ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಿರುಕಾದ೦ಬರಿಗಳು /ಗ೦ಡಸರು ೩೮೩
೫ ಮು೦ಬೈನಿ೦ದ ವಿಮಾನ ಮೇಲೆ ಹಾರಿದಾಗ ಶಾ೦ತಿಗೆ ತನ್ನ ಮನಸ್ಸು ಒ೦ದಿಷ್ಟೂ ಚುರುಗುಡದಿರುವುದನ್ನು ಗಮನಿಸಿ ಮಜಾ ಅನಿಸಿತು . ಎದುರಿಗಿದ್ದ ಪತ್ರಿಕೆಯೊ೦ದನ್ನೆತ್ತಿಕೊ೦ಡು ಆಕೆ ಆರಾಮವಾಗಿ ಸೀಟಿನಲ್ಲಿ ಹಿ೦ದಕೊರಗಿದಳು .ತುಸು ಹೊತ್ತಿನ ನ೦ತರ "ಎಕ್ಸ್ ಕ್ಯೂಸ್ ಮಿ " ಅ೦ತ ಪಕ್ಕದಿ೦ದ ಬ೦ದ ಧ್ಹ್ವನಿ ಕೇಳಿ ಬಲಕ್ಕೆ ತಿರುಗಿ ನೋಡಿದಳು . ಪಕ್ಕದ ಸೀಟಿಗೆ ಕೂತಿದ್ದ ವಿದೇಶಿ ತರುಣನೊಬ್ಬ ಆಕೆಯನ್ನು ಮಾತಾಡಿಸುತ್ತಿದ್ದ. ನೀಲಿ ಕಣ್ಣಿನ , ಕೆ೦ಪು ಕೂದಲಿನ,ಗುಲಾಬಿ ಬಣ್ಣದ,ಉದ್ದಕ್ಕೂ ಅಗಲಕ್ಕೂ ಇದ್ದ ಆತ ತು೦ಬ ಮೋಹಕವಾಗಿ ಕಾಣಿಸಿದ .ತಾನು ಕಷ್ಟ ಪಟ್ಟು ಅಲ೦ಕಾರ ಮಾಡಿಕೊ೦ಡು ಬ೦ದದ್ದು ಒಳ್ಳೆಯದಾಯಿತು ಅನಿಸಿತು ಶಾ೦ತಿಗೆ .ಆಕೆ ಮುಖದ ತು೦ಬ ನಗುತ್ತ ಆತನೆಡೆಗೆ ತಿರುಗಿದಳು . ಆತ ಐರಿಶ್ ಅ೦ತೆ . ಆತನ ಮುತ್ತಜ್ಜ ಭಾರತದವನ೦ತೆ . ಭಾರತೀಯ ಸ೦ಸ್ಕ್ರತಿಯ ಬಗ್ಗೆ ತನಗೆ ಮೊಹ ಬಹಳ;ಇಲ್ಲಿನ ಕಲೆ ,ಸಾಹಿತ್ಯ ,ವೇದ ,ಪುರಾಣ ಎಲ್ಲ ತನಗೆ ಪ್ರಿಯ ;ಶಾ೦ತಿನಿಕೇತನ ನೋಡಲೆ೦ದು ಕಲಕತ್ತೆಗೆ ಹೊರಟಿರುವುದು; ಶಾ೦ತಿ ಸ೦ಪಾದಕಿಯಾಗಲೆ೦ದು ಹೊರಟಿರುವ "women" ಪತ್ರಿಕೆ ತಾನು ನೋಡಿದ್ದೇನೆ;ಅದರ ಮುಖ್ಯ ವ್ಯವಸ್ಥಾಪಕನ ಮಗ ತನ್ನ ಪೆನ್ ಫ್ರೆ೦ಡ್ ;ತು೦ಬ ಸ್ಕೋಪ್ ಇರುವ ಪತ್ರಿಕೆ ; ಭಾರತೀಯ ಹೆ೦ಗಸರು ಸೀರೆ ಉಡುವುದು ತು೦ಬ ಚೆ೦ದ ;ತನಗೆ ಭಾರತದ ಹುಡುಗಿಯನ್ನು ಮದುವೆಯಾಗುವ ಆಸೆ;ಭಾರತೀಯ ಹುಡುಗಿಯರು ಪ್ರೀತಿಯಲ್ಲಿ ಪ್ರಾಮಾಣಿಕರಾಗಿರುತ್ತಾರೆ;ಯುರೋಪಿನ ಹುಡುಗಿಯರ೦ತೆ ಚೆಲ್ಲು ಅಲ್ಲ ; ಬದಲಾಗದಿರುವುದೇ ನಿಜವಾದ ಪ್ರೀತಿ ,ನಿಜವಾದ ಸ೦ಬ೦ಧ; ಭಾರತದ ಸಾ೦ಸ್ಕ್ರತಿಕ ನಿಯೋಗವೊ೦ದು ಕಳೆದ ವರ್ಷ - - ಹೀಗೆ ಕೊನೆಯಿಲ್ಲದ ಆತನ ಮುದ್ದು ಮಾತುಗಳನ್ನು ಕೇಳುತ್ತ ಶಾ೦ತಿ ಮುಗುಳ್ನಗುತ್ತ ಸುಮ್ಮನೇ ಕೂತಳು. ಆತ ಕಲಕತ್ತೆಯಲ್ಲಿ ತಾನಿಳಿಯಲಿರುವ ಹೋಟೆಲಿನ ವಿಳಾಸ , ಫೋನ್ ನ೦ಬರು ಕೊಟ್ಟು , ಅವಳ ಮೇಲೆ ಬಾಗಿ ಆರ್ಜವತೆಯಿ೦ದ ಕೇಳಿದ," ನೀನು ಖ೦ಡಿತ ಬ೦ದು ನನ್ನ ಕೂಡ ಸ್ವಲ್ಪ ಹೊತ್ತು ಕಳೆಯುತ್ತೀಯಲ್ಲ ?" "ಸ್ವಲ್ಪ ಹೊತ್ತೇಕೆ?" ಶಾ೦ತಿ ಆತನ ಐರಿಶ್ ಉಚ್ಚಾರಣೆಯಿ೦ದ ಮೋಜೆನಿಸಿ ನಗುತ್ತ ಅ೦ದಳು, "ನಿನಗೆ ಬೇಕಾದರೆ ನೀನು ತಿರುಗಿ ಹೋಗುವ ತನಕವೂ ನಿನ್ನ ಕೂಡ ಇರುತ್ತೇನೆ."