ಪುಟ:ನಡೆದದ್ದೇ ದಾರಿ.pdf/೪೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨೨ ನಡೆದದ್ದೇ ದಾರಿ

ಅನಸ್ತು ಕಮಲಾ, ನೀ ಇನ್ನ ನನ್ನ ಬಿಟ್ಟು ಎಲ್ಲೂ ಹೋಗಬ್ಯಾಡ' ಅಂತ ಬಿಗಿದಪ್ಪಿದ. ನನಗೆ ಏಕದಂ ಖುಶಿಯಾಯಿತು. ಆ ರಾತ್ರಿ ಒಟ್ಟಿಗಿದ್ದಾಗ ಮೂರ್ತಿಯ ವರ್ತನೆಯಲ್ಲಿ ಹೊಸ ಮದುಮಗನ ಹುಮ್ಮಸ್ಸು. ಬಹಳ ದಿನಗಳ ನಂತರ ನನ್ನ ಮೈ ಜುಮ್ ಜುಮ್ ಅಂದಿತ್ತು. ಎ‌‌ಷ್ಟೋ ಹೊತ್ತು ಕಣ್ಣು ಮುಚ್ಚಿಯೇ ಇದ್ದ ನಾನು ನಡುವೆ ಒಮ್ಮೆ ಅರೆಗಣ್ಣು ತೆರೆದೆ. ಯಾಕೋ ಇದ್ದಕಿದ್ದ ಹಾಗೆ ಮೂರ್ತಿಯ ಮುಖ ಗಡುಸಾದ ಹಾಗೆ, ಬಿಗಿದುಕೊಂಡ ಹಾಗೆ ಅನಿಸಿತು. 'ಏನಾತು ಮೂರ್ತಿ ?' ಅಂತ ಕೇಳಿದಕ್ಕೆ 'ಏನೂ ಇಲ್ಲ' ಅಂತ ಒಮ್ಮೆಲೇ ನನ್ನಿಂದ ಬೇರೆಯಾಗಿ ಆ ಕಡೆ ಮುಖ ಹೊರಳಿಸಿ ಮಲಗಿಬಿಟ್ಟ. ಆತನ ಆಕಸ್ಮಿಕ ಅಸಮಾಧಾನದ ಕಾರಣ ತಿಳಿಯದೆ ನಾನೂ ತೆಪ್ಪಗೆ ಮಲಗಿದೆ. ಅರ್ಧರಾತ್ರಿ ಕಳೆದಿರಬೇಕು. ಆಗತಾನೇ ನಿದ್ರೆಯಲ್ಲಿ ಮುಳುಗಿದ್ದ ನನ್ನನ್ನು ಹಿಡಿದು ಬಿರುಸಾಗಿ ಅಲ್ಲಾಡಿಸಿ ಎಬ್ಬಿಸುತ್ತ ನಾನೆಂದೂ ಕೇಳಿರದ ಒರಟು ಧ್ವನಿಯಲ್ಲಿ ಆತ ಕೇಳಿದ, 'ಕಮಲಾ, ನಿನ್ನ ಬಲದ ತೋಡೀಮ್ಯಾಲ ಹಸಿರು ಗುರುತು ಆಗೇದಲ್ಲ, ಅದು ಎಂಥಾದ್ದು ?' 'ಆ ? ಹೂ ?' ಅಂತ ನಾನು ಕನವರಿಸಿದೆ. ನಂತರ 'ಏನು ? ಎಲ್ಲಿ ? ನನಗೇನೂ ಗೊತ್ತಿಲ್ಲ' ಅಂದೆ. ತೊಡೆ ನೋಡಿಕೊಂಡೆ. ಹಸಿರು ಗುರುತು ಆದದ್ದೇನೋ ನಿಜವಿತ್ತು. ಎಲ್ಲಾದರೂ ಏನಾದರೂ ಬಡಿದಿರಬೇಕು ಅಂದೆ. ಆ ಉತ್ತರದಿಂದ ಆತನಿಗೆ ಸಮಾಧಾನವಾಗಲಿಲ್ಲ. ಇಷ್ಟು ಪೆಟ್ಟಾಗುವ ಹಾಗೆ ಬಡಿದದ್ದು ನಿನಗೆ ಹೇಗೆ ಲಕ್ಷ್ಯಕ್ಕೆ ಬಂದಿಲ್ಲ ಅಂದ. ಮತ್ತೆ ಗೊತ್ತಿಲ್ಲ ಅಂದೆ. ನಿದ್ರಿಸಲು ಪ್ರಯತ್ನಿಸಿದೆ. ಆತ 'ಕೋಲ್ಹಾಪೂರಕ್ಕ ಹೋದಾಗ ವಿನೋದ ಸಹಾನಿ ಛಲೋ ಕಂಪನಿ ಕೊಟ್ಟಿರಬೇಕಲ್ಲ?' ಅಂದ. ನನ್ನ ನಿದ್ರೆ ಹಾರಿ ಹೋಯಿತು. ಪೂರಾ ಎಚ್ಚರಾಯಿತು. ಈ ಪ್ರಶ್ನೆಗೂ ನನ್ನ ತೊಡೆಯ ಮೇಲಿನ ಹಸಿರು ಕಲೆಗೂ ಸಂಬಂದ ಕಲ್ಪಿಸುತ್ತ ಮೂತಿ೯ಯ ತಲೆಯಲ್ಲಿ ಆ ಕ್ಷಣದಲ್ಲಿ ನಡೆದಿದ್ದ ವಿಪ್ಲವದ ಅರ್ಥ ಆರೆಕ್ಷಣದಲ್ಲಿ ನನಗೆ ಹೊಳೆದು ಹೋಯಿತು. ಮೈಮೇಲೆ ಯಾರೋ ರಾಡಿ ನೀರನ್ನು ಎರಚಿದಂತಾಯಿತು. ಆತನ ಸಮೀಪ ಮಲಗಿರಲು ಸಾಧ್ಯವಾಗದೆ ಎದ್ದು ಮಂಚದಿಂದಳಿದು ಕೆಳಗೆ ಚಾಪೆಯ ಮೇಲೆ ಮಲಗುತ್ತ ಹೇಳಿದೆ, 'ನಿನ್ನ ಈ ತಪ್ಪು ಕಲ್ಪನೆ, ವ್ಯರ್ಥ ಸಂಶಯಕ್ಕಾಗಿ ದೇವರೇ ನಿನ್ನನ್ನ ಕ್ಷಮಿಸಬೇಕು !' ಆತ ಧಡಕ್ಕನೆ ಎದ್ದ. ಏನಾಗುತ್ತಿದೆಯೆಂದು ನನಗರಿವಾಗುವ