ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೯೮
ನಡೆದದ್ದೇ ದಾರಿ

ಮುನ್ನುಗ್ಗಬಲ್ಲದ್ದೇ, ಎಂದಿಗೂ ಯಾವ ಕಾರಣಕ್ಕೂ ಬದಲಾಗಲಾರದ್ದೇ,
ಸದಾ ಪ್ರತಿಕ್ಷಣ ಹೆಚ್ಚುತ್ತ ಹೋಗುತ್ತಿರುವುದೇ ನಿಜವಾದ ಪ್ರೇಮ.
ಪ್ರೇಮದ ಬಗ್ಗೆ ಇಂತಹದೇ ಅಭಿಪ್ರಾಯಗಳನ್ನು ಹೊಂದಿರುವ ವ್ಯಕ್ತಿಯೊಬ್ಬ
ಬಾಳಿನಲ್ಲಿ ನನಗೆ ಸಿಕ್ಕರೆ ನಾನು ಧನ್ಯಳು.
ಶಶಿ ನನಗೆ ರೋಮ್ಯಾಂಟಿಕ್ ಫೂಲ್ ಅನ್ನುತ್ತಾಳೆ. ಅವಳ ದೃಷ್ಟಿಯಲ್ಲಿ
ಪ್ರೇಮ ಅನ್ನುವುದು ಬರೀ ಭ್ರಮೆ. ಮದುವೆ ಅನ್ನುವುದು ಒಂದು ವ್ಯಾವಹಾರಿಕ
ಒಪ್ಪಂದ ಮದುವೆ, ಪವಿತ್ರತೆ, ಪ್ರೇಮ, ಬಂಧನ ಇವೆಲ್ಲಾ ಆಕೆಯ ಮಟ್ಟಿಗೆ ಬೋಗಸ್
ಶಬ್ದಗಳು. ಇವುಗಳ ಬೆನ್ನಟ್ಟಿದ ವ್ಯಕ್ತಿಗೆ ಅಂತ್ಯದಲ್ಲಿ ದುಃಖ-ನಿರಾಸೆ ಕಟ್ಟಿಟ್ಟದ್ದು
ಅನ್ನುತ್ತಾಳೆ ಶಶಿ.
ನಾನು ಹಾಗನ್ನುವುದಿಲ್ಲ. ನಿಜವಾದ ಪ್ರೇಮಕ್ಕೆ ಎಲ್ಲ ದುಃಖಗಳನ್ನು
ನಿವಾರಿಸುವ ಶಕ್ತಿಯಿದೆ. ಅಂಥ ಪ್ರೇಮದ ಅನುಭವರಹಿತವಾದ ಜೀವನವೇ
ಅಪರಿಪೂರ್ಣ."
ಆ ದಿನಗಳಲ್ಲಿ ಇಂಗ್ಲೀಷ್ ಲಿಟರೇಚರ್, ಅದೂ ಬರೇ ರೋಮ್ಯಾಂಟಿಕ್ ಕಾವ್ಯ,
ಓದಿ ನಿನ್ನ ತಲೆ ಕೆಟ್ಟು ಹೋಯಿತಲ್ಲೇ ಕಮಲಾ', ಅಂತ ಶಶಿ ಅವಳನ್ನು ಹಾಸ್ಯ
ಮಾಡುತ್ತಿದ್ದಳು. ಪ್ರತಿಯಾಗಿ ಕಮಲಾ 'ಸಾಯನ್ಸ್ ಓದಿ ನಿನ್ನ ತಲೆ-ಹೃದಯ ಎರಡೂ
ಕಲ್ಲಾಗಿವೆಯಲ್ಲೇ ಶಶಿ,' ಅನ್ನುತ್ತಿದ್ದಳು. 'ಗಂಡಸರೆಲ್ಲಾ ಸ್ವಾರ್ಥಿಗಳು ಕಮಲಾ, ನಿನ್ನ
ಕನಸಿನ್ಯಾಗಿರೋ ಆದರ್ಶ, ನಿಸ್ವಾರ್ಥ ಪ್ರೇಮ ಯಾವ ಗಂಡಸಿನ ಮನಸ್ಸಿನೊಳಗೂ-
ಹೃದಯದೊಳಗೂ ಇರೋದಿಲ್ಲ. ಕಾವ್ಯದಾಗ ಮಾತ್ರ ಅಂಥಾದ್ದು ಸಿಗೋದು. ಹಾಂಗ
ನೋಡಿದರ ಗಂಡಸರಿಗೆ ಮನಸ್ಸು-ಹೃದಯ ಅನ್ನೋದೇ ಇರೋದಿಲ್ಲ.
ಅವರಿಗಿರೋದು ಅದ್ಭುತ ತಲೆ ಮಾತ್ರ. ಆ ಅದ್ಭುತ ತಲೆ ಉಪಯೋಗಿಸಿ ನಿನ್ನಂಥ
ಬಕರಾ ಹೆಂಗಸರನ್ನ ಸಿಸ್ಟಮ್ಯಾಟಿಕ್ ಆಗಿ ಫೂಲ್ ಮಾಡತಾರ,' ಅಂತ ಶಶಿ ಪದೇ ಪದೇ
ಅವಳಿಗೆ ತಿಳುವಳಿಕೆ ತಂದು ಕೊಡಲು ಪ್ರಯತ್ನಿಸುತ್ತಿದ್ದಳು. ಆದರೆ ಕಮಲಾನದು
ಯಾವಾಗಲೂ ಒಂದೇ ಧೋರಣೆ, “ನಿನ್ಹಾಂಗ ಪುರುಷದ್ವೇಷಿ ಆಗಿ ಜೀವನದ ಖರೇ
ಸುಖಾ-ಆನಂದ ಕಳಕೊಳ್ಳೋದು ಮೂರ್ಖತನ ಶಶಿ, ಗಂಡು-ಹೆಣ್ಣಿನ ಪ್ರೀತಿಯೊಳಗೆ,
ಬಂಧನದೊಳಗ ಏನು ತೃಪ್ತಿ ಸಿಗತದ, ಅದರ ಮುಂದ ಎಲ್ಲಾ ಕಷ್ಟ-ಕೋಟಲೆಗಳೂ
ಶೂನ್ಯ.'
'ನಾ ಪುರುಷದ್ವೇಷಿ ಅಲ್ಲ ಕಮಲಾ. ಸುಖಾ-ಆನಂದ ಬ್ಯಾಡನ್ನೂದಿಲ್ಲ
ನಾನು. ಆದರ ಈ ಪ್ರೀತಿ-ಬಂಧನ ಅಂತೀಯಲ್ಲ, ಅದು ಬ್ಯಾಡಂತೀನಿ. ಯಾಕಂದರ
ಅಂಥಾದ್ದು ಅಸ್ತಿತ್ವದೊಳಗೇ ಇಲ್ಲ. ಗಂಡು-ಹೆಣ್ಣಿನ ಸಂಬಂಧದ ಸುಖಾ ಇರಿ, ಆದರ