್ತಿದ್ದಳು.ನಮಗೇ ತಿಳಿದಿರದ,ನಮ್ಮ ತಾಯಿಯ ದೊಡ್ಡ ಗುಣಗಳನ್ನು ತೋರಿಸುವ ,ಅನೇಕ ಪ್ರಸಂಗಗಳನ್ನು ಹರಿಕಥೆ ಹೇಳುವಷ್ಟು ಶ್ರದ್ಧಾಭಕ್ತಿಗಳಿಂದ ಹೇಳುತ್ತಿದ್ದಳು. ನಮ್ಮೆಲ್ಲರ ಸೇವೆಯನ್ನು ಮಾಡುತ್ತಿದ್ದಳು. ಕಣ್ಣು ಕಾಣುವುದು ಕಡಿಮೆಯಾದರೂ ಮೈಯಲ್ಲಿನ ಶಕ್ತಿ ಸೋರಿಹೋಗಿದ್ದರೂ ಕೋಲೂರಿಕೊಂಡು ಬಂದು ,'ಬಂದ್ಯಾ ಯವ್ವಾ ? ನಿನ್ನ ನೋಡಿ ಸಂಕಟ ಕಮ್ಮಿ ಆತು.ಬೇಶ್ಯಾಗಿ ಇರು ಮಗಳs'ಅಂತ ನನ್ನನ್ನು ಆಶೀರ್ವದಿಸುತ್ತಿದ್ದಳು.ಗತಿಸಿದ ನನ್ನ ತಾಯಿಯನ್ನು ನೆನೆದು ಮೌನವಾಗಿ ಕಣ್ಣೀರು ಕರೆಯುತ್ತಿದ್ದಳು.ನಾನು ಅಂತರ್ಜಾತೀಯ ಲಗ್ನ ಮಾಡಿಕೊಂಡಾಗ,'ಅದೆಂತಹ ಪುಣ್ಯಾತ್ಮ ಧರ್ಮಿ ಮಗಳು ಹೀಗೆ ಕುಲಗೆಟ್ಟು ಹೋಗುವುದೇ' ಅಂತ ಹನುಮಾಪುರದ ಬ್ರಾಹ್ಮಣರೆಲ್ಲ ಶಪಿಸಿದಾಗ,ರಾಧವ್ವ ಒಬ್ಬಳೇ,'ಯಾವ ಜಾತಿಯವನರೇ ಯಾಕಿರ್ಲಿ,ಮನು ಒಳ್ಳೇವನಾಗಿದ್ದರ ಸಾಕು'ಅಂದಿದ್ದಳಂತೆ.