ಕಾಲೇಜೊಂದರ ಡಿಬೇಟ್ ಯೂನಿಯನ್ನಿನ ಯಾವುದೋ ಕಾರ್ಯಕ್ರಮಕ್ಕೆ ತಾನು
ಅತಿಥಿಯಾಗಿ ಹೋದಾಗ, ಅಲ್ಲೇ ಪ್ರೊಫೆಸರಾಗಿದ್ದ ಸದಾನಂದನನ್ನು -ಈಗ ಆರು
ಮಕ್ಕಳ ತಂದೆಯಾಗಿದ್ದ ಸದಾನಂದನನ್ನು - ಕಂಡಾಗ, ಇಂಥದೇ ಅಪಸ್ವರದ
ಅನುಭವವಾಗಿರಲಿಲ್ಲವೆ ತನಗೆ ? ಆತ ಅಲ್ಲಿರುವನೆಂದು ಮೊದಲೇ ಗೊತ್ತಿತ್ತು.
ಹಳೆಯ ಪರಿಚಿತನೊಬ್ಬನನ್ನು ಸಹಜ ಮಾತಾಡಿಸುವ ಹಾಗೆ ಮಾತಾಡಿಸಿ,
ಅದ್ಭುತವಾದ ಅತಿಥಿ ಭಾಷಣ ಮಾಡಿ, ತಾನೆಷ್ಟು ಹೃದಯಹೀನಳೆಂಬುದನ್ನು
ಮತ್ತೊಮ್ಮೆ ಅವನ ನೆನಪಿಗೆ ತಂದುಕೊಟ್ಟು, ಆಗ ಅವನ ಕಣ್ಣಲ್ಲಿ ಮೂಡಬಹುದಾದ
ಹಳೆಯ ನಿರಾಸೆಯ ಹೊಸ ರೂಪ ಕಂಡು, ಹೊಸ ಹುರುಪು ಪಡೆದು ತಿರುಗಿ ಮತ್ತೆ
ದೂರ ಬರುವ ಬೃಹದಾಸೆ ಹೊತ್ತು ಹೋಗಿದ್ದೆ. ಆದರೆ ಆದದ್ದೇನು ? ಬಹಳ ಶೀತಲ
ನಿರ್ಲಿಪ್ತತೆಯಿಂದ ಅವನನ್ನು “ಹಲೋ" ಎಂದು ಮಾತಾಡಿಸುವದರಲ್ಲಿ ತಾನು
ಸಮರ್ಥಳಾಗಿದ್ದೆ ; ತನ್ನ ಭಾಷಣವಂತೂ “Excellent !' ಎಂದಿದ್ದರು ಎಲ್ಲರೂ ;
ತಾನು ಹೃದಯವಿಲ್ಲದವಳೆಂಬುದನ್ನು ಅವನ ಗಮನಕ್ಕೆ ತಂದುಕೊಡುವ ಪ್ರಯತ್ನವೂ
ಯಶಸ್ವಿಯಾಗಿತ್ತು ; ಆದರೆ ಕೊನೆಗಳಿಗೆಯಲ್ಲಿ ತನ್ನ ಲೆಕ್ಕ ತಪ್ಪಿತ್ತು. ಅವನ ಕಣ್ಣಲ್ಲಿ
ತಾನು ನೋಡಿ ಆನಂದಿಸಬಯಸಿದ್ದ ಆ ಅನಿಸಿಕೆ - ಹಳೆ ನಿರಾಸೆಯ ಹೊಸ ರೂಪವಲ್ಲ
ಅದು, ಒಂದು ಬಗೆಯ ವಿಜಯದ ಆನಂದ ಅದನ್ನು ಕಂಡ ಕ್ಷಣ ಮಾತ್ರ
ಸೋತವಳು, ಸೋಲುತ್ತಿದ್ದವಳು ತಾನೇ ಎಂಬ ತೀವ್ರ ಆರಿವು ತನ್ನ ಇಡೀ
ವ್ಯಕ್ತಿತ್ವವನ್ನು ಚಿತ್ರಹಿಂಸೆ ಮಾಡಿ ಕೊಲ್ಲಲಾರಂಭಿಸಿತ್ತು. ತಾನಲ್ಲಿಗೆ ಹೋದುದು
ಬರೇ ಅತಿಥಿ ಎಂದು ; ಭಾಷಣ ಮಾಡಲು ಎಂದು ; ಭಾಷಣ ಮುಗಿದ ನಂತರ ತನ್ನ
ಅಲ್ಲಿನ ಕೆಲಸವೂ ಮುಗಿಯಿತು ; ಅತಿಥಿಯಾಗಿ ಹೋದವಳು ಹಾರ- ತುರಾಯಿಗಳಿಂದ
ಸನ್ಮಾನಿಸಲ್ಪಟ್ಟು ಬಂದ ದಾರಿಯಿಂದಲೇ ಮರಳಬೇಕು, ಹಾಗೆ ಮರಳಿ ಬಂದವಳು
ತಾನು ಮತ್ತೆ ಇಲ್ಲಿಗೆ : ಈ ಹಳೆಯ ಊರಿಗೆ : ಹಳೆಯ ಜಾಗಕ್ಕೆ : ಹಳೆಯ
“ಮನೆಗೆ" ? ಛೇ, ತನಗೆಲ್ಲಿಯ ಮನೆ ? ಮುದುಕ ತಂದೆ ಇದ್ದುದು ತನ್ನ ಅಣ್ಣನ
ಮನೆಯಲ್ಲಿ. ಅಲ್ಲಿಯೂ ತಾನು ಅತಿಥಿಯೇ ಸರಿ ಒಂದು ರೀತಿಯಿಂದ. ತಾನು ಗಳಿಸಿ
ಕೂಡಿಸಿಟ್ಟ ಹಣದಿಂದ ಕಟ್ಟಿಸಿದ ದೊಡ್ಡ ಬಂಗಲೆ- ತನ್ನ ಸ್ವಂತ ಬಂಗಲೆ- ಒಂದಿದೆ
ಊರ ಹೊರಗೆ. ಹೌದು, ಅದು ಬರಿಯ ಬಂಗಲೆ ಮನೆಯಲ್ಲ... ಮನೆಯಲ್ಲ....
ಇದೇನು ಈ ವಯಸ್ಸಿನಲ್ಲಿ ಈ ರಾತ್ರಿಯಲ್ಲಿ ಹೀಗೆ ಸೆಂಟಿಮೆಂಟಲ್ ಆಗಿ
ವಿಚಾರ ಮಾಡುವುದು, ನಾಚಿಕೆಗೇಡು ಎಂದುಕೊಂಡು ನಕ್ಕು ಪ್ರೊ. ಲೀಲಾವತಿ
ಉಳಿದಿದ್ದ ಪತ್ರಗಳಿಗೆ ಉತ್ತರ ಬರೆಯಲೆಂದು ಪೆನ್ ತೆರೆದಳು.
-ರಾತ್ರಿ ಹನ್ನೊಂದು ಗಂಟೆಯಾಗಿ ಹೋಗಿರಬೇಕು. ಹಾಸ್ಟೆಲು ತಣ್ಣಗಾಗಿದೆ.
ಪುಟ:ನಡೆದದ್ದೇ ದಾರಿ.pdf/೪೧
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ