ಇನ್ನಷ್ಟು ಕತೆಗಳು / ಇಲ್ಲಿಂದ ಮುಂದೆಲ್ಲಿ ? ೫೧೩
ವರ್ಗವಾಗಿ ಹೋದಾಗಿನಿಂದಂತೂ ಬಹಳೇ ದೊಡ್ಡವನಾಗಿದ್ದಾನೆ. ಸದಾ ಟ್ಯೂಶನ್,
ಕ್ರಿಕೆಟ್, ಗೆಳೆಯರು ಅಂತ ಹೊರಗೇ ಇರುತ್ತಾನೆ. ಮನೆಯಲ್ಲಿದ್ದಾಗ ತಂದೆಯೊಂದಿಗೆ
ರಾಷ್ಟ್ರೀಯ-ಅಂತರ್ರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಮಾತಾಡುತ್ತಾನೆ. ಯಶಸ್ವಿನಿ
ಏನಾದರೂ ಹೇಳಬಂದರೆ, ನೋ ಮಮಾ, ಯೂ ಕಾಂಟ್ ಅಂಡರ್‌ಸ್ಟ್ಯಾಂಡ್ ದೀಜ್
ಥಿಂಗ್ಸ್ ಅನ್ನುತ್ತಾನೆ. ಅಜ್ಜೀ, ನೀನೇ ಹೋಳು ಹಾಕಿ ಹುಳಿ ಮಾಡು, ಅಂತ ಹೇಳುತ್ತಾನೆ.
ರಾತ್ರಿ ಯಶಸ್ವಿನಿ ಆತನ ಕೋಣೆಗೆ ಹೋಗಿ ಕೂತು ಎಲ್ಲ ಕಡೆ ಹರವಿದ ವಸ್ತುಗಳನ್ನು
ಸರಿಪಡಿಸಲು ತೊಡಗಿದರೆ, ಮಗನಿಗೆ ಮುದ್ದು ಮಾಡಲು ಹೋದರೆ, ನಿನಗೀಗ ರಜೆ
ಇದೆ, ಹೋಗಿ ವಿಶ್ರಾಂತಿ ತಗೋಬಾರದೆ, ಅನ್ನುತ್ತಾನೆ. ದೂರವಾಗುತ್ತಾನೆ. ಆದರೆ
ಗಂಭೀರವಾಗಿ, ಮಮಾ, ಯೂ ನೋ, ನಾನು ಕಂಪ್ಯೂಟರ್ ಇಂಜಿನೀಯರಿಂಗ್
ಮಾಡಬೇಕು ಅಂತ ನಿರ್ಧರಿಸಿದ್ದೇನೆ. ಇನ್ನೂ ಎರಡು ವರ್ಷ ಟೈಮಿದೆ, ಮೆರಿಟ್
ಸೀಟ್ ಸಿಗೋದು ಕಷ್ಟವೇ. ಪೇಮೆಂಟ್ ಸೀಟಿಗಾಗಿ ಹಣ ರೆಡಿ ಮಾಡಿಡು, ಈಗಲೇ
ಹೇಳಿದ್ದೇನೆ ನೋಡು, ಅಂತ ತುಂಬ ದೂರದೃಷ್ಟಿಯುಳ್ಳೆವನ ಹಾಗೆ ಮಾತಾಡುತ್ತಾನೆ.
ಎಂಟು ದಿನ, ಹದಿನೈದು ದಿನ, ಇಪ್ಪತ್ತು ದಿನ... ಯಶಸ್ವಿನಿಗೆ ನಿಜವಾಗಿ
ಆತಂಕವೆನಿಸತೊಡಗಿತು. ಎಂತಹ ವೆಲ್‌ನಿಟ್ ಕುಟುಂಬವಾಗಿತ್ತು ತನ್ನದು. ಮಕ್ಕಳು-
ಗಂಡ ತನಗೆ ಎಷ್ಟು ಹತ್ತಿರವಾಗಿದ್ದರು. ಯಾಕೆ ಹೀಗಾಯಿತು ?
-ಅಥವಾ ಅವರು ಹತ್ತಿರವಾಗಿದ್ದರೆಂಬುದು ತನ್ನದೇ ತಪ್ಪು
ತಿಳುವಳಿಕೆಯಾಗಿತ್ತೇ ?
ಇಲ್ಲ. ಅವರೆಲ್ಲರ ಪ್ರೀತಿಯನ್ನು ಹೀಗೆ ಕಳೆದುಕೊಳ್ಳುತ್ತ ಹೋಗಲು ತಾನು
ತಯಾರಿಲ್ಲ. ವ್ಹಾಲಂಟರಿ ರಿಟಾಯರ್‌ಮೆಂಟ್ ಬಗ್ಗೆ ತಾನೀಗ ಸೀರಿಯಸ್ಸಾಗಿ
ವಿಚಾರಿಸುವುದೊಳಿತು. ಪೆನ್‌ಶನ್ ಅಂತೂ ಸಿಕ್ಕೇ ಸಿಗುತ್ತದೆ. ತನ್ನ ಈ ಪುಟ್ಟ ಸಂಸಾರ
ಸುಖಿಯಾಗಿರಲು, ಕಂಫರ್ಟೆಬಲ್ ಆಗಿರಲು, ಈಗಾಗಲೇ ತಾನು ದುಡಿದು ಗಳಿಸಿದ್ದು
ಸಾಕು. ತಾನಿನ್ನು ಮತ್ತೆ ಮನೆ ಬಿಟ್ಟು ಹೋಗುವುದು ಬೇಡ. ಅತ್ತೆಗೂ ವಯಸ್ಸಾಗಿದೆ.
ತನ್ನ ಸಂಸಾರದ ಭಾರವನ್ನು ಅವರ ಮೇಲೆ ಹೊರಿಸುವುದು ಸರಿಯಲ್ಲ. ಕಣ್ಣಿನಿಂದ
ದೂರವಾದವರು ಮನಸ್ಸಿನಿಂದಲೂ ದೂರವಾಗುತ್ತಾರೆನ್ನುವುದರಲ್ಲಿ ತಥ್ಯವಿದ್ದರೂ
ಇದ್ದೀತು. ಇಲ್ಲ, ತನ್ನ ಜೀವಕ್ಕಿಂತ ಪ್ರಿಯರಾದ ಮನೋಹರ, ಕೀರ್ತಿ, ಕಿರಣರನ್ನು
ಬಿಟ್ಟು ಇನ್ನು ಎಲ್ಲಿಯೂ ಹೋಗಬಾರದು. ಇದೇ ಸರಿ ಅಂತ ಕಾಣುತ್ತದೆ.
ಮನೋಹರನಿಗೂ ಇದು ಸರಿಯೆನಿಸುವುದರಲ್ಲಿ ಸಂಶಯವಿಲ್ಲ. ಪರ್ಫೆಕ್ಟ್
ಅಂಡರ್‌ಸ್ಟ್ಯಾಂಡಿಂಗ್ ಇರುವ ಗಂಡ ಆತ.