ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೮೨ ನಡೆದದ್ದೇ ದಾರಿ
ಶಾಂತಿ ಸ್ತಬ್ಧಳಾಗಿ ನಿಂತಿದ್ದಳು. ಜಾನ್ ಎದ್ದು ಹೋಗಿ ವ್ಹಿಸ್ಕಿ ಬಾಟಲ್ ತೆಗೆದು ಗ್ಲಾಸಿಗೆ ಸುರುವಿ ಗಟಗಟನೆ ಕುಡಿದ. ನಂತರ ಅವಳ ಕಡೆ ತಿರುಗಿ ಹೇಳಿದ. "ನಿನ್ನ ಪುಕ್ಕಟೆ ಸಾಕಿದೀನಿ ಇಷ್ಟು ದಿನ: ನನ್ಮಾತು ನೀನು ಕೇಳ್ಲೇಬೇಕು. ಫಾದರ್ ಗೆ ಮಾತುಕೊಟ್ಟು ಬಂದಿದೀನಿ.
ಅವ್ರಿಗೆ ನಿರಾಶೆ ಆಗಲು ಕೊಡೋಲ್ಲ ನಾನು. "ನಂತರ ಆತ ಧಡಧಡನೆ ಮೆಟ್ಟಲಿಳಿದು ಹೊರಗೆ ಹೊರಟುಹೋದ.
ರಾತ್ರಿಯಿಡೀ ಆತ ತಿರುಗಿ ಬರಲಿಲ್ಲ. * * * ಎಚ್ಚರಾಗಿಯೆ ಮಲಗಿಕೊಂಡಿದ್ದ ಶಾಂತಿಯ ತಲೆಯೆಲ್ಲ
ಸಿಡಿಯುತ್ತಿತ್ತು. ತಿಳಿವಳಿಕೆ ಬಂದಾಗಿನಿಂದ ತಾನು ಎಂದೂ ಗುಡಿಗೆ ಹೋದವಳಲ್ಲ, ದೇವರಿಗೆ ಕೈ ಮುಗಿದವಳಲ್ಲ. ಯಾವ ಸ್ವಾಮಿಗೂ ಬಾಬಾಗೂ ಅಡ್ಡಬಿದ್ದವಳಲ್ಲ, ತನ್ನದಾದ ಧರ್ಮವೆಂಬುದೊಂದಿದೆ ಎಂದೇ ಯೋಚಿಸಿದವಳಲ್ಲ.ಅಂತಹುದರಲ್ಲಿ ಇಂದು ಜಾನ್ ಮಾಡಿದ ಸಲಹೆ ತನಗೆ ಇಷ್ಟೇಕೆ ಒಮ್ಮೆಲೆ ಅಪ್ರಿಯವಾಗಿ, ಅಶಕ್ಯವಾಗಿ,ಕಲ್ಪನಾತೀತವಾಗಿ ತೋರಿತು? ತನಗರಿಯದೇ ತಾನು ಹಿಂದೂ ಧರ್ಮವನ್ನು ಪ್ರೀತಿಸುತ್ತಿದ್ದೇನೆಯೇ? ಅಥವಾ ಧರ್ಮಗಳೆಲ್ಲ ಬರೇ ಮನುಷ್ಯನ ಕಲ್ಪನೆ ಎಂದೇ ತಾನು ಯಾವಾಗಲೂ ನಂಬಿರುವುದರಿಂದ ಈ ಮತಾಂತರ ಇತ್ಯಾದಿ ತನಗೆ ಅರ್ಥವಿಲ್ಲದ್ದಾಗಿ ಕಾಣುತ್ತಿವೆಯೋ ?
ನಡುರಾತ್ರಿ ಆಕೆಗೆ ಒಮ್ಮೆಲೆ ಬಹಳ ವರ್ಷಗಳ ನಂತರ ಅಳು ಬಂತು. ಭಯಂಕರ ಅಳು.ಮೈಯೆಲ್ಲ, ಹಾಸಿಗೆಯಲ್ಲ, ಮಂಚವೆಲ್ಲ, ಕೋಣೆಯೆಲ್ಲ, ಮನೆಯೆಲ್ಲ-ಇಡೀ ಮುಂಬೈಯೆಲ್ಲ ನಡುಗಿಸುವಂಥ ಅಳು. ತಡೆದುಕೊಳ್ಳಲು ಯತ್ನಿಸದೆ ಆಕೆ ನಿಧಾನವಾಗಿ, ಗಟ್ಟಿಯಾಗಿ, ಸಮಾಧಾನವಾಗುವಂತೆ ಅತ್ತಳು. * * * ಮುಂಜಾನೆ ಎದ್ದೊಡನೆ ಕೆಳಗೆ ಬಂದು ಆಕೆ ಟೆಲಿಫೋನ್ ರಿಸೀವ್ಹರ್ ಎತ್ತಿಕೊಂಡು ನಂಬರು ತಿರುಗಿದಳು. ಆಚೆ ಕಡೆಯಿಂದ ಸುಸ್ಪಷ್ಟ ಧ್ವನಿ ಬಂತು. "ಹಲೋ, ಸಾಂತಾಕ್ರೂಜ್ ಏರೋಡ್ರಮ್, ಗುಡ್ ಮಾರ್ನಿಂಗ್ .... ಏನು?
ಕಲಕತ್ತಾಕ್ಕೆ? ಸಾರಿ,ಎಲ್ಲ ಬುಕ್ ಆಗಿವೆ ಸ್ವಲ್ಪ ನಿಲ್ಲಿ ಪ್ಲೀಜ್ ....ಹ್ಞಾ, ಒಂದು ಸೀಟ್ ಕ್ಯಾನ್ಸಲ್ ಆಗಿದೆ, ನಿಮಗೆ ಕೊಡಬಲ್ಲೆವು ....ಹ್ಞಾ ಹ್ಞಾ, ಸರಿಯಾಗಿ ಎಂಟೂ ಮೂವತ್ತು."